

ದಾವಣಗೆರೆ: ರಾಜ್ಯದಲ್ಲಿ ನೂತನವಾಗಿ ಕರ್ನಾಟಕ ಫೋಟೋಗ್ರಾಫರ್ ಆ್ಯಂಡ್ ವಿಡಿಯೋಗ್ರಾಫರ್ ಅಸೋಸಿಯೇಷನ್ ಅಸ್ತಿತ್ವಕ್ಕೆ ತರಲಾಗಿದೆ. ಆಗಸ್ಟ್ 17ಕ್ಕೆ ಇದರ ಉದ್ಘಾಟನೆ ಹಾಗೂ ರಾಜ್ಯ ಮಟ್ಟದ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ನೂತನ ಅಧ್ಯಕ್ಷ ಮನು.ಎಂ ದೇವನಗರಿ ತಿಳಿಸಿದರು.
ರಾಜ್ಯದಲ್ಲಿ ಛಾಯಾಗ್ರಾಹಕರು, ವೀಡಿಯೋಗ್ರಾಫರ್‌ಗಳಿಗಾಗಿ ಒಂದೇ ಸಂಘ ರಚಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲೂ ಪ್ರವಾಸ ಹಮ್ಮಿಕೊಂಡು ಸಂಘಟನೆ ಮಾಡಲಾಗುವುದು. ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ 3 ಲಕ್ಷಕ್ಕೂ ಹೆಚ್ಚು ಛಾಯಾಗ್ರಾಹಕರು, ಕುಟುಂಬದವರಿದ್ದಾರೆ. ಅವರಿಗೆ ಸರ್ಕಾರದಿಂದ ಯಾವುದೇ ಸವಲತ್ತುಗಳಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಛಾಯಾಗ್ರಾಹಕರ ಅಕಾಡೆಮಿ ಹಾಗೂ ಪ್ರತ್ಯೇಕ ಕಲ್ಯಾಣ ನಿಧಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಕಾರ್ಮಿಕ ಇಲಾಖೆಯು ಅಸಂಘಟಿತ ಕಾರ್ಮಿಕರ ಸಹಾಯಹಸ್ತ ಯೋಜನೆಗೆ ಛಾಯಾಗ್ರಾಹಕರನ್ನೂ ಸೇರ್ಪಡೆ ಮಾಡಿರುವುದು ಸ್ವಾಗತಾರ್ಹ. ಆದರೆ ಇದರಡಿ ಯಾವುದೇ ವಿಶೇಷ ಸೌಲಭ್ಯಗಳಿಲ್ಲ. ಅದನ್ನು ಒದಗಿಸುವಂತೆ ಸಚಿವ ಸಂತೋಷ್ ಲಾರ್ಡ್ ಅವರಲ್ಲಿ ಮನವಿ ಮಾಡಲಾಗಿದೆ ಎಂದರು.
ಸಂಘದ ಮಾಧ್ಯಮ ಸಲಹೆಗಾರ ಎಲ್. ವಿ. ಮಾಲತೇಶ್ ಅರಸ್ ಮಾತನಾಡಿ ರಾಜ್ಯ ಕಾರ್ಯಾಧ್ಯಕ್ಷರಾಗಿ ಎಸ್.ರಾಜಶೇಖರಪ್ಪ ಕೊಂಡಜ್ಜಿ, ರಾಜ್ಯ ಉಪಾಧ್ಯಕ್ಷರಾಗಿ ಡಿ.ರಮೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆ. ದೇವೇಂದ್ರಪ್ಪ, ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ಡಿ.ರಂಗನಾಥ್, ರಾಜ್ಯ ಖಜಾಂಚಿಯಾಗಿ ಎಸ್. ಎ. ಸುಮಾ, ರಾಜ್ಯ ಕಾನೂನು ಸಲಹೆಗಾರರಾಗಿ ಹೈಕೋರ್ಟ್ ವಕೀಲರಾದ ಆರ್ ಎಸ್ ವಿನೋದ್ ಕುಮಾರ್, ರಾಜ್ಯ ಗೌರವ ಸಲಹೆಗಾರರಾಗಿ ಡಿ.ವೈ ಸಂತೋಷ್ ಕುಮಾರ್ ದೊಡ್ಮನಿ ಆಯ್ಕೆ ಆಗಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜಶೇಖರಪ್ಪ ಕೊಂಡಜ್ಜಿ, ಡಿ.ರಮೇಶ್, ಸಂತೋಷ್ ಕುಮಾರ್ ದೊಡ್ಮನಿ, ಬಿ.ಮಂಜುನಾಥ್ ಇತರರಿದ್ದರು.