ಪೊಲೀಸ್ ಚಿಣ್ಣರ ಅಂಗಳ ಶಾಲೆ ಉದ್ಘಾಟನೆ   ಗುಣಮಟ್ಟದ ಶಿಕ್ಷಣಕ್ಕೆ ಗಮನ: ಎಸ್ಪಿ ಉಮಾ ಪ್ರಶಾಂತ್

1000157189.jpg
Published on

ದಾವಣಗೆರೆ: ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆ ಮಾದರಿಯಲ್ಲೇ ಪೊಲೀಸ್ ಚಿಣ್ಣರ ಅಂಗಳ ಶಾಲೆಯಲ್ಲೂ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.
ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪಿ.ಜೆ. ಬಡಾವಣೆಯ ಕಟ್ಟಡಕ್ಕೆ ಸ್ಥಳಾಂತರಿಸಲಾದ ಪೊಲೀಸ್ ಚಿಣ್ಣರ ಅಂಗಳ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೂ. 3ರಿಂದ ಶಾಲೆ ಆರಂಭವಾಗುತ್ತಿದ್ದು, ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಮಕ್ಕಳಿಗೆ ಶೀಘ್ರವೇ ಆಟದ ಸಾಮಗ್ರಿಗಳನ್ನು  ಅಳವಡಿಸಲಾಗುವುದು. ಒಟ್ಟು 60 ಸೀಟು ಇದ್ದು ಪೊಲೀಸ್ ಅಧಿಕಾರಿ- ಸಿಬ್ಬಂದಿ ಮಕ್ಕಳಿಗೆ ಆದ್ಯತೆ ನೀಡಲಾಗಿದೆ. ಸೀಟುಗಳು ಉಳಿದಲ್ಲಿ ಸಾರ್ವಜನಿಕರಿಗೆ ಕಲ್ಪಿಸಲಾಗುವುದು.
ಪೊಲೀಸ್ ವಸತಿಗೃಹದಲ್ಲಿ ಒಟ್ಟು 500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ-ಸಿಬ್ಬಂದಿ ಇದ್ದಾರೆ. ಅವರು ತಮ್ಮ ಮಕ್ಕಳು ಸಾಮಾನ್ಯ ಶಾಲೆಗೆ ಸೇರಿಸಲು ದೂರ ಹಾಗೂ ಸಮಯದ ಕೊರತೆಇದೆ. ಹೀಗಾಗಿ ಹತ್ತಿರದಲ್ಲೇ ವ್ಯವಸ್ಥೆ ಕಲ್ಪಿಸಲು ಈ ಶಾಲೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಕರ್ನಾಟಕ ಪೊಲೀಸ್ ಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್ ಅಡಿಯಲ್ಲಿ ಈ ಶಾಲೆ ಕಾರ್ಯ ನಿರ್ವಹಿಸಲಿದೆ. ಪ್ರೀ ಕೆಜಿ, ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಹಿನ್ನೆಲೆಯಲ್ಲಿ ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆಯ ಸೀಟಿಗಾಗಿ ಸಾರ್ವಜನಿಕರಿಂದಲೂ ಬೇಡಿಕೆ ಬರುತ್ತಿದೆ. ಈ ಶಾಲೆಯಲ್ಲಿ ಇದುವರೆಗೆ ಇದ್ದ 200 ಮಕ್ಕಳ ಪ್ರವೇಶಾವಕಾಶವನ್ನು ಈ ವರ್ಷದಿಂದ 430ಕ್ಕೆ ವಿಸ್ತರಿಸಲಾಗಿದೆ ಎಂದು ಹೇಳಿದರು.
ಐಜಿಪಿ ಪತ್ನಿ ಸಂಗೀತಾ ತ್ಯಾಗರಾಜನ್ ಶಾಲೆಗೆ ಚಾಲನೆ ನೀಡಿದರು.  ಪೂರ್ವವಲಯದ ಐಜಿಪಿ ಡಾ. ಕೆ. ತ್ಯಾಗರಾಜನ್, ಎಎಸ್ಪಿ ವಿಜಯಕುಮಾರ್ ಎಂ. ಸಂತೋಷ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬಿ.ಮಂಜುನಾಥ, ಗ್ರಾಮಾಂತರ ಡಿವೈಎಸ್ಪಿ ಪ್ರಶಾಂತ್ ಸಿದ್ದನಗೌಡರ್ ಇದ್ದರು. ಶಿಕ್ಷಕಿ ಪಲ್ಲವಿ ಸ್ವಾಗತಿಸಿದರೆ,  ಕೊಂಡಜ್ಜಿ ಪಬ್ಲಿಕ್ ಶಾಲೆ ಪರಾಚಾರ್ಯ ಯತೀಶ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net