ಶುಕ್ರವಾರ ಈಶ್ವರೀಯ ವಿವಿಯ ಅಂಚೆ ಲಕೋಟೆ ಬಿಡುಗಡೆ

1000984504.jpg
Published on

ದಾವಣಗೆರೆ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿವಿಯ ದಾವಣಗೆರೆ ಶಾಖೆ 50ನೇ ವರ್ಷಾಚರಣೆ ಸ್ಮರಣಾರ್ಥ, ಅಂಚೆ ಇಲಾಖೆಯು ವಿಶೇಷ ಲಕೋಟೆಯೊಂದನ್ನು ಹೊರತಂದಿದೆ. ಶಿವಧ್ಯಾನ ಮಂದಿರದಲ್ಲಿ ಶುಕ್ರವಾರ ಬೆಳಗ್ಗೆ 10-30ಕ್ಕೆ ಇದರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ದಾವಣಗೆರೆ ಅಂಚೆ ಇಲಾಖೆಯ ಅಧೀಕ್ಷಕ ಚಂದ್ರಶೇಖರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. 2022ರ ಮೇ ತಿಂಗಳಲ್ಲಿ ದಾವಣಗೆರೆ ಅಂಚೆ ವಿಭಾಗವು ಕಾರ್ಯಾರಂಭ ಮಾಡಿದ್ದು ಈ ವಿಭಾಗದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಲಕೋಟೆ ಇದಾಗಿದೆ ಎಂದರು.

ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಪ್ರಧಾನ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಅವರು ಈಶ್ವರೀಯ ವಿವಿ ಲಕೋಟೆಯನ್ನು, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಅಂಚೆ ಚೀಟಿಗಳ ಸಂಗ್ರಹಣಾ ಆಲ್ಬಮ್ ಬಿಡುಗಡೆ ಮಾಡುವರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸಮಾರಂಭ ಉದ್ಘಾಟಿಸುವರು.

ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕದ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಂದ್ರಶೇಖರ್ ಕಕುಮನು ಅವರು ವಿಶೇಷ ಅತಿಥಿಯಾಗಿದ್ದು, ಬ್ರಹ್ಮಾಕುಮಾರಿ ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಮಾತನಾಡಿ ತಾವು ಈ ಹಿಂದೆ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಸಹಾಯಕರಾಗಿ ಕೆಲಸ ಮಾಡಿದ್ದು, ಇದರ ಅನುಭವದ ಹಿನ್ನೆಲೆಯಲ್ಲಿ ಈ ಲಕೋಟೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ಇದಕ್ಕೆ ಸಮ್ಮತಿಸಿರುವುದು ನಮ್ಮ ಸಂಸ್ಥೆಗೆ ಸಲ್ಲಿಸಿದ ಗೌರವವಾಗಿದೆ ಎಂದರು.

ಅಂಚೆ ಇಲಾಖೆ ಸಹಾಯಕ ಅಧೀಕ್ಷಕ ಬಿ.ಗುರುಪ್ರಸಾದ್ ಮಾತನಾಡಿ, ಈ ಲಕೋಟೆಯ 2 ಸಾವಿರ ಪ್ರತಿಗಳನ್ನು ಮುದ್ರಿಸಲಾಗಿದೆ. ಲಕೋಟೆ ಹಿಂದೆ ಮೂರು ಭಾಷೆಯಲ್ಲಿ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ. ಆಸಕ್ತರು ಬಯಸಿದರೆ ಮೈ ಸ್ಟಾೃಂಪ್ ಹೆಸರಲ್ಲಿ ನಿಗದಿತ ಬೆಲೆಗೆ 12 ಸ್ಟಾೃಂಪ್‌ಗಳನ್ನು ಒದಗಿಸಿಕೊಡಲಿದೆ ಎಂದರು.

ಅಂಚೆ ಇಲಾಖೆಯ ಮಾರುಕಟ್ಟೆ ಪ್ರತಿನಿಧಿ ಸಂತೋಷ್ ಮಾತನಾಡಿ ದಾವಣಗೆರೆ ಜಿಲ್ಲೆಯ ಐತಿಹಾಸಿಕ ಸ್ಥಳಗಳಾದ ಸಂತೇಬೆನ್ನೂರು ಪುಷ್ಕರಣಿ, ಕೊಂಡುಕುರಿ ಅಭಯಾರಣ್ಯ, ಶಾಂತಿಸಾಗರ ಕೆರೆ, ಗಾಜಿನಮನೆ ಹಾಗೂ ಹರಿಹರೇಶ್ವರ ದೇವಾಲಯ ಇವನ್ನು ಶಾಶ್ವತ ಅಂಚೆ ಮುದ್ರೆಯಾಗಿಸುವ ಸಂಬಂಧ ಕೇಂದ್ರ ಅಂಚೆ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪತ್ರಕರ್ತ ಇ.ಎಂ. ಮಂಜುನಾಥ್, ಹೇಮಂತ್ ಇದ್ದರು.

--------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net