ಬಣ್ಣದಾಟದಲ್ಲಿ ಬಂದಿಯಾದ ಪೊಲೀಸರು!

1000765948.jpg
Published on

ದಾವಣಗೆರೆ: ಅಪರಾಧ ಜಗತ್ತಿನ ಸುತ್ತ ಕಾರ್ಯಾಚರಣೆ ನಡೆಸುವ, ಕೆಲವು ಸಂದರ್ಭದಲ್ಲಿ ಬಂದೋಬಸ್ತ್ ನಿರ್ವಹಿಸುವ ಪೊಲೀಸರಿಗೆ ಬಿಡುವಿಲ್ಲ. ಆದರೆ, ಮಂಗಳವಾರ ಬೆಳಗ್ಗೆ ಕೆಲ ಸಮಯ ಕರ್ತವ್ಯ ಬದಿಗಿಟ್ಟ ಆರಕ್ಷಕ ಅಧಿಕಾರಿ- ಸಿಬ್ಬಂದಿ ಮೊದಲ ಬಾರಿಗೆ ಹೋಳಿ ಹಬ್ಬದಲ್ಲಿ ಮಿಂದರು.

ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ, ಸಾಮಾನ್ಯ ದಿರಿಸಿನಲ್ಲಿ ಕಾಣಿಸಿಕೊಂಡ ಪೊಲೀಸರು ತಮ್ಮ ಕುಟುಂಬಸ್ಥರು, ಮಕ್ಕಳೊಂದಿಗೆ ಬಣ್ಣದಾಟ ಆಡಿದರು. ಅಧಿಕಾರಿ-ಸಿಬ್ಬಂದಿ ಹಾಗೂ ವಯೋಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಓಕಳಿ ರಂಗಿನ ಉತ್ಸಾಹದಲ್ಲಿ ಕೆಲ ಸಮಯ ಕಳೆದರು.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ ಎಂ. ಸಂತೋಷ್, ಜಿ.ಮಂಜುನಾಥ್ ಅವರು ಬಣ್ಣದಾಟಕ್ಕೆ ಚಾಲನೆ ನೀಡಿ ಪೊಲೀಸ್ ಸಿಬ್ಬಂದಿಯೊಂದಿಗೆ ಹೋಳಿಯಾಟದಲ್ಲಿ ಬೆರೆತರು. ಪತ್ರಕರ್ತರು ಕೂಡ ಭಾಗಿಯಾಗಿದ್ದರು. ಡಿಜೆ ಹಾಡುಗಳ ಸದ್ದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಗಣೇಶ, ಹೋಳಿ ಹಬ್ಬಕ್ಕೆ ಸಂಬಂಧಿಸಿದ ದೊಡ್ಡ ಸಭೆ ಮತ್ತು ಮೆರವಣಿಗೆಗಳನ್ನು ಪರಿಗಣಿಸಿ, ಪೊಲೀಸರು ಜಿಲ್ಲೆಯಾದ್ಯಂತ ಭದ್ರತೆಯಲ್ಲಿ ತೊಡಗಿದ್ದರು. ಮಾ.13 ಮತ್ತು 14 ರಂದು ಜಿಲ್ಲಾದ್ಯಂತ ಬಂದೋಬಸ್ತ್ ಮಾಡಿದ್ದ ಪೊಲೀಸರು ಹೋಳಿ ಹಬ್ಬವನ್ನು ಶಾಂತಿಯುತವಾಗಿಸಲು ಶ್ರಮಿಸಿದ್ದಾರೆ. ಹೀಗಾಗಿ ಪೊಲೀಸ್ ಸಿಬ್ಬಂದಿಗೆ ಪ್ರತ್ಯೇಕ ಹೋಳಿ ವ್ಯವಸ್ಥೆ ಮಾಡಿದ್ದಾಗಿ ಎಸ್ಪಿ ಉಮಾ ಪ್ರಶಾಂತ್ ಹೇಳಿದರು.

ನಾವು ನಮ್ಮ ಸಿಬ್ಬಂದಿ ಹಾಗೂ ಪತ್ರಕರ್ತರೊಂದಿಗೆ ಹೋಳಿ ಆಚರಿಸುತ್ತಿದ್ದೇವೆ. ಅದು ಒಂದು ಸಂಪ್ರದಾಯ. ಹೋಳಿ ಆಡಿದ ನಂತರ ನಮ್ಮೆಲ್ಲ ಆಯಾಸ ಮಾಯವಾಗಿದೆ ಎಂದು ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ.ಸಂತೋಷ್ ಹೇಳಿಕೊಂಡರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net