

ಡಿ.ಎಂ.ಮಹೇಶ್, ದಾವಣಗೆರೆ:
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ತೆರೆದಿದ್ದ ಭತ್ತ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಶನಿವಾರ ಅಂತ್ಯವಾಗಿದೆ. ಕಳೆದೆರಡು ದಿನದಿಂದ ಮಳೆ ಸ್ಥಗಿತವಾಗಿದ್ದು, ಭತ್ತ ಒಣಗಿಸಿ ಮಾರಾಟ ಮಾಡುವ ಉತ್ಸಾಹದಲ್ಲಿದ್ದ ಅನ್ನದಾತರಲ್ಲಿ ಆತಂಕದ ಕಾರ್ಮೋಡ ದಟ್ಟವಾಗಿದೆ. ಮಾ. 20ರಿಂದ ಏ. 25ರವರೆಗೆ ನೋಂದಣಿ, ಏ. 1ರಿಂದ ಮೇ ಅಂತ್ಯದವರೆಗೆ ಖರೀದಿಸಲು ಈ ಹಿಂದೆ ಆದೇಶವಾಗಿತ್ತು. ಏಪ್ರಿಲ್ ಕೊನೆಯ, ಮೇ ಮೊದಲ ವಾರದಲ್ಲಿ ಭತ್ತದ ಕೊಯ್ಲು ಶುರುವಾಗಲಿದ್ದು ನೋಂದಣಿ ಅವಧಿ ನಿಗದಿ ಅವೈಜ್ಞಾನಿಕ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ನೋಂದಣಿಯನ್ನು ಮೇ 31ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು.
ಖರೀದಿ ಕೇಂದ್ರ ಶುರುವಾದರೂ ತಂತ್ರಾಂಶ ಗೊಂದಲ ಮುಂದುವರಿದಿತ್ತು. ಬೇಸಿಗೆ, ಮಳೆಗಾಲ ಹೀಗೆ ಎರಡು ಹಂಗಾಮಿನಲ್ಲಿ ಭತ್ತ ಬೆಳೆಯುತ್ತಿದ್ದರೂ ಆದೇಶದಲ್ಲಿ ಹಿಂಗಾರು ಋತುವಿನ ಭತ್ತದ ಖರೀದಿ ಎಂದು ನಮೂದಾಗಿದ್ದು ಹಾಗೂ ಬೆಳೆ ಸಮೀಕ್ಷೆಯಂತೆ ಪ್ರೂಟ್ ತಂತ್ರಾಂಶದಲ್ಲಿ ಅಪ್ಲೋಡ್ ಆದ ಶೇ.98ರಷ್ಟು ರೈತರ ಪಹಣಿಯಲ್ಲಿ ಹಿಂಗಾರು ಎಂಬುದಾಗಿ ನಮೂದಾಗಿದ್ದು ತಾಂತ್ರಿಕ ಸಮಸ್ಯೆಯಾಗಿ ಕಾಡಿದವು.
ಮೇ 26ರ ರಾಜ್ಯ ಸರ್ಕಾರದ ಮಾರ್ಪಾಡು ಆದೇಶದಲ್ಲಿ ಹಿಂಗಾರು/ ಬೇಸಿಗೆ ಹಂಗಾಮಿನ ಬೆಳೆ ಎಂದು ತಿದ್ದುಪಡಿ ಮಾಡಿ ಖರೀದಿಸಲು ಸೂಚಿಸಲಾಯಿತು. ಆದರೆ ಈ ಮಾರ್ಪಾಡಿಗೆ ಕೇಂದ್ರ ಸರ್ಕಾರ ಸಮ್ಮತಿಸದಿರುವುದು ಕೂಡ ತೊಡಕಾಗಿದೆ ಎನ್ನಲಾಗಿದೆ.
ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದ್ದು, 2.5 ಲಕ್ಷ ಮೆ. ಟನ್ ಅಕ್ಕಿ ಉತ್ಪಾದನೆ ನಿರೀಕ್ಷೆ ಇದೆ. ಮೇ ನಲ್ಲಿ ನಿರಂತರ ಮಳೆಯಾದ್ದರಿಂದ ಕಟಾವು ತಡವಾಗಿ, ಒಣಗಿಸುವ ಸಮಸ್ಯೆಯೂ ಭಾದಿಸಿತು. ಮಾರುಕಟ್ಟೆಯಲ್ಲಿ ದರ ಕುಸಿತವೂ ಕಂಗಾಲು ಮಾಡಿತ್ತು.
ಈ ಹಂತದಲ್ಲಿ ರೈತರ ಪ್ರತಿಭಟನೆಗಳೂ ನಡೆದವು. ಎಂ.ಎಸ್ಪಿಗಿಂತ ಕಡಿಮೆ ದರದಲ್ಲಿ ಖರೀದಿಸದಂತೆ ನಿರ್ಬಂಧಿಸಬೇಕು. ಕ್ವಿಂ. ಭತ್ತಕ್ಕೆ ಕೇರಳ ಮಾದರಿಯಲ್ಲಿ 1200 ರೂ. ಪ್ರೋತ್ಸಾಹಧನ ನೀಡಬೇಕು. ಸುಗ್ರೀವಾಜ್ಞೆ ಮೂಲಕ ಕನಿಷ್ಠ ಬೆಂಬಲ ಬೆಲೆಗೆ ಕಾಯ್ದೆ ಜಾರಿಗೊಳಿಸಬೇಕು ಎಂದೂ ರೈತ ಸಂಘಟನೆಗಳು ಆಗ್ರಹಿಸಿದ್ದವು.
ದಾವಣಗೆರೆ, ಹರಿಹರ, ಚನ್ನಗಿರಿ ಹಾಗೂ ಹೊನ್ನಾಳಿಯಲ್ಲಿ ಖರೀದಿ ಕೇಂದ್ರ ತೆರೆದಿದ್ದು, ಎರಡು ಕೇಂದ್ರಗಳಲ್ಲಿ ಐವರು ರೈತರು (200 ಕ್ವಿಂ.) ನೋಂದಣಿ ಮಾಡಿಸಿದ್ದಾರೆ. ನೋಂದಣಿ-ಖರೀದಿ ಪ್ರಕ್ರಿಯೆಯನ್ನು ಜೂನ್ ಅಂತ್ಯದವರೆಗೆ ವಿಸ್ತರಿಸುವ ರೈತರ ಬೇಡಿಕೆಗೆ ಸ್ಪಂದಿಸಿರುವ ಜಿಲ್ಲಾಡಳಿತ ಸರ್ಕಾರಕ್ಕೆ ಮನವಿ ಮಾಡಿದೆ.
ಭತ್ತ ಒಣಗಿಸುವ ಡ್ರೈಯರ್‌ಗೆ ಪ್ರಸ್ತಾವನೆಗೆ ಡಿಸಿ ಅವರು ಸೂಚಿಸಿದ್ದರೂ ಸದ್ಯಕ್ಕೆ ಚರ್ಚೆ ಹಂತದಲ್ಲಿದೆ. ನೋಂದಣಿ ಮಾಡಿಸುವ ಹಂತದಲ್ಲಿ ತಂತ್ರಾಂಶದಲ್ಲಿ ಎನೇಬಲ್ ಎಂದು ಬರುತ್ತಿರುವ ಕಾರಣಕ್ಕೆ ಖರೀದಿ ಕೇಂದ್ರಗಳೂ ತೂಕಡಿಸುತ್ತಿವೆ. ಸಂತೆಬೆನ್ನೂರು, ಮಲೇಬೆನ್ನೂರಲ್ಲಿ ಖರೀದಿ ಕೇಂದ್ರ ತೆರೆಯುವ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಐದು ವರ್ಷದಿಂದಲೂ ಜಿಲ್ಲೆಯಲ್ಲಿ ಭತ್ತ ಖರೀದಿ ನಿರೀಕ್ಷಿತವಾಗಿಲ್ಲ. ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಭತ್ತವನ್ನು ಹಲ್ಲಿಂಗ್ ಮಾಡಿ ಪರಿವರ್ತಿತ ಅಕ್ಕಿಯಾಗಿಸುವ ವಿಚಾರದಲ್ಲಿ ಈ ಬಾರಿ ಜಿಲ್ಲೆಯ ರೈಸ್‌ಮಿಲ್‌ಗಳೂ ಸ್ಪಂದಿಸಿಲ್ಲ ಎನ್ನಲಾಗಿದೆ.
ಈ ಬಾರಿ ಆರಂಭದಲ್ಲಿ ದರ ಕುಸಿತವಾಗಿತ್ತು. ಎಂಎಸ್ಪಿ ಅಡಿಯಲ್ಲಿ ಸಾಮಾನ್ಯ ಭತ್ತಕ್ಕೆ (ಕ್ವಿಂ.)2300 ರೂ. ಗ್ರೇಡ್ ಎ ಭತ್ತಕ್ಕೆ 2320 ರೂ. ದರ ನಿಗದಿಯಾಗಿದ್ದರೂ ಶನಿವಾರ ಮಾರುಕಟ್ಟೆಯಲ್ಲಿ ದರ ಚೇತರಿಕೆ ಕಂಡಿದೆ.
ಕಡೆಯ ದಿನದಂದೂ ದಾವಣಗೆರೆಯ ಭತ್ತ ಖರೀದಿ ಕೇಂದ್ರ ಮುಚ್ಚಿತ್ತು. ಈಗಾಗಲೆ ಶೇ.50ರಷ್ಟು ಭತ್ತ ಹೊರಗೆ ಮಾರಾಟವಾಗಿದೆ. ಇನ್ನುಳಿದ ಭತ್ತವನ್ನು ಮಳೆ, ಶೀತ ಗಾಳಿ ಮುಂದುವರಿದಲ್ಲಿ ರಕ್ಷಣೆ ಮಾಡುವುದು ಕಷ್ಟವಾಗಲಿದೆ. ಹೀಗಾಗಿ ತಡ ಮಾಡದೆ ಸಿಕ್ಕ ದರಕ್ಕೆ ಮಾರಬೇಕಾಗುತ್ತದೆ ಎಂಬುದು ಅನ್ನದಾತರ ಮಾತು.
-----
ಸಾಫ್ಟ್‌ವೇರ್ ಬದಲಾವಣೆಗೆ ಆಹಾರ ನಾಗರಿಕ ಪೂರೈಕೆ ಇಲಾಖೆಯ ಪ್ರಯತ್ನ ಮುಂದುವರಿದಿದೆ. ಭತ್ತ ನೋಂದಣಿ ಖರೀದಿ ಅವಧಿ ವಿಸ್ತರಣೆ ಸಂಬಂಧ ಜಿಲ್ಲಾಧಿಕಾರಿ ಮರು ಪ್ರಯತ್ನ ನಡೆಸಲಿದ್ದಾರೆ.
ಸಿದ್ರಾಮ ಮಾರಿಹಾಳ್
ಆಹಾರ ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ.
----
ರೈತರು ನಿರಂತರ ಪ್ರತಿಭಟನೆ ಮಾಡುತ್ತಿದ್ದರೂ ಜಿಲ್ಲಾಡಳಿತ, ಖರೀದಿ ಕೇಂದ್ರಗಳು ಸುಸೂತ್ರವಾಗಿ ನಡೆಯುವಲ್ಲಿ ಕಾಲಹರಣ ಮಾಡುತ್ತಿದೆ. ಮಳೆ ಬಿಡುವು ನೀಡಿರುವ ಹಿನ್ನೆಲೆಯಲ್ಲಿ ವಾರದೊಳಗೆ ತುರ್ತಾಗಿ ನೋಂದಣಿ-ಖರೀದಿಗೆೆ ಮುಂದಾಗಬೇಕು.
ಬಿ.ಎಂ. ಸತೀಶ್ ಕೊಳೇನಹಳ್ಳಿ
ರೈತ ಮುಖಂಡ
----