

ದಾವಣಗೆರೆ: ದಾವಣಗೆರೆಯ ಜಿಎಂಐಟಿ ಕಾಲೇಜು ಸಮೀಪದ ಎಕೆಎಸ್ ಕನ್ವೆನ್ಷನ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಪುರುಷರ, ಮಹಿಳೆಯರ ವಿಭಾಗದ ಒಂಬತ್ತು ದಿನಗಳ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭಾನುವಾರ ಚಾಲನೆ ನೀಡಿದರು.
ಸಚಿವರು ಮಾತನಾಡಿ ರಾಷ್ಟ್ರೀಯ ಸ್ಪರ್ಧೆ ಮೊದಲ ಬಾರಿಗೆ ದಾವಣಗೆರೆಯಲ್ಲಿ ನಡೆಯುತ್ತಿದೆ. ಎಲ್ಲರಿಗೂ ಒಳ್ಳೆದಾಗಲಿ. ಮುಂದಿನ ಬಾರಿ ವಿಶ್ವ ಮಟ್ಟದ ಸ್ಪರ್ಧೆಯನ್ನು ದಾವಣಗೆರೆಯಲ್ಲಿ ನಡೆಸೋಣ ಎಂದು ಭರವಸೆ ನೀಡಿದರು.
ನಿರೀಕ್ಷಿತ ಮಟ್ಟದಲ್ಲಿ ಸ್ಪರ್ಧಾಳುಗಳು ಕಾಣುತ್ತಿಲ್ಲ. ಪವರ್ ಲಿಫ್ಟಿಂಗ್ ಮತ್ತು ವೇಯ್ಟ ಲಿಫ್ಟಿಂಗ್ ನಡುವೆ ಸಾಕಷ್ಟು ತಪ್ಪು ಕಲ್ಪನೆಗಳಿವೆ. ಇದನ್ನು ಹೋಗಲಾಡಿಸುವ ಜವಾಬ್ದಾರಿ ಅಸೋಸಿಯೇಷನ್ ಮೇಲಿದೆ. ಒಲಿಂಪಿಕ್‌ನಲ್ಲಿ ಸ್ಪರ್ಧಿಸುವ ಅವಕಾಶ ಇಲ್ಲಿನ ಕ್ರೀಡಾಪಟುಗಳಿಗೆ ಸಿಗುವಂತಾಗಲಿ ಎಂದು ಸಚಿವರು ಆಶಿಸಿದರು.
ಗ್ರೂಪ್ ಆಫ್ ಐರನ್ ಗೇಮ್ಸ್-ದಾವಣಗೆರೆ ಹಾಗೂ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಸ್ಪರ್ಧೆಗಳು ಆಯೋಜನೆಯಾಗಿವೆ. ಹಿರಿಯರು, ಕಿರಿಯರು ಹಾಗೂ ಸಬ್ ಜೂನಿಯರ್ ಎಂಬ ಮೂರು ಕೆಟಗರಿಯಲ್ಲಿ, 59ರಿಂದ 125 ಕೆಜಿವರೆಗೆ ದೇಹ ತೂಕದ ಆಧಾರದಡಿ 9 ವಿಭಾಗವಾರು ಸ್ಪರ್ಧೆಗಳು ನಡೆಯಲಿವೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ರಾಷ್ಟ್ರೀಯ ಅಧ್ಯಕ್ಷ ಸತೀಶ್‌ಕುಮಾರ್ ಕುದ್ರೋಳಿ, ಅರ್ಜುನ್ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಪಿ.ಜೆ. ಜೋಸೆಫ್,ಏಕಲವ್ಯ ಪ್ರಶಸ್ತಿ ಪುರಸ್ಕೃತ ಪಟು ಕೆ.ಎನ್. ಶೈಲಜಾ, ಎಸ್ಪಿ ಉಮಾ ಪ್ರಶಾಂತ್, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಪವರ್‌ಲಿಫ್ಟಿಂಗ್ ಇಂಡಿಯಾ ಉಪಾಧ್ಯಕ್ಷ ಪೂರಣ್ ಸಿಂಗ್ ಕದ್ಯಾನ್, ಬಿ. ದಾದಾಪೀರ್. ಎಚ್. ದಾದಾಪೀರ್, ರಜ್ವಿಖಾನ್ ಇತರರಿದ್ದರು. ಸೋಮವಾರದಿಂದ ಆಯಾ ಕೆಟಗರಿವಾರು ಸ್ಪರ್ಧೆಗಳು ನಡೆಯಲಿವೆ.