

ದಾವಣಗೆರೆ: ಗುಣಮಟ್ಟದ ಔಷಧವನ್ನು ಮಾರುಕಟ್ಟೆಗೆ ತಂದು ಜನರಿಗೆ ಆರೋಗ್ಯ ಕಲ್ಪಿಸುವಲ್ಲಿ ಫಾರ್ಮಾಸಿಸ್ಟ್‌ಗಳ ಪಾತ್ರ ಗಮನಾರ್ಹ ಎಂದು ಪ್ರಾದೇಶಿಕ ಕಚೇರಿಯ ಉಪ ಔಷಧ ನಿಯಂತ್ರಕ ಡಾ.ಎಂ. ಖಾಲಿದ್ ಅಹಮದ್ ಖಾನ್ ಹೇಳಿದರು.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಉಪ ಔಷಧ ನಿಯಂತ್ರಕರ ಕಚೇರಿ ಹಾಗೂ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಸಹಯೋಗದಲ್ಲಿ ನಗರದ ಸಿ. ಕೇಶವಮೂರ್ತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರಿಗೆ ವೈದ್ಯಕೀಯ ಸೇವೆ ಸಲ್ಲಿಸುವ ವೈದ್ಯರು, ಶುಶ್ರೂಷಕರು ನೇರವಾಗಿ ಗೋಚರಿಸುತ್ತಾರೆ. ಆದರೆ ಅವರ ಹಿಂದೆ ಕೆಲಸ ಮಾಡಬಲ್ಲ ಫಾರ್ಮಾಸಿಸ್ಟ್‌ಗಳ ಸೇವೆಯನ್ನು ಸ್ಮರಿಸುವ ದಿನ ಇದಾಗಿದೆ. ಜನರಿಗೆ ಇನ್ನಷ್ಟು ಉತ್ತಮ ಸೇವೆಗೆ ಸಜ್ಜಾಗಬೇಕಿದೆ ಎಂದರು.
1912ರಲ್ಲಿ ಫಾರ್ಮಾಸಿಟಿಕಲ್ ಸಂಘಟನೆ ಜನ್ಮ ತಾಳಿದಾಗ ಈಗಿನಷ್ಟು ಸಂವಹನ ಇರಲಿಲ್ಲ. 2009ರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಂಘ ಜನ್ಮ ತಾಳಿ, ಫಾರ್ಮಾಸಿಸ್ಟ್‌ಗಳ ದಿನ ಆಚರಣೆಗೆ ಬಂದಿದೆ. ಕರ್ನಾಟಕದಲ್ಲೂ ಈಗಾಗಲೆ ಆರೋಗ್ಯ ಸಚಿವರು ಉದ್ಘಾಟಿಸಿದ್ದು, ಎಲ್ಲ ಜಿಲ್ಲೆಗಳಲ್ಲಿ ಇಂದು ಆಚರಣೆ ಮಾಡಲಾಗುತ್ತಿದೆ ಎಂದರು.
ಚಿಗಟೇರಿ ಆಸ್ಪತ್ರೆ ಅಧೀಕ್ಷಕ ಡಾ.ಎಂ.ಬಿ. ನಾಗೇಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಫಾರ್ಮಾಸಿಸ್ಟ್‌ಗಳು ವೈದ್ಯರ ನಂತರದಲ್ಲಿ ಎರಡನೇ ದೊಡ್ಡ ಜವಾಬ್ದಾರಿ ನಿಭಾಯಿಸುತ್ತಾರೆ. ವೈದ್ಯರು ಬರೆದುಕೊಡುವ ಚೀಟಿಯಲ್ಲಿನ ಔಷಧ ನೀಡುವ ಜತೆಗೆ ಅದನ್ನು ಪಡೆಯುವ ಕ್ರಮದ ಬಗ್ಗೆಯೂ ವಿವರಣೆ ನೀಡುತ್ತಾರೆ ಎಂದು ಹೇಳಿದರು.
ಬಾಪೂಜಿ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ.ಜಿ.ಎಲ್. ಪ್ರಭುಶಂಕರ್ ಮಾತನಾಡಿ ಫಾರ್ಮಾಸಿಸ್ಟ್‌ಗಳು ಔಷಧಿ ವಿತರಣಾ ಕ್ಷೇತ್ರಕ್ಕೆ ಸೀಮಿತವಾಗದೆ ಸಂಶೋಧನಾ ವಲಯದಲ್ಲೂ ತೊಡಗಿಸಿಕೊಳ್ಳಬೇಕಿದೆ ಎಂದು ಆಶಿಸಿದರು.
ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಖಜಾಂಚಿ ಎಚ್.ಸಿ.ವಿ. ನಿಂಗರಾಜ್ ಮಾತನಾಡಿ ಅಮೆರಿಕದಲ್ಲಿ ರೋಗಿಗಳಿಗೆ ಕೋಡ್ ನಂಬರ್ ಮೂಲಕ ಔಷಧಿ ಖರೀದಿಸುವ ಅವಕಾಶ ನೀಡಲಾಗಿದೆ. ಈ ವ್ಯವಸ್ಥೆ ಭಾರತದಲ್ಲೂ ಜಾರಿಯಾದಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು.
ಔಷಧ ವ್ಯಾಪಾರಿಗಳ ಸಂಘದ ಸದಸ್ಯ ಮಲ್ಲಿಕಾರ್ಜುನ್ ಮಾತನಾಡಿ ಫಾರ್ಮಾಸಿಸ್ಟ್ ಕ್ಷೇತ್ರಕ್ಕೆ ಬರುವ ಹೊಸಬರು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಹಿನ್ನೆಲೆಯಲ್ಲಿ ಹೊಸ ಜ್ಞಾನವನ್ನು ಅರಿಯಬೇಕಿದೆ. ಸೇವಾ ಕ್ಷೇತ್ರವಾಗಿದ್ದ ಫಾರ್ಮಾಸಿಸ್ಟ್ ಕೆಲಸ ಇಂದು ವ್ಯಾಪಾರದತ್ತ ತಿರುಗಿದೆ ಎಂದು ತಿಳಿಸಿದರು.
ಇದೇವೇಳೆ ಔಷಧ ವ್ಯಾಪಾರ ಕ್ಷೇತ್ರದಲ್ಲಿ ಅನೇಕ ವರ್ಷದಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ರವಿಚಂದ್ರ ನಾಯಕ್ ಹಾಗೂ ಕೊಟ್ರೇಶ್ ಬಣಕಾರ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಜಿಲ್ಲಾ ಅಂಕಿತಾಧಿಕಾರಿ ಡಾ.ಜೆ.ಎಸ್.ನಾಗರಾಜ್, ವೃತ್ತ-1ರ ಸಹಾಯಕ ಔಷಧ ನಿಯಂತ್ರಕ ಎಸ್.ಆರ್. ಪ್ರಸನ್ನಕುಮಾರ್, ವೃತ್ತ-2ರ ಸಹಾಯಕ ಔಷಧ ನಿಯಂತ್ರಕಿ ಎಂ.ಎಸ್. ಗೀತಾ, ಜಿಎಂ. ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸಿಟಿಕಲ್ ಸೈನ್ಸಸ್ ಆ್ಯಂಡ್ ರೀಸರ್ಚ್‌ನ ಪ್ರಾಚಾರ್ಯ ಡಾ. ಗಿರೀಶ್ ಬೋಳಕಟ್ಟಿ, ಔಷಧ ವ್ಯಾಪಾರಿಗಳ ಸಂಘ ಜಿಲ್ಲಾ ಜಂಟಿ ಕಾರ್ಯದರ್ಶಿ ರವಿಕುಮಾರ್ ನುಗ್ಗೇಹಳ್ಳಿ, ಜೆ.ಎಸ್.ಎಸ್. ಲೋಕೇಶ್ ಇದ್ದರು.
---