

ದಾವಣಗೆರೆ: ಆಪರೇಷನ್ ಕಮಲದಿಂದಾಗಿ ಪಾಲಿಕೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ರಮೇಶ್ ಶಿವನಹಳ್ಳಿ ಅವರು ಗುರುವಾರ ಬಿಜೆಪಿ ಸೇರಿದ್ದರ ಬೆನ್ನಲ್ಲೇ ಶುಕ್ರವಾರ ಜಗಳೂರು ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ಟಿ. ಗುರುಸಿದ್ದನಗೌಡ ಆಪರೇಷನ್ ಹಸ್ತಕ್ಕೆ ಒಳಗಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಮ್ಮುಖದಲ್ಲಿ, ದಾವಣಗೆರೆಯ ತಮ್ಮ ನಿವಾಸದಲ್ಲಿ Dara ಡಾ.ಟಿ.ಜಿ.ರವಿಕುಮಾರ್ ಹಾಗೂ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಪತ್ರಕರ್ತರೊಂದಿಗೆ ಮಾತನಾಡಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಗುರುಸಿದ್ದನಗೌಡ ಅವರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ ಎಂದರು.
ವೈದ್ಯ ಡಾ.ಟಿ.ಜಿ. ರವಿಕುಮಾರ್ ಮಾತನಾಡಿ ಬಿಜೆಪಿಯಲ್ಲಿನ ಸರ್ವಾಧಿಕಾರಿ ಧೋರಣೆಯನ್ನು ನಿರಂತರ ವಿರೋಧಿಸಿದ್ದೆವು. ವಿದ್ಯಾವಂತರಿಗೆ ಲೋಕಸಭೆ ಟಿಕೆಟ್ ನೀಡುವಂತೆ ಮನವಿ ಮಾಡಿದರೂ ಹೈಕಮಾಂಡ್ ಸ್ಪಂದಿಸಲಿಲ್ಲ. ಸಂಸದರ ಏಕಸ್ವಾಮ್ಯ ಆಡಳಿತದಿಂದ ಬೇಸತ್ತು ಬಿಜೆಪಿ ತೊರೆದೆವು ಎಂದು ಹೇಳಿದರು.
ಮಲ್ಲಿಕಾರ್ಜುನ್ ಜಿಲ್ಲೆಯ ಒಬ್ಬ ಸಮರ್ಥ ಆಡಳಿತಗಾರ. ಅವರ ಪತ್ನಿ ಡಾ. ಪ್ರಭಾ ವಿದ್ಯಾವಂತರಿದ್ದು, ಅವರು ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದಲ್ಲಿ ಈ ಭಾಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ, ಎನ್.ಜಿ.ಪುಟ್ಟಸ್ವಾಮಿ, ಶಿವನಗೌಡ, ಕಮ್ಮತ್ತಹಳ್ಳಿ ಮಂಜುನಾಥ್, ಶ್ಯಾಗಲೆ ಜಯಣ್ಣ ಹಾಗೂ ಕಾಂಗ್ರೆಸ್‌ಗೆ ಸೇರ್ಪಡೆಯಾದ ಟಿ.ಜಿ.ಅರವಿಂದ್, ಟಿ.ಜಿ.ಪ್ರವೀಣ್, ಕಕ್ಕರಗೊಳ್ಳದ ಕಲ್ಲಿಂಗಪ್ಪ, ನಾಗರಾಜ ಸ್ವಾಮಿ, ಮಟ್ಟಿಕಲ್ಲು ವೀರಭದ್ರಸ್ವಾಮಿ, ಗೌರಿಪುರದ ಶಿವಣ್ಣ ಇದ್ದರು.
---