ನನಸಾಗದ ಮಹಿಳಾ ರಾಜಕೀಯ ಸಬಲೀಕರಣ ಸಾಹಿತಿ ಕೆ. ಷರೀಫಾ ವಿಷಾದ

1000260772.jpg
Published on

ದಾವಣಗೆರೆ: ಲಿಂಗಾನುಪಾತದಲ್ಲಿ ಪ್ರತಿ ಸಾವಿರ ಸಂಖ್ಯೆಯ ಪುರುಷರಿಗೆ 940ರಷ್ಟು ಮಹಿಳೆಯರಿದ್ದೇವೆ. ಆದರೂ ನಾವಿನ್ನೂ ರಾಜಕೀಯ ಸಬಲೀಕರಣವಾಗಿಲ್ಲ ಎಂದು ಸಾಹಿತಿ ಕೆ. ಷರೀಫಾ ವಿಷಾದ ವ್ಯಕ್ತಪಡಿಸಿದರು.  
ನಗರದ ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಮಹಿಳಾ ಸಬಲೀಕರಣ ಮತ್ತು ಮೀಸಲಾತಿ’ ವಿಷಯ ಕುರಿತು ಮಾತನಾಡಿದರು.
ಪುರುಷರು ದೇಶಕ್ಕೆ ಬೆವರನ್ನು ಹರಿಸಿದರೆ, ಮಹಿಳೆ, ಸಂತಾನದ ಮೂಲಕ ದೇಶಕ್ಕೆ ರಕ್ತವನ್ನೇ ಕೊಡುತ್ತಾಳೆ. ಆದರೆ ಇಂದು ಮಹಿಳಾ ಸಂಸತಿ ಕ್ಷೀಣಿಸುತ್ತಿದೆ. ಅತ್ಯಾಚಾರ, ದೌರ್ಜನ್ಯ, ಭ್ರೂಣಹತ್ಯೆ ವ್ಯಾಪಕವಾಗಿದೆ. ಆಸಿಡ್ ದಾಳಿ, ಮರ್ಯಾದಾ ಹತ್ಯೆಗಳು ನಿರಂತರವಾಗಿದೆ ಎಂದು ಹೇಳಿದರು.
ಸಬಲೀಕರಣ ಎಂದರೆ, ಮಹಿಳೆಯರು ಮನೆಯಿಂದ ಹೊರಬರುವುದು, ಪುರುಷರನ್ನು ಮೀರಿ ಬೆಳೆಯುವುದಲ್ಲ. ಲಿಂಗ ಸಮಾನತೆ ಸಾಧಿಸುವ ಜತೆಗೆ ಅಧಿಕಾರ ಕೇಂದ್ರಿತ ವಲಯಗಳಲ್ಲಿ ಮಹಿಳೆಯರಿಗೆ ಅಧಿಕಾರ ಕೊಡಿಸುವುದು ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಮಹಿಳಾಶಕ್ತಿ ಸದ್ಬಳಕೆ ಹಾಗೂ ರಾಜಕೀಯ ಮೀಸಲಾತಿ ನೀಡುವುದಾಗಿದೆ ಎಂದು ವ್ಯಾಖ್ಯಾನಿಸಿದರು.
ಆದರೆ ಇಂದು ಮಹಿಳೆಯರನ್ನು ಮೌಢ್ಯದಲ್ಲಿ ಮುಳುಗಿಸಲಾಗಿದ್ದು, ಜಾತಿ, ಧರ್ಮದ ಕಟ್ಟುಪಾಡುಗಳಿಂದ ವೈಜ್ಞಾನಿಕವಾಗಿ ಚಿಂತಿಸದಂತೆ ಕಟ್ಟಿ ಹಾಕಲಾಗಿದೆ. ಹಣ, ಅಧಿಕಾರ, ಅಂತಸ್ತಿನಿಂದಲೂ ಮಹಿಳೆ ವಂಚಿತಳಾಗಿದ್ದಾಳೆ. ಇದುವರೆಗೆ (ಹಿಸ್ ಸ್ಟೋರಿ) ಅವನ ಚರಿತ್ರೆ ಇತ್ತು, ಇನ್ನು ಮುಂದೆ ಅವಳ ಚರಿತ್ರೆ ಬರೆಯಲು ಕೈಗಳು, ಮನಸ್ಸು ಹಾಗೂ ಧೈರ್ಯ, ತಿಳಿವಳಿಕೆ ಹಾಗೂ ವೈಚಾರಿಕ, ಬೌದ್ಧಿಕ ಜ್ಞಾನ ಬೇಕು. ಆಗ ಮಾತ್ರ ಸಬಲೀಕರಣ ಸಾಧ್ಯ ಎಂದು ಹೇಳಿದರು.
ಮಹಿಳೆಯರು ಒಂದಾದರೆ ಅಧಿಕಾರ ಸಿಗದು ಎಂಬ ಭಯ ಪುರುಷ ವಲಯದಲ್ಲಿದೆ. ಆದರೆ ಲಿಂಗ ತಾರತಮ್ಯ ಅಳಿಸಲು ಹಾಗೂ ಸಬಲೀಕರಣ ಸಾಧಿಸಲು ನಾವಿಂದು ಒಂದಾಗಬೇಕಿದೆ ಎಂದು ಆಶಿಸಿದರು.
ಜಾಗತೀಕರಣ, ಖಾಸಗೀಕರಣ, ಉದಾರೀಕರಣಗಳು ಇಂದು ನಮ್ಮ ಮುಂದಿರುವ ಕಣ್ಣಿಗೆ ಕಾಣದ ಶತ್ರುಗಳಾಗಿ ನಮ್ಮ ಬದುಕನ್ನು ಪ್ರವೇಶಿಸಿವೆ. ತಾಯಿಯ ಗರ್ಭವನ್ನೂ ಮಾರುಕಟ್ಟೆ ವಸ್ತುವನ್ನಾಗಿ ಮಾಡಿರುವ ಕ್ರೌರ್ಯ ಜಾಗತೀಕರಣಕ್ಕಿದೆ. ಗಂಡ ಮಾಡಿದ ಸಾಲ ತೀರಿಸಲು ಗಾರ್ಮೆಂಟ್ ಕೆಲಸದ ಮಹಿಳೆಯರು ಗರ್ಭವನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
1996ರಲ್ಲಿ ದೇವೇಗೌಡರು ಸಂಸತ್ತಿನಲ್ಲಿ ಪ್ರಸ್ತಾವ ಮಾಡಿದ್ದ ಮಹಿಳಾ ಮೀಸಲು ವಿಚಾರ 27 ವರ್ಷದವರೆಗೆ ಚರ್ಚೆಯಾಗಲೇ ಇಲ್ಲ. ಮಹಿಳಾ ಮೀಸಲಾತಿ ಇಂದಿನ ರಾಜಕೀಯ ವಲಯಗಳಿಗೆ ಚುನಾವಣಾ ಗಿಮಿಕ್ ಆಗಿದೆ.
ದಲಿತ ಮಹಿಳೆಯರಿಗೆ ಮೀಸಲಾತಿ ಸಿಕ್ಕ ನಂತರ ಮೇಲ್ವರ್ಗದವರಲ್ಲಿ ಸಂಕಟ ಶುರುವಾಗಿದೆ. ಬಿಹಾರದಲ್ಲಿ ದಲಿತ ಮಹಿಳೆಯ ಬೆತ್ತಲೆ ಮೆರವಣಿಗೆಯಂತಹ  ಹೀನ ಕೃತ್ಯಕ್ಕೆ ಸಾಕ್ಷಿಯಾಯಿತು ಎಂದರು.
ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಜಾರಿಗೊಳಿಸಲು ಜನಗಣತಿ ಹಾಗೂ ಕ್ಷೇತ್ರ ವಿಂಗಡಣೆ ಎಂಬೆರಡು ಕೊಕ್ಕೆಗಳನ್ನೂ ಹಾಕಿದೆ.  ರಾಜಕೀಯ ಇಚ್ಛಾಶಕ್ತಿ ಇಲ್ಲದ ವಿಧೇಯಕ ಯಾಕೆ ಬೇಕು ಎಂದು ಕಿಡಿ ಕಾರಿದರು.
ಸಾವಿತ್ರಿ ಬಾಯಿ ಫುಲೆ, ಫಾತಿಮಾ ಶೇಖ್ ಅವರು ಮಾಡಿದ ಶೈಕ್ಷಣಿಕ ಕ್ರಾಂತಿಯಿಂದಾಗಿ ಮಹಿಳೆಯರು ಮುಖ್ಯವಾಹಿನಿಗೆ ಬರಲು ಸಾಧ್ಯವಾಯಿತು. ಪುರುಷ ಪ್ರಾಧ್ಯಾನದ ಅಡಿಯಲ್ಲಿನ ಇಂದಿನ ಸಮಾಜವನ್ನು ತಿರಸ್ಕರಿಸುವ  ಮಹಿಳೆಗೆ ಗಯ್ಯಳಿ ಎಂಬ ಪದವಿ ನೀಡಲಾಗುತ್ತಿದೆ. ನಾವು ಇದರಿಂದ ಹೊರಬಂದು ಸಮಾಜ ಸುಧಾರಕರು ಎಂಬುದನ್ನು ಸಾಬೀತುಪಡಿಸಬೇಕು ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಜೆ.ಎಚ್. ಪಟೇಲ್ ಫೌಂಡೇಷನ್, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಚಾರ್ಯ ಟಿ.ಎ. ಕುಸಗಟ್ಟಿ, ಪ್ರಾಧ್ಯಾಪಕಿ ಪ್ರೊ. ಪದ್ಮಾ ಟಿ. ಚಿನ್ಮಯಿ, ಅನ್ನಪೂರ್ಣಾ, ನಿವೃತ್ತ ಉಪನ್ಯಾಸಕ ಶಿವಕುಮಾರ್ ಜೋಗಿಹಳ್ಳಿ, ಸಾಂಸ್ಕೃತಿಕ ಸಮಿತಿ ಸದಸ್ಯ ಶಂಷುದ್ದೀನ್ ಖಾನ್, ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಸದಸ್ಯೆ ಸೋನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net