ಶುರುವಾಗದ ಭತ್ತ ಖರೀದಿ ನೋಂದಣಿ

1001225174.jpg
Published on

ದಾವಣಗೆರೆ: ಜಿಲ್ಲಾಡಳಿತ, ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಸಿ 12 ದಿನವಾದರೂ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಸಂಬಂಧ, ನೋಂದಣಿ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೊಳೇನಹಳ್ಳಿ ಬಿ.ಎಂ.ಸತೀಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಖರೀದಿ ಕೇಂದ್ರ ತೆರೆದರೂ ಭತ್ತ ಖರೀದಿಸಲಿಲ್ಲ. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಭತ್ತದ ಪೈರು ಉತ್ತಮವಾಗಿದ್ದು, ಕಟಾವಿಗೆ ಒಂದು ತಿಂಗಳು ಬೇಕಾಗಬಹುದು. ಆಂಧ್ರ, ತೆಲಂಗಾಣದಲ್ಲಿ ಕಟಾವು ಪ್ರಾರಂಭವಾಗಿ ಕರ್ನಾಟಕಕ್ಕೆ ರವಾನೆಯಾಗುತ್ತಿದ್ದು, ದರ ಕುಸಿತದ ಭೀತಿ ಎದುರಾಗಿದೆ. ರೈತರ ನೆರವಿಗೆ ಧಾವಿಸಬೇಕಾದ ರಾಜ್ಯ ಸರ್ಕಾರ ಕಣ್ಮುಚ್ಚಿ ಕುಳಿತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಜಿಲ್ಲೆಯ 1.60 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆ ಇದ್ದು, 4 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ನಿರೀಕ್ಷೆ ಇದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಸಂಬಂಧ, ಕೇಂದ್ರ ಸರ್ಕಾರ ಸಾಮಾನ್ಯ ಭತ್ತಕ್ಕೆ ಕ್ವಿಂ. ಒಂದಕ್ಕೆ 2369 ರೂ., ಎ ಗ್ರೇಡ್‌ಗೆ 2389 ರೂ. ನಿಗದಿ ಮಾಡಿದೆ. ಅ.15ರಿಂದಲೇ 45 ದಿನದವರೆಗೆ ನೋಂದಣಿ ಪ್ರಕ್ರಿಯೆಗೆ ತೀರ್ಮಾನಿಸಿದ್ದರೂ ಇದುವರೆಗೆ ನೋಂದಣಿ ಶುರುವಾಗಿಲ್ಲ ಎಂದರು.

ಒಂದೆಡೆ ಸಿಬ್ಬಂದಿ ಕೊರತೆ ನೆಪ ಇನ್ನೊಂದೆಡೆ ತಂತ್ರಾಂಶ ಅಭಿವೃದ್ಧಿಯಾಗಿಲ್ಲ ಎಂದು ಸಬೂಬು ಹೇಳಲಾಗುತ್ತಿದೆ. ಸಾರ್ವಜನಿಕ ಆಹಾರ ವಿತರಣೆ ವ್ಯವಸ್ಥೆಯ ಕಾರ್ಯಭಾರ ಇದೆ. ಇದರ ಜತೆ ಖರೀದಿ ಕೇಂದ್ರದ ನಿರ್ವಹಣೆ ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಕೃಷಿ ಜಂಟಿ ನಿರ್ದೇಶಕರು ರೈತರಲ್ಲಿ ಜಾಗೃತಿ ಮೂಡಿಸಬೇಕಾದ ಕರಪತ್ರಗಳನ್ನು ಮುದ್ರಿಸಿಲ್ಲ. ಬ್ಯಾನರ್‌ಗಳನ್ನು ಅಳವಡಿಸಿಲ್ಲ. ಕಾಟಾಚಾರಕ್ಕೆ ಟಾಸ್ಕ್‌ಫೋರ್ಸ್ ಸಭೆ ನಡೆಸಲಾಗಿದ್ದು ಖರೀದಿ ಕೇಂದ್ರ ಮುಚ್ಚುವ ನಾಟಕ ನಡೆದಿದೆ. ಇದು ರೈತ ವಿರೋಧಿಯಾಗಿದೆ ಎಂದರು.

ಜಿಲ್ಲಾಡಳಿತ ತತ್‌ಕ್ಷಣದಿಂದಲೇ ನೋಂದಣಿ ಆರಂಭಿಸಬೇಕು. ಕೇಂದ್ರ ಸರ್ಕಾರ ನಿಗದಿಪಡಿಸಿದ ದರಕ್ಕೆ ರಾಜ್ಯ ಸರ್ಕಾರ ಕ್ವಿಂಟಾಲ್ ಒಂದಕ್ಕೆ 1 ಸಾವಿರ ರೂ. ಪ್ರೋತ್ಸಾಹಧನ ಘೋಷಣೆ ಮಾಡಿ, 3389 ರೂ. ದರದಂತೆ ಭತ್ತ ಖರೀದಿಸಬೇಕು.

ನೋಂದಣಿಗಾಗಿ 45 ದಿನಗಳ ಕಾಲಾವಕಾಶ ಕೊಡಬೇಕು. ಪ್ರತಿ ಎಕರೆಗೆ 25 ಕ್ವಿಂಟಾಲ್ನಂತೆ ಗರಿಷ್ಠ 50 ಕ್ವಿಂ. ಖರೀದಿಸುವ ನಿಯಮ ಸಡಿಲಗೊಳಿಸಿ, ರೈತರು ಬೆಳೆದ ಸಂಪೂರ್ಣ ಭತ್ತವನ್ನು ಖರೀದಿಸಬೇಕು. ರೈತರು ತರುವ ತಲಾ ಗೋಣಿಚೀಲಕ್ಕೆ 50 ರೂ. ನೀಡಬೇಕು.

ರೈತರು ಟ್ರ್ಯಾಕ್ಟರ್ ಟ್ರೈಲರ್‌ಗಳಲ್ಲಿ ಭತ್ತ ತಂದು ತೂಗಿಸಿ, ಖರೀದಿ ಕೇಂದ್ರಗಳಲ್ಲಿ ಸುರಿಯಲು ಅವಕಾಶ ಮಾಡಿಕೊಡಬೇಕು. ಇದರಿಂದ ಗೋಣಿಚೀಲದಲ್ಲಿ ತುಂಬುವುದು, ಲೋಡಿಂಗ್ ಮಾಡುವುದು ತಪ್ಪಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಣಬೇರು ಜೀವನಮೂರ್ತಿ, ಆರನೇ ಕಲ್ಲು ವಿಜಯಕುಮಾರ್, ಗೋಪನಾಳ್ ಕರಿಬಸಪ್ಪ, ಕುರ್ಕಿ ರೇವಣಸಿದ್ದಪ್ಪ, ಕುರ್ಕಿ ಕೆ.ಎಚ್. ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net