

ದಾವಣಗೆರೆ: ಪೊಲೀಸ್ ಸಿಬ್ಬಂದಿ ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ಪೂರ್ವವಲಯದ ಪೊಲೀಸ್ ಉಪ ಮಹಾ ನಿರೀಕ್ಷಕ ಬಿ. ರಮೇಶ್ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ಮಾತನಾಡಿದರು.
ಆರೋಗ್ಯವೇ ಭಾಗ್ಯ. ಸಿಬ್ಬಂದಿ ದೈಹಿಕ ಆರೋಗ್ಯ ಇಲ್ಲವಾದಲ್ಲಿ ಅವರ ಕುಟುಂಬ ಬೀದಿಪಾಲಾಗಲಿದೆ. ಹಾಗಾಗಿ ಎಚ್ಚರಿಕೆ ವಹಿಸಬೇಕು. ಮಹಿಳಾ ಸಿಬ್ಬಂದಿ ಕೂಡ ಮಕ್ಕಳಾದ ನಂತರದಲ್ಲಿ ಶಾರೀರಿಕ ಸ್ವಾಸ್ಥೃಕ್ಕೆ ಒತ್ತು ನೀಡಬೇಕು. ಕುಟುಂಬದ ಜತೆ ಸಮಯ ಮೀಸಲಿಡಿ ಎಂದು ಹೇಳಿದರು.
ಯಾವುದೇ ಇಲಾಖೆಯೂ ಮಾಡದ ಕೆಲಸವನ್ನು ಪೊಲೀಸ್ ಇಲಾಖೆ ನಿರ್ವಹಿಸುತ್ತಿದೆ. ಕೊಳೆತ ಶವದ ಬಳಿ ಹೋಗಿ ತನಿಖೆ ಮಾಡುವುದರಿಂದ ಹಿಡಿದು ಸಾರ್ವಜನಿಕರು ಹೋಗಲಾಗದ ಸ್ಥಳಕ್ಕೂ ಹೋಗಿ ಅಧಿಕಾರಿ-ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಾರೆ.
ಪೇದೆ, ಮುಖ್ಯಪೇದೆ ಹಾಗೂ ಎಎಸ್‌ಐಗಳು ಇಲಾಖೆಯ ಆಧಾರಸ್ತಂಭಗಳು. ಮನೆ-ಕಚೇರಿ ಒತ್ತಡದ ನಡುವೆಯೂ ವಹಿಸಿದ ಜವಾಬ್ದಾರಿಯನ್ನು ನಿರಾಕರಿಸದೇ ಹಗಲು, ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ ಎಂದರು.
ದಾವಣಗೆರೆ ಗಣೇಶೋತ್ಸವದ ಸಂದರ್ಭದಲ್ಲಿ 10 ದಿನಗಳ ಕಾಲ ಅಧಿಕಾರಿ, ಸಿಬ್ಬಂದಿ ಮನೆಗೆ ತೆರಳದೇ ಉತ್ತಮ ಕಾರ್ಯ ನಿರ್ವಹಿಸಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಯಾವುದೇ ತೊಂದರೆಯಾಗದಂತೆ ಬಂದೋಬಸ್ತ್ ಮಾಡಿ ಜಿಲ್ಲೆಗೆ ಹೆಸರು ತಂದಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯಕುಮಾರ್ ಎಂ. ಸಂತೋಷ, ಜಿ. ಮಂಜುನಾಥ ಇದ್ದರು.
ಮೂರು ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿದ ದಾವಣಗೆರೆ ನಗರ ಉಪವಿಭಾಗ ಸಮಗ್ರ ಪ್ರಶಸ್ತಿ ಪಡೆದುಕೊಂಡಿತು. ಇದೇ ಉಪವಿಭಾಗದ ಮಾಲತಿಬಾಯಿ ಹಾಗೂ ಅಜೋಳ ಉಮೇಶ್ ಕ್ರಮವಾಗಿ ಮಹಿಳಾ ಹಾಗೂ ಪುರುಷರ ವಿಭಾಗದ ಚಾಂಪಿಯನ್ನರಾಗಿ ಹೊರ ಹೊಮ್ಮಿದರು.