ಗುಂಪುಗಾರಿಕೆ ಬಿಡಿ, ಪಕ್ಷ ಸಂಘಟಿಸಿ

1000429212_20241011234358905.jpg
Published on

ದಾವಣಗೆರೆ: ಬಿಜೆಪಿ ಮುಖಂಡರು ಗುಂಪುಗಾರಿಕೆಗೆ ತೆರೆ ಎಳೆಯುವ ಮೂಲಕ ಪಕ್ಷದ ಸಂಘಟನೆಗೆ ಮುಂದಾಗಬೇಕು ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸಲಹೆ ನೀಡಿದರು.
ಜಿಲ್ಲೆಯಲ್ಲಿ ಮುಂಬರುವ ಚುನಾವಣೆಗಳಲ್ಲಿ ಒಗ್ಗಟ್ಟಾಗಿ ಪಕ್ಷ ಗೆಲ್ಲಿಸಬೇಕಿದ್ದು, ಪಕ್ಷದ ಕಾರ್ಯಕರ್ತರು ಎಲ್ಲ ನಾಯಕರನ್ನು ಸಂಘಟಿಸುವಲ್ಲಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತಿರುವುದು ಕಾರ್ಯಕರ್ತರು ಹಾಗೂ ಪಕ್ಷದ ಹಿನ್ನಡೆಯಾಗಿದೆ. ಇದರ ನೋವು ಇಡೀ ಕಾರ್ಯಕರ್ತರಲ್ಲಿದೆ. ಆದರೆ, ಸೋಲಿಗೆ ಎದೆಗುಂದುವುದು ಕಾರ್ಯಕರ್ತರ ಗುಣ ಅಲ್ಲ ಎಂದರು.
ಪಕ್ಷದಲ್ಲಿ ಯಾವುದೇ ಗೊಂದಲ ಇದ್ದರೂ ವರಿಷ್ಠರ ಬಳಿ ಮಾತನಾಡಬೇಕು. ರವೀಂದ್ರನಾಥ್ ಅವರ ಮನೆಗೆ ಸಿದ್ದೇಶ್ವರ ಅವರನ್ನು ಕರೆತರಲು ನಾವು ಸಿದ್ಧ ಎಂದು ಹೇಳಿದರು.
ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಮಾತನಾಡಿ, ಜಿಲ್ಲಾ ಬಿಜೆಪಿಯಲ್ಲಿ ಜಿ.ಎಂ.ಸಿದ್ದೇಶ್ವರ ಹಾಗೂ ಎಸ್.ಎ.ರವೀಂದ್ರನಾಥ್ ಎರಡು ಕಣ್ಣುಗಳಿದ್ದಂತೆ. ಜಿಲ್ಲೆಯಲ್ಲಿ ಹಿರಿಯರಾದ ರವೀಂದ್ರನಾಥ್ ಜತೆಗೆ ಜಿ.ಮಲ್ಲಿಕಾರ್ಜುನಪ್ಪ ಅವರ ಕುಟುಂಬ ಕೂಡ ಬಿಜೆಪಿ ಕಟ್ಟಿ ಬೆಳೆಸಿದೆ ಎಂದು ಹೇಳಿದರು.
ಜಿ.ಎಂ.ಸಿದ್ದೇಶ್ವರ ಅವರು ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದು, ಅವರ ಕೊಡುಗೆ ಏನು ಎಂದು ಎಲ್ಲರೂ ಪ್ರಶ್ನಿಸುತ್ತಾರೆ. ಆದರೆ, ಯಾವುದೇ ಕೊಡುಗೆ ಇಲ್ಲದೆ ಮತದಾರರು ನಾಲ್ಕು ಸಲ ಗೆಲ್ಲಿಸಲು ಸಾಧ್ಯವೇ ಎಂಬುದನ್ನು ತಿಳಿಯಬೇಕು ಎಂದರು.
ಜಿಲ್ಲೆಯಲ್ಲಿ ಏನೇ ಲೋಪದೋಷ ಇದ್ದರೂ ಪಕ್ಷದ ರಾಜ್ಯ ಹಾಗೂ ರಾಷ್ಟ್ರದ ವರಿಷ್ಠರು ಬಗೆಹರಿಸುತ್ತಾರೆಂಬ ವಿಶ್ವಾಸವಿದೆ. ಪಕ್ಷದ ಚೌಕಟ್ಟಿನಲ್ಲಿ ಕುಳಿತು ಮಾತನಾಡಲು ಸಿದ್ದೇಶ್ವರ ಸೇರಿ ಎಲ್ಲರೂ ಸಿದ್ಧರಿದ್ದಾರೆ. ಯಾರೂ ಬಣ ರಾಜಕೀಯ ಮಾಡಲು ಹೋಗಬಾರದು ಎಂದು ಕಿವಿಮಾತು ಹೇಳಿದರು.
ಆರ್.ಎಲ್.ಶಿವಪ್ರಕಾಶ್, ಶಂಕರಗೌಡ ಬಿರಾದಾರ್, ರಾಜು ನೀಲಗುಂದ, ಬಾಲಚಂದ್ರ ಶ್ರೇಷ್ಠಿ, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net