

ದಾವಣಗೆರೆ: ತಾಲೂಕಿನ ಆಂಜನೇಯ ನಗರದ 200 ಹೆಚ್ಚು ಜನರಿಗೆ ವಿತರಿಸಲಾದ ಹಕ್ಕುಪತ್ರಗಳ ಖಾಲಿ ನಿವೇಶನಗಳಿಗೆ ಇ- ಸ್ವತ್ತು ವಿತರಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ (ಹುಚ್ಚವನಹಳ್ಳಿ ಮಂಜುನಾಥ್ ಬಣ) ಪದಾಧಿಕಾರಿಗಳು ಶುಕ್ರವಾರ ತಹಸೀಲ್ದಾರ್ ಡಾ.ಬಿ.ಎನ್. ಅಶ್ವಥ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ಹೂವಿನಮಡು ಗ್ರಾಮದಲ್ಲಿ ವಾಸವಿರುವ ನೂರಾರು ಜನರಿಗೆ ನಿವೇಶನಗಳನ್ನು ರಚಿಸಿ ವಿತರಣೆ ಮಾಡಬೇಕು. ಹೊನ್ನಮರಡಿ ಗಿರಿಯಾಪುರ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರೈತರು ಹೊಲಗದ್ದೆಗಳಿಗೆ ಹೋಗಿ ಬರುವುದು ಕಷ್ಟಕರವಾಗಿದೆ. ಶೀಘ್ರವಾಗಿ ಇದನ್ನು ದುರಸ್ತಿಪಡಿಸಿ ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಬೇಕೆಂದು ಆಗ್ರಹಿಸಿದರು.
ದಾವಣಗೆರೆಯಿಂದ ಕೈದಾಳೆ, ಗಿರಿಯಾಪುರ, ಲೋಕಿಕೆರೆ ಮಾರ್ಗವಾಗಿ ನೂತನ ಕೆಎಸ್ ಆರ್‌ಟಿಸಿ ಬಸ್ ಸಂಪರ್ಕ ಕಲ್ಪಿಸಿ, ಈ ಭಾಗದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರಾಜ್ಯ ರೈತ ಸಂಘ, ಹಸಿರು ಸೇನೆ ದಾವಣಗೆರೆ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ಹಸಿರು ಸೇನೆಯ ಅಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್, ಹುಚ್ಚವ್ವನಹಳ್ಳಿ ಪ್ರಕಾಶ್, ಪಾಮೇನಹಳ್ಳಿ ಗೌಡರ ಶೇಖರಪ್ಪ, ಕುರ್ಕಿ ಹನುಮಂತ, ಶಿವಪುರದ ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಹೂವಿನಮಡು ನಾಗರಾಜ್ , ಹಸಿರು ಸೇನೆ ಅಧ್ಯಕ್ಷರಾಗಿ ಎಚ್.ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಹುಚ್ಚವಹಳ್ಳಿ ಪ್ರಕಾಶ್, ಹಸಿರುಸೇನೆ ಪ್ರಧಾನ ಕಾರ್ಯದರ್ಶಿ ಗುಮ್ಮನೂರು ರುದ್ರೇಶ್ ಇತರರು ಇದ್ದರು.
---