

ದಾವಣಗೆರೆ: ಭತ್ತದ ಬೆಳೆಯಲ್ಲಿ ಯಾಂತ್ರೀಕೃತ ನಾಟಿ ಪದ್ಧತಿ ಜತೆಗೆ ಪರ್ಯಾಯ ತೇವಗೊಳಿಸುವ ಮತ್ತು ಒಣಗಿಸುವ ಕ್ರಮ (ಎಡಬ್ಲುೃಡಿ) ಅಳವಡಿಕೆಯಿಂದಾಗಿ ಉತ್ಪಾದನಾ ವೆಚ್ಚ ಹಾಗೂ ನೀರಿನ ಉಳಿತಾಯವಾಗಿದೆ ಎಂದು ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ ಹೇಳಿದರು.
ಹಳೆಬಾತಿ ಗ್ರಾಮದಲ್ಲಿ ಯಾಂತ್ರೀಕೃತ ನಾಟಿ ಭತ್ತದ ಬೆಳೆಯಲ್ಲಿ ಪರ್ಯಾಯ ಒಣಗಿಸುವ ಪದ್ಧತಿಯ ಮುಂಚೂಣಿ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿ, ಈ ಪದ್ಧತಿ ಅನುಸರಣೆಯಿಂದ ವಾತಾವರಣದಲ್ಲಿ ಮೀಥೇನ್ ಉತ್ಪಾದನೆ ತಗ್ಗಿಸಲು ಸಹಕಾರಿಯಾಗಲಿದೆ
ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಪ್ರಮುಖ ಆಹಾರ ಬೆಳೆ ಭತ್ತದ ಉತ್ಫಾದನೆಗೆ ಕೃಷಿ ಇಲಾಖೆ ಒದಗಿಸುವ ಸೌಕರ್ಯ ಹಾಗೂ ವಿಜ್ಞಾನ, ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು ಎಂದರು.
ಪ್ರಗತಿಪರ ಕೃಷಿಕ ಶಂಕರಮೂರ್ತಿ ಮಾತನಾಡಿ, ಈ ಪದ್ಧತಿಗಳನ್ನು ಅಳವಡಿಸಿಕೊಂಡಿರುವುದರಿಂದ ಎಕರೆಗೆ ಎಂಟರಿಂದ 10,000 ರೂ. ಜತೆಗೆ ಶೇ. 20ರಷ್ಟು ನೀರನ್ನು ಉಳಿತಾಯ ಮಾಡಬಹುದು ಎಂದರು.
ಮಣ್ಣು ವಿಜ್ಞಾನಿ ಎಚ್.ಎಂ.ಸಣ್ಣಗೌಡ ಮಾತನಾಡಿ ಮಣ್ಣಿನ ಪರೀಕ್ಷೆ ಆಧಾರದ ಮೇಲೆ ರಸಗೊಬ್ಬರಗಳನ್ನು ಬಳಕೆ ಮಾಡುವುದು ಸೂಕ್ತ. ಸರಿಯಾದ ಪ್ರಮಾಣದಲ್ಲಿ ಲಘು ಪೋಷಕಾಂಶಗಳ ಬಳಕೆಯಿಂದ ಮಣ್ಣಿನ ಫಲವತ್ತತೆ, ಇಳುವರಿ ಹೆಚ್ಚಿಸಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಸಿ ಸಂರಕ್ಷಣೆ ತಜ್ಞ ಡಾ.ಟಿ.ಜಿ. ಅವಿನಾಶ್ ಸಮಗ್ರ ಸಸ್ಯ ಸಂರಕ್ಷಣೆ ಬಗ್ಗೆ ಮಾಹಿತಿ ಒದಗಿಸಿದರು. ನಂತರ ಕ್ಷೇತ್ರ ಭೇಟಿ ಮಾಡಿ ರೈತರು ಮತ್ತು ವಿಜ್ಞಾನಿಗಳು ಚರ್ಚೆ ನಡೆಸಿದರು. ಪ್ರಗತಿಪರ ಕೃಷಿಕ ಮಲ್ಲಿಕಾರ್ಜುನಪ್ಪ , ಜಯಣ್ಣ, ಹರೀಶ್ ಶಾಂತಕುಮಾರ್ ಹಾಗೂ ಇತರರಿದ್ದರು.
---