

ದಾವಣಗೆರೆ: ನಮ್ಮ ಇತಿಹಾಸ ಬೇರು ಗಟ್ಟಿಯಾಗಿ ಉಳಿಯಲು ಛಾಯಾಗ್ರಾಹಕರ ಅಗತ್ಯವಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಇಲ್ಲಿನ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ದೇವನಗರಿ ಪ್ರೋ ಇಮೇಜ್-2024 ಹಾಗೂ 185ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಒಂದು ಛಾಯಾಚಿತ್ರ ನೂರು ಶಬ್ದಗಳನ್ನು ಹೇಳುತ್ತದೆ. ಮದುವೆ, ಜನ್ಮದಿನ ಮೊದಲಾದ ಶುಭ ಸಮಾರಂಭ, ಕ್ರೀಡಾಕೂಟದ ಉತ್ತಮ ಕ್ಷಣಗಳನ್ನು ಸುಂದರವಾಗಿ ಸೆರೆ ಹಿಡಿಯುವ ಫೋಟೋಗ್ರಾಫರ್‌ಗಳು ನಮಗೆ ಒಳ್ಳೆಯ ನೆನಪುಗಳನ್ನು ಸೃಷ್ಟಿಸಿಕೊಡುತ್ತಾರೆ ಎಂದು ಬಣ್ಣಿಸಿದರು.
ನ್ಯಾಷನಲ್ ಜಿಯಾಗ್ರಫಿ ಪುಸ್ತಕದಲ್ಲಿ ಪ್ರದರ್ಶಿಸಲಾಗುವ ಭೂಮಂಡಲದಲ್ಲಿನ ಪ್ರಕೃತಿ, ಮರುಭೂಮಿ, ಧ್ರುವ ಪ್ರದೇಶ, ಸಮುದ್ರ ಎಲ್ಲದರ ಫೋಟೋಗಳು ಬೆಳೆಯುವ ಮಕ್ಕಳು ಹಾಗೂ ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಹೆಚ್ಚಿಸಲಿವೆ ಎಂದರು.
ನಮ್ಮ ದೇಶದ ಸ್ವಾತಂತ್ರೃ ಚಳವಳಿ ಹಾಗೂ ಕ್ರಾಂತಿಗಳ ಕುರಿತಾದ ಛಾಯಾಚಿತ್ರಗಳನ್ನು ಮಿಶ್ರಣ ಮಾಡಿ ಕೃತಕ ಬುದ್ದಿಮತ್ತೆ ಮೂಲಕ ವಿಡಿಯೋ ರೂಪದಲ್ಲಿಯೂ ಪ್ರದರ್ಶನ ಮಾಡಬಹುದು. ಅನ್ಯ ದೇಶದ ಸಂಪ್ರದಾಯ, ಸಂಸ್ಕೃತಿಯ ಸೌಂದರ್ಯ ಬಿಂಬಿಸುವವರು ಕೂಡ ಛಾಯಾಗ್ರಾಹಕರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಂತ್ರಿಕ ಕಾರ್ಯಾಗಾರ ಕೂಡ ಆಯೋಜಿಸಿದ್ದು, ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಛಾಯಾಗ್ರಾಹಕರೂ ಕೂಡ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಅಪ್‌ಡೇಟ್ ಆಗುವುದೂ ಅನಿವಾರ್ಯ ಎಂದೂ ಹೇಳಿದರು.
ಜಿಲ್ಲಾ ಸಂಘದ ಕಚೇರಿಗೆ ದೂಡಾದಿಂದ ಮಂಜೂರಾದ ಜಾಗಕ್ಕೆ ಪಾವತಿಸಬೇಕಾದ ಮೊತ್ತದಲ್ಲಿ ರಿಯಾಯ್ತಿ ಕಲ್ಪಿಸಬೇಕು. ಎಸ್ಸೆಸ್ ಜನಕಲ್ಯಾಣ ಟ್ರಸ್ಟ್ ವತಿಯಿಂದ ಛಾಯಾಗ್ರಾಹಕರ ಮಕ್ಕಳಿಗೂ ನೀಡುತ್ತಿದ್ದ ಶೈಕ್ಷಣಿಕ ಪ್ರೋತ್ಸಾಹಧನ ಕಳೆದ ಎರಡು ವರ್ಷದಿಂದ ಸ್ಥಗಿತವಾಗಿದ್ದು ಅದನ್ನು ಮುಂದುವರಿಸುವಂತೆ ಸಂಘದ ಸದಸ್ಯರು ಮನವಿ ಮಾಡಿದರು.
ಈ ಎರಡೂ ವಿಚಾರವಾಗಿ ಶಾಸಕ ಎಸ್ಸೆಸ್ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರೊಂದಿಗೆ ಮಾತನಾಡಿ ಸ್ಪಂದಿಸುವುದಾಗಿ ಪ್ರಭಾ ಭರವಸೆ ನೀಡಿದರು.
ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಸಂಘದ ಅಧ್ಯಕ್ಷ ವಿಜಯ್ ಜಾಧವ್, ಫೋಟೋಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಪಿ. ಅಗಡಿ, ಶಿವಮೊಗ್ಗ ಜಿಲ್ಲಾ ಸಂಘದ ಅಧ್ಯಕ್ಷ ಕೆ.ಟಿ. ಶ್ರೀನಿವಾಸ್, ಹಾವೇರಿ ಜಿಲ್ಲಾ ಸಂಘದ ಅಧ್ಯಕ್ಷ ರಾಜೇಂದ್ರ ರಿತ್ತಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಸಯ್ಯದ್ ರಹಮತ್ ಉಲ್ಲಾ, ಗದಗ ಜಿಲ್ಲಾಧ್ಯಕ್ಷ ಪವನ್ ಕೆ. ಮೆಹರವಾಡೆ, ವಿಜಯನಗರ ಜಿಲ್ಲೆ ಪ್ರಭಾರ ಅಧ್ಯಕ್ಷ ಕೆ. ರಾಮಣ್ಣ, ಕೊಪ್ಪಳ ಜಿಲ್ಲಾ ಸಂಘದ ಅಧ್ಯಕ್ಷ ವಿಜಯಕುಮಾರ್ ವಸ್ತ್ರದ್ ಇತರರಿದ್ದರು.
ದಾವಣಗೆರೆ ಜಿಲ್ಲಾ ಫೋಟೋಗ್ರಾಫರ್ಸ್-ವೀಡಿಯೋಗ್ರಾಫರ್ಸ್ ಸಂಘ ಹಾಗೂ ಫೋಟೋಗ್ರಾಫರ್ಸ್ ಯೂತ್ ವೆಲ್‌ಫೇರ್ ಅಸೋಸಿಯೇಷನ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಾವಣಗೆರೆ ಜಿಲ್ಲೆ ಸೆರಿ 7 ಜಿಲ್ಲೆಗಳ ಛಾಯಾಗ್ರಾಹಕರು ಭಾಗಿಯಾಗಿದ್ದರು.
47 ಮಳಿಗೆಗಳಲ್ಲಿ ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಪರಿಕರಗಳು ಪ್ರದರ್ಶಿತವಾದವು. ಹಳೆಯ ಮತ್ತು ಹೊಸ ಫೋಟೋ-ವಿಡಿಯೋ ಕ್ಯಾಮೆರಾಗಳು, ಲೆನ್ಸ್, ಪ್ರೇಮ್‌ಗಳು, ಪ್ರಿಂಟರ್‌ಗಳು, ಎಲ್‌ಇಡಿ ವಾಲ್, ಲೈಟಿಂಗ್ ಸ್ಟಾೃಂಡ್‌ಗಳು, ಲ್ಯಾಪ್‌ಟಾಪ್‌ಗಳ ಮಾರಾಟ, ದುರಸ್ತಿ ವಿಭಾಗ, ಥರಹೇವಾರಿ ಫೋಟೋ ಆಲ್ಬಮ್‌ಗಳು ಪ್ರದರ್ಶನ ಮತ್ತು ತಯಾರಿಕೆ ಪ್ರಾತ್ಯಕ್ಷಿಕೆ ನಡೆಯಿತು. ಎಸ್. ಎಸ್. ಕೇರ್ ಟ್ರಸ್ಟ್‌ನಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.
---