

ದಾವಣಗೆರೆ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಗೆ ದಾವಣಗೆರೆ ಜಿಲ್ಲೆಯ ಜನರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ದರ ಹೆಚ್ಚಳದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಲಿದೆ. ಮುಖ್ಯವಾಗಿ ಸಾರಿಗೆ ಕ್ಷೇತ್ರದಲ್ಲಿ ತಕ್ಷಣವೇ ದರ ಹೆಚ್ಚಲಿದೆ. ಈ ಮೂಲಕ ತರಕಾರಿ, ಹಾಲು, ಹಣ್ಣು, ಔಷಧ ಸೇರಿ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಲಿದೆ ಎಂಬ ಆತಂಕವನ್ನು ಜನರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಒತ್ತಾಯ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಅನ್ಯ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಬೆಲೆ ಕಡಿಮೆ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಗ್ಯಾರಂಟಿಗೆ ಹಣ ಹೊಂದಿಸಲು ದರ ಏರಿಕೆ: ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿ ಜನರ ಮೇಲೆ ಬರೆ ಎಳೆದಿದೆ. ಮುಂದಿನ ದಿನಗಳಲ್ಲಿ ಬಸ್ ಪ್ರಯಾಣ ದರ ಮತ್ತು ವಿದ್ಯುತ್ ಶುಲ್ಕ ಹೆಚ್ಚಳ ಮಾಡುವ ಸಂಚು ಮಾಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತವೆ. ಆಗ ಆರ್ಥಿಕ ಹೊಡೆತದಿಂದ ಸಾಮಾನ್ಯ ಜನರು ಜೀವನ ಮಾಡುವುದು ಕಷ್ಟಕರವಾಗುತ್ತದೆ. ರಾಜ್ಯದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿ ಅರಾಜಕತೆಯಾಗುತ್ತದೆ. ನಾಳೆ ಎನ್ನುವುದೇ ಇಲ್ಲ. ಈ ದಿನವೇ ಬೆಲ್ಲ ಎಂಬಂತೆ ಜನರ ತೆರಿಗೆ ಹಣವನ್ನು ಉಚಿತ ಕೊಡುಗೆಗಳಿಗೆ ಮಿತಿ ಮೀರಿ ಖರ್ಚು ಮಾಡುವ ಸರ್ಕಾರ ಬೆಲೆ ಏರಿಸಿ ಬಡ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ ಎನ್ನುತ್ತಾರೆ ಎನ್. ರಾಜಶೇಖರ್, ಜಿಲ್ಲಾ ಬಿಜೆಪಿ ಅಧ್ಯಕ್ಷ.
ಇಂಧನ ಬೆಲೆ ಇಳಿಸಿ ಮರ್ಯಾದೆ ಉಳಿಸಿಕೊಳ್ಳಲಿ: ರಾಜ್ಯ ಸರ್ಕಾರ ನೀಡಿದ್ದ ಭರವಸೆ ಈಡೇರಿಸಲು ಪೆಟ್ರೋಲ್- ಡೀಸೆಲ್ ಬೆಲೆ ಏರಿಸಿ ರೈತಾಪಿ ಹಾಗೂ ಬಡ ವರ್ಗದ ಮೇಲೆ ಬರೆ ಎಳೆದಿರುವುದು ಖಂಡನಿಯ. ಮುಂಗಾರು ಹಂಗಮಿನಲ್ಲಿ ರೈತರು ಬಿತ್ತನೆ ಬೀಜ, ಗೊಬ್ಬರ, ಕೂಲಿ ಮತ್ತಿತರ ಎಲ್ಲ ಕೃಷಿ ಚಟುವಟಿಕೆಗಳಿಗೆ ಹೆಚ್ಚು ಹಣ ವ್ಯಯ ಮಾಡಬೇಕಾದ ಸಂದರ್ಭದಲ್ಲೇ ಸರ್ಕಾರ ಇಂಧನ ಬೆಲೆ ಏರಿಕೆ ರೈತರಿಗೆ ಬರೆ ಎಳೆದಂತೆ ಆಗಿದೆ. ಸರ್ಕಾರ ಮಾಡಿರುವ ತಪ್ಪು ಅರಿತು ಕೂಡಲೆ ಬೆಲೆ ಇಳಿಸಿ ಮರ್ಯಾದೆ ಉಳಿಸಿಕೊಳ್ಳಲಿ ಎನ್ನುತ್ತಾರೆ ತರಗನಹಳ್ಳಿ ರಮೇಶ್‌ಗೌಡ.
ಜನರ ಮೇಲೆ ದರ ಏರಿಕೆ ಹೊರೆ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನಲೆಯಲ್ಲಿ ಜನರ ಮೇಲೆ ಬರೆ ಎಳೆಯಲು ಸರ್ಕಾರ ಮುಂದಾಗಿದ್ದು, ದೂರದೃಷ್ಟಿ ಇಲ್ಲದೆ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಗೆ ಹೊಂದಿಸಲು ಸರ್ಕಾರದ ಬಳಿ ಹಣ ಇಲ್ಲದಂತಾಗಿದೆ. ವಯೋವೃದ್ಧ, ವಿಧವಾ ವೇತನ, ಅಂಗವಿಕಲ ಮಾಸಾಶನ ಮತ್ತಿತರ ಸಾಮಾಜಿಕ ಪಿಂಚಣಿ ಹಣ ಸಕಾಲಕ್ಕೆ ಬಿಡುಗಡೆ ಮಾಡಲು ಸರ್ಕಾರ ಪೆಟ್ರೋಲ್, ಡಿಸೇಲ್ ದರ ಏರಿಸಿ ಜನರ ಮೇಲೆ ದರ ಏರಿಕೆ ಹೊರ ಹೇರಿದೆ ಎನ್ನುತ್ತಾರೆ ನ್ಯಾಮತಿ ತಾಲೂಕು ಬಿಜೆಪಿ ಉಪಾಧ್ಯಕ್ಷ ಎಂ.ಯು. ನಟರಾಜ್.
ನೀಡಿದ ಭರವಸೆ ಈಡೇರಿಸಲಿಲ್ಲ: ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಜನಸಾಮಾನ್ಯರ ಜೀವನೋಪಯೋಗಿ ವಸ್ತುಗಳು ಹಾಗೂ ಇಂಧನ ದರ ಕಡಿಮೆ ಮಾಡುತ್ತೇವೆಂದು ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ, ಈವರೆಗೂ ಯಾವುದೇ ವಸ್ತುವಿನ ಬೆಲೆ ಇಳಿಕೆ ಮಾಡಿಲ್ಲ. ಈ ಮಧ್ಯೆ ಈಗ ಏಕಾಏಕಿ ಇಂಧನ ಬೆಲೆ ಏರಿಕೆ ಮಾಡಿ ಜನ ಸಾಮಾನ್ಯರ ಮೇಲೆ ಬರೆ ಎಳೆದಿದ್ದಾರೆ. ಜತೆಗೆ, ಎಲ್ಲ ವಸ್ತುಗಳ ದರವೂ ದುಪ್ಪಟ್ಟಾಗಿದೆ. ಇನ್ನಾದರೂ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಲಿ ಎನ್ನುತ್ತಾರೆ ಹೊನ್ನಾಳಿ ಪಪಂ ಮಾಜಿ ಅಧ್ಯಕ್ಷೆ ಶ್ರೀದೇವಿ ಧರ್ಮಪ್ಪ.
ತಜ್ಞರೊಂದಿಗೆ ಚರ್ಚಿಸಿ ತೀರ್ಮಾನಿಸಲಿ: ಇಂಧನ ದರವನ್ನು ಏಕಾಏಕಿ ಅಧಿಕ ಮಾಡುವ ಮೂಲಕ ಸರ್ಕಾರ ರಾಜ್ಯದ ಜನರ ನಂಬಿಕೆ ಕಳೆದುಕೊಂಡಿದೆ. ಚುನಾವಣೆ ಸಮಯದಲ್ಲಿ ಭರಪೂರ ಆಶ್ವಾಸನೆ ನೀಡಿದ್ದ ಕಾಂಗ್ರೆಸ್ ಇದೀಗ ಎಲ್ಲ ವಸ್ತುಗಳ ದರ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ಮಧ್ಯಮ ವರ್ಗದವರ ಕಷ್ಟ ಅರಿಯದ ಸರ್ಕಾರ ಮತ್ತೊಮ್ಮೆ ದರ ಹೆಚ್ಚಳದ ಕುರಿತು ತಜ್ಞರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿ ಎನ್ನುತ್ತಾರೆ ಮಾನವ ಹಕ್ಕು ಹೋರಾಟಗಾರರ ಸಂಘದ ತಾಲೂಕು ಅಧ್ಯಕ್ಷ ನಾಗೇಂದ್ರಪ್ಪ ಚಿಕ್ಕೂಲಿಕೆರೆ.
ರೈತರ ಬೆಳೆಗಳ ಬೆಲೆ ಹೆಚ್ಚಿಸಲಿ: ದೇಶಕ್ಕೆ ಅನ್ನ ಹಾಕುವ ರೈತನ ಪರವಾಗಿ ಕಾಂಗ್ರೆಸ್ ಸರ್ಕಾರ ಯೋಜನೆಗಳನ್ನು ರೂಪಿಸುವ ಬದಲು ಗಾಯದ ಮೇಲೆ ಬರೆ ಎಳದಂತೆ ಇಂಧನ ಬೆಲೆಗಳನ್ನು ಏರಿಸಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ರೈತರು ಯಂತ್ರೋಪಕರಣ ಬಳಸಿಕೊಂಡು ಉಳುಮೆ ಮಾಡುತ್ತಿದ್ದು, ಇಂಧನ ಬೆಲೆ ಏರಿಕೆ ಬೇಸರ ತಂದಿದೆ. ಸಿದ್ದರಾಮಯ್ಯ ಸರ್ಕಾರ ಮೊದಲು ರೈತರ ಬೆಳೆಗಳಿಗೆ ಸೂಕ್ತ ಬೆಲೆ ನೀಡಲಿ ಎನ್ನುತ್ತಾರೆ ಯುವ ರೈತ ಪ್ರದೀಪ್ ಹನಗವಾಡಿ.
ಕಚ್ಚಾತೈಲ ಬೆಲೆ ಹೆಚ್ಚಳದಿಂದ ದರ ಹೆಚ್ಚಿದೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿಕೆ ಕಂಡ ಪರಿಣಾಮ ಸಹಜವಾಗಿಯೇ ಇಲ್ಲಿಯೂ ಬೆಲೆ ಹೆಚ್ಚಳವಾಗಿದೆ. ಆದ್ದರಿಂದ ಇದಕ್ಕೆ ಸರ್ಕಾರವನ್ನು ನೇರ ಹೊಣೆ ಮಾಡುವುದು ಸರಿಯಲ್ಲ. ಆದರೆ, ಇಂಧನ ದರ ಹೆಚ್ಚಳದಿಂದ ಟಿಕೆಟ್ ದರ, ಸರಕು ದರ ಹೆಚ್ಚಳವಾಗುತ್ತದೆ. ಆದ್ದರಿಂದ ಸರ್ಕಾರ ಜನರಿಗೆ ಹೊರೆಯಾಗದಂತೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುತ್ತಾರೆ ಜಗಳೂರು ಕಟ್ಟಡ ಕಾರ್ಮಿಕ ಹನುಮಂತಪ್ಪ.