

ದಾವಣಗೆರೆ: ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ಫೆ. 8,9ರಂದು ಜರುಗಲಿರುವ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವಕ್ಕೆ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ಹಾಗಾಗಿ ಆರೋಗ್ಯ, ನೈರ್ಮಲ್ಯಕ್ಕೆ ಒತ್ತು ನೀಡುವ ಜತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಇಲಾಖಾಧಿಕಾರಿಗಳು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ರಾಜನಹಳ್ಳಿ ಗುರುಪೀಠದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಇಲಾಖೆಯಿಂದ ಇಲ್ಲಿಗೆ ಮೊಬೈಲ್ ತಂಡ ನಿಯೋಜಿಸಬೇಕು. ಇಲ್ಲಿಯೇ ಆ್ಯಂಬುಲೆನ್ಸ್ ಕಾಯ್ದಿರಿಸುವ ಜತೆಗೆ ಅಗತ್ಯ ಔಷಧ ದಾಸ್ತಾನಿಡಬೇಕೆಂದು ಸೂಚನೆ ನೀಡಿದರು.
ಹೆಚ್ಚು ಜನರು ಆಗಮಿಸುವುದರಿಂದ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು. ನೈರ್ಮಲ್ಯತೆಗಾಗಿ ಮೊಬೈಲ್ ಶೌಚಗೃಹದ ಜತೆಗೆ ಇಲ್ಲಿಗೆ ಬೇಕಾದ ನೀರು ಪೂರೈಸಬೇಕೆಂದು ಇಂಜಿನಿಯರಿಂಗ್ ವಿಭಾಗದವರಿಗೆ ತಿಳಿಸಿದರು.
ಜಾತ್ರಾ ಸಂದರ್ಭದಲ್ಲಿ ಅನಿಯಮಿತ ವಿದ್ಯುತ್ ಪೂರೈಕೆಗಾಗಿ ಹೆಚ್ಚುವರಿಯಾಗಿ ಮೊಬೈಲ್ ಟಿಸಿಗಳ ದಾಸ್ತಾನಿರಿಸಬೇಕು. ವಿದ್ಯುತ್ ಪೂರೈಕೆಗೆ ಅಡಚಣೆಯಾಗಿರುವ ಗಿಡ, ಮರಗಳ ಕೊಂಬೆಗಳನ್ನು ತಂತಿ ಮೇಲೆ ಬೀಳದಂತೆ ಗಮನಹರಿಸಬೇಕು.
ನಿರಂತರ ವಿದ್ಯುತ್ ಪೂರೈಕೆಗಾಗಿ ಬೇಕಾದ ಕೆವಿ ಪ್ರಮಾಣದ ಬಗ್ಗೆ ಅಂದಾಜಿಸಿಕೊಳ್ಳಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ಗಳಿಂದ ಜಾತ್ರಾ ಪೂರ್ವದಲ್ಲಿ ಪರೀಕ್ಷೆ ನಡೆಸಬೇಕೆಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾತ್ರೆಗೆ ಬರುವ ವಾಹನಗಳನ್ನು ಎರಡು ಕಿ.ಮೀ ದೂರದಲ್ಲಿಯೇ ನಿಲುಗಡೆ ಮಾಡಲಾಗುತ್ತಿತ್ತು. ಮಠದ ಆವರಣಕ್ಕೆ ಬರಲು ಸಾಕಷ್ಟು ದೂರವಾಗುವುದರಿಂದ ಹತ್ತಿರದವರೆಗೆ ವಾಹನಗಳು ಬಂದು, ನಂತರ ಮುಂದೆ ಹೋಗಿ ನಿಲುಗಡೆ ಮಾಡಲು ಪರಿಶೀಲನೆ ನಡೆಸಲಾಗುವುದು ಎಂದರು.
ಶಾಸಕ ಹಾಗೂ ಜಾತ್ರಾ ಸಮಿತಿಯ ಅಧ್ಯಕ್ಷ ಬಿ.ದೇವೇಂದ್ರಪ್ಪ ಚಿಕ್ಕಮ್ಮನಹಟ್ಟಿ ಮಾತನಾಡಿ ಜಾತ್ರೆ ಎಂಬುದು ಧಾರ್ಮಿಕ ಪ್ರಕ್ರಿಯೆಯಾಗಿದ್ದರೂ ಸಮುದಾಯದ ಜನರನ್ನು ಒಂದೆಡೆ ಸೇರಿಸಿ ಸಮಾಲೋಚನೆ, ಜಾಗೃತಿ ಮೂಡಿಸುವ, ಸಂಘಟನೆ ಮಾಡುವ ಉದ್ದೇಶವಿದೆ. ಭಕ್ತಾದಿಗಳಿಗೆ ಎಲ್ಲಾ ರೀತಿಯ ಸೌಕರ್ಯ ಕಲ್ಪಿಸಲು ಹಾಗೂ ಜಾತ್ರೆ ಸುಗಮವಾಗಿ ನಡೆಯಲು ಎಲ್ಲರ ಸಹಕಾರ ಪ್ರಮುಖವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಡಾ.ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ ನಾಡಿನಾದ್ಯಂತ ಇರುವ ಸಮುದಾಯದ ಜನರ ಸಂಘಟನೆಯೇ ಮಹರ್ಷಿ ವಾಲ್ಮೀಕಿ ಜಾತ್ರೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಸುರೇಶ್ ಬಿ.ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಧರ್ಮದರ್ಶಿ ಶಾಂತಲಾ ರಾಜಣ್ಣ, ಮುಖಂಡರಾದ ಹೊದಿಗೆರೆ ರಮೇಶ್, ಸಂಚಾಲಕ ಶ್ರೀನಿವಾಸ ದಾಸಕರಿಯಪ್ಪ ಇತರರಿದ್ದರು.