

ದಾವಣಗೆರೆ: ತಂದೆ-ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತಿಗೆ ದಾವಣಗೆರೆಯಲ್ಲಿ ಮಂಗಳವಾರ ಸಂಭವಿಸಿದ ಕೊಲೆ ಪ್ರಕರಣವೊಂದು ಸಾಕ್ಷಿಯಾಗಿದೆ.
ಎರಡು ವರ್ಷದಿಂದಲೂ ದೂರವಿದ್ದ ದಂಪತಿ ಮಂಗಳವಾರ ಭೇಟಿಯಾಗಿದ್ದೇ ಕೊನೇ. ಮುಂದುವರಿದ ಕಲಹದಲ್ಲಿ ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ.
ಒಂದು ಮಗುವನ್ನಾದರೂ ತನ್ನ ಸುಪರ್ದಿಗೆ ಕೊಡಬೇಕೆಂದು ಅರ್ಜಿ ಸಲ್ಲಿಸಿದ್ದ ಅಮ್ಮ ಇನ್ನಿಲ್ಲ. ಅಮ್ಮನ ಮಡಿಲಿನಿಂದ ಶಾಶ್ವತವಾಗಿ ವಂಚಿತವಾದ ಇಬ್ಬರ ಮಕ್ಕಳ ಸ್ಥಿತಿ ಮಾತ್ರ ಶೋಚನೀಯ!
ದಾವಣಗೆರೆ ಕೆಟಿಜೆ ನಗರ ಮೂಲದ ಮುಷ್ಕಾನ್ (26) ಕೊಲೆಯಾದ ಮಹಿಳೆ. ಆರೋಪಿ, ದಾವಣಗೆರೆ ತಾಲೂಕು ಕಾಡಜ್ಜಿಯ ಕಲೀಂ ಉಲ್ಲಾನನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ. ಜಗಳ ಬಿಡಿಸಲು ಮುಂದಾಗಿದ್ದ ಅತ್ತೆ ಫರ‌್ಹಾನಾ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಲಕರ ಆಸರೆ ವಂಚಿತ ಅನಾಥ ಮಕ್ಕಳಿಬ್ಬರು ಬಾಲಮಂದಿರ ಸೇರುವ ಸಾಧ್ಯತೆ ಇದೆ.
ಘಟನೆ ವಿವರ:
ಕಲೀಂ ಉಲ್ಲಾ- ಮುಷ್ಕಾನ್ 8 ವರ್ಷದ ಹಿಂದೆ ವಿವಾಹವಾಗಿ ಕೆಲ ವರ್ಷ ಅನ್ಯೋನ್ಯ ದಾಂಪತ್ಯ ನಡೆಸಿದ್ದರು. 4 ವರ್ಷದ ಗಂಡು ಮಗು, ಮೂರು ವರ್ಷದ ಹೆಣ್ಣುಮಗು ಇತ್ತು. ಕಲೀಂ ಗಾರೆ ಕೆಲಸ ಮಾಡುತ್ತಿದ್ದ.
ಎರಡು ವರ್ಷದಿಂದ ದಂಪತಿ ನಡುವೆ ಕಲಹ ಶುರುವಾಗಿತ್ತು. ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿದ್ದ ಪತಿ, ಈ ಬಗ್ಗೆ ನನ್ನ ಬಳಿ ಸಾಕ್ಷೃಗಳಿವೆ ಎಂಬ ತಗಾದೆ ತೆಗೆಯುತ್ತಲೇ ಇದ್ದ. ಇದರಿಂದ ಆಗಾಗ್ಗೆ ಜಗಳ ನಡೆಯುತ್ತಿತ್ತು. ಮಹಿಳಾ ಠಾಣೆ ಹಂತದಲ್ಲಿ ಮೂರ್ನಾಲ್ಕು ಬಾರಿ ರಾಜಿ ಪಂಚಾಯ್ತಿಯೂ ನಡೆದಿತ್ತು.
ಆದರೆ, ದಾಂಪತ್ಯದ ಬಿರುಕು ಸರಿಯಾಗಲೇ ಇಲ್ಲ. ಆಗ ಎರಡೂ ತೀರಗಳಂತೆ ಪರಸ್ಪರ ದೂರವಿದ್ದೇ ವಾಸ ಮಾಡುತ್ತಿದ್ದರು. ಇಬ್ಬರೂ ಮಕ್ಕಳು ಕಲೀಂ ಉಲ್ಲಾ ಬಳಿಯೇ ಇದ್ದವು. ಆದರೆ ಒಂದು ಮಗುವನ್ನಾದರೂ ತನಗೆ ಕೊಡಿಸಿಕೊಡಿ ಎಂದು ಮಕ್ಕಳ ಕಲ್ಯಾಣ ಸಮಿತಿಗೆ ಮುಷ್ಕಾನ್ ಅರ್ಜಿ ಸಲ್ಲಿಸಿದ್ದರು.
ಇತ್ತ ಮಕ್ಕಳ ಕಲ್ಯಾಣ ಸಮಿತಿಯದ್ದೂ ಒಂದು ಕಥೆ ಇದೆ. ವಕೀಲರು, ಸಾಮಾಜಿಕ ಕಾರ್ಯಕರ್ತರು ಒಳಗೊಂಡ ಈ ಅರೆನ್ಯಾಯಿಕ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಚಿತ್ರದುರ್ಗ, ಹಾವೇರಿಯಿಂದಲೇ ಬರುತ್ತಿದ್ದರು. ಇತ್ತೀಚೆಗಷ್ಟೇ ದಾವಣಗೆರೆಯ ಹೊಸ ಸಮಿತಿ ರಚನೆಯಾಗಿತ್ತು. ಮಂಗಳವಾರವೇ ಮೊದಲ ಕೌನ್ಸೆಲಿಂಗ್ ನಡೆಯಬೇಕಿತ್ತು. ದುರಾದೃಷ್ಟವಶಾತ್ ಇದಕ್ಕೂ ಕಲ್ಲು ಬಿದ್ದಿತು!
ತಾಯಿ ಜತೆ ಮಕ್ಕಳು ಸೇರಿದರೆ ಹಾಳಾಗುತ್ತಾರೆ ಎಂದು ವಾದಿಸಿದ್ದ ಗಂಡ, ಮಗುವನ್ನು ಕೊಡಲು ಒಪ್ಪಿರಲಿಲ್ಲ. ಇದೇ ಸಂಬಂಧ ಆಪ್ತ ಸಮಾಲೋಚನೆ ನಡೆಯುವ ಹಂತದಲ್ಲಿತ್ತು. ಅಷ್ಟು ಹೊತ್ತಿಗಾಗಲೆ ಖ್ಯಾತೆ ತೆಗೆದ ಗಂಡ ಸಿಟ್ಟಿನ ಭರದಲ್ಲಿ ಪತ್ನಿಯ ಕುತ್ತಿಗೆ, ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾನೆ. ರಕ್ತದ ಮಡುವಿನಲ್ಲಿದ್ದ ಮುಷ್ಕಾನ್, ಚಿಗಟೇರಿ ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯೆಯೇ ಕೊನೆ ಉಸಿರೆಳೆದರು. ಜಗಳ ಬಿಡಿಸಲು ಮುಂದಾಗಿ ಚಾಕು ಇರಿತಕ್ಕೊಳಗಾದ ಅತ್ತೆ ಫರ‌್ಹಾನಾ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಲ್ಕು ದಿನದ ಹಿಂದಷ್ಟೇ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಆವರಣದಲ್ಲೇ ಶುಕ್ರವಾರ, ಪತಿಯೊಬ್ಬ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದ. ಇದೀಗ ಎರಡನೇ ಪ್ರಕರಣ ನಡೆದಿದೆ. ಆರೋಪಿ ಕಲೀಂ ಉಲ್ಲಾ ಪೊಲೀಸರ ಬಂಧನದಲ್ಲಿದ್ದಾನೆ. ಅನಾಥ ಸ್ಥಿತಿಯಲ್ಲಿರುವ ಇಬ್ಬರು ಮಕ್ಕಳು ಸದ್ಯಕ್ಕೆ ಸರ್ಕಾರಿ ಬಾಲಮಂದಿರ ಸೇರುವ ಸಾಧ್ಯತೆ ಇದೆ.
ನ್ಯಾಯಾಲಯವು ನಿಯಮಾನುಸಾರ ಸಾಮಾಜಿಕ ತನಿಖಾ ವರದಿ ಪಡೆದು (ಗಂಡನ ಮನೆ) ಅಜ್ಜ- ಅಜ್ಜಿ ಅಥವಾ ಸಂಬಂಧಿಗಳು ಸಮರ್ಥವಾಗಿ ಸಾಕಬಲ್ಲರೆ ಎಂಬುದನ್ನು ದೃಢಪಡಿಸಿಕೊಂಡು ಮುಂದಿನ ನಿರ್ಣಯ ಕೈಗೊಳ್ಳುವ ಅವಕಾಶವಿದೆ. ಅಲ್ಲಿಯವರೆಗೂ ಬಾಲಮಂದಿರದಲ್ಲೇ ಉಳಿಸಬಹುದು ಎನ್ನುತ್ತವೆ ಮೂಲಗಳು.