ಅಭಯ ಮೂಡಿಸಿದ ಪೊಲೀಸ್ ಪಥ ಸಂಚಲನ

1000387597.jpg
Published on

ದಾವಣಗೆರೆ: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಗುರುವಾರ ಸಂಭವಿಸಿದ್ದ ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಪಾಲನೆ ಹಾಗೂ ಸಾರ್ವಜನಿಕರಲ್ಲಿ ಭಯಮುಕ್ತ ವಾತಾವರಣ ಮೂಡಿಸಲು ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಶುಕ್ರವಾರ ಪೊಲೀಸ್ ಪಥ ಸಂಚಲನ ಆಯೋಜಿಸಲಾಗಿತ್ತು.
ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಿಂದ ಆರಂಭವಾದ ಪಥ ಸಂಚಲನ, ಅರಳಿಮರ ವೃತ್ತ, ಆಜಾದ್ ನಗರ, ಬಾಷಾ ನಗರ, ಹಳೆ ಬೇತೂರು ರಸ್ತೆ, ಹಗೆದಿಬ್ಬ ವೃತ್ತ, ದುರ್ಗಾಂಬಿಕಾ ದೇವಸ್ಥಾನದ ಮೂಲಕ ಸಾಗಿ ವೀರಮದಕರಿನಾಯಕ ವೃತ್ತದಲ್ಲಿ ಅಂತ್ಯಗೊಂಡಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಡಿಎಆರ್ ಡಿವೈಎಸ್ಪಿ ಪಿ.ಬಿ.ಪ್ರಕಾಶ್, ಪೊಲೀಸ್ ನಿರೀಕ್ಷಕರಾದ ಗುರುಬಸವರಾಜ, ನೆಲವಾಗಲು ಮಂಜುನಾಥ, ಅಶ್ವಿನ್‌ಕುಮಾರ,  ಸುನೀಲ್ ಕುಮಾರ್, ನೂರ್ ಅಹಮ್ಮದ್, ಪ್ರಭಾವತಿ, ಮಲ್ಲಮ್ಮ ಚೌಬೆ ಇತರರು ಪಾಲ್ಗೊಂಡಿದ್ದರು.
---

ಶಾಂತಿ ಭಂಗ ತಂದವರ ಬಂಧನಕ್ಕೆ ಆಗ್ರಹ ದಾವಣಗೆರೆಯಲ್ಲಿ ಅಶಾಂತಿ ಸೃಷ್ಟಿಸಿದವರನ್ನು ಬಂಧಿಸಿ ಗಡಿಪಾರು ಮಾಡಬೇಕು. ಅಮಾಯಕರನ್ನು ಬಂಧಿಸಬಾರದು ಎಂದು ಆಗ್ರಹಿಸಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಡಿಜಿಪಿ ಆರ್. ಹಿತೇಂದ್ರ ಮತ್ತು  ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಪ್ರಚೋದನಕಾರಿ ಹೇಳಿಕೆ ನೀಡಿದ ಸತೀಶ್ ಪೂಜಾರಿ  ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಸ್.ಟಿ.ವೀರೇಶ್, ರಾಜನಹಳ್ಳಿ ಶಿವಕುಮಾರ್, ಜೊಳ್ಳಿಗುರು, ಎಂ.ವೀರೇಶ್, ಲೋಕಿಕೆರೆ ನಾಗರಾಜ್ ಮತ್ತು ಇತರರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು.
ಅಹ್ಮದ್ ನಗರದಲ್ಲಿ ಬಾವುಟ ಕಟ್ಟುವ ವಿಚಾರದಲ್ಲಿ ವಾಗ್ವಾದ ನಡೆದಿದ್ದು ಪೊಲೀಸರು ದೂರು ದಾಖಲಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಮರುದಿನ ನಗರಪಾಲಿಕೆ ಎದುರು ಪ್ರತಿಭಟನೆಯಲ್ಲಿ ಸತೀಶ್ ಪೂಜಾರಿ ಹಾಗೂ ಇತರರು ಒಂದು ಕೋಮಿನ ವಿರುದ್ಧ ನೀಡಿದ ಹೇಳಿಕೆ ವಿಡಿಯೋ ವೈರಲ್ ಆಗಿದ್ದು ಆಜಾದ್ ನಗರ ಮತ್ತು ಪಿಜೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದವು.
ಬೇತೂರು ರಸ್ತೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದ ಸತೀಶ್ ಪೂಜಾರಿ ವಿರುದ್ಧ ಎಫ್‌ಐಆರ್ ಆದರೂ ಬಂಧಿಸಲಾಗಿಲ್ಲ. ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಯಹಿಯಾ, ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮದ್, ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್,ಇಸ್ಮಾಯಿಲ್ ಜಬಿವುಲ್ಲಾ, ಮನ್ಸೂರ್ ಅಲಿ,  ದಾದಾಪೀರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net