ಒಪಿಡಿ ಬಂದ್ ರೋಗಿಗಳ ಪರದಾಟ

1000320284.jpg
Published on

ದಾವಣಗೆರೆ: ಕೋಲ್ಕತ್ತದ ಕರ್ತವ್ಯನಿರತ ಕಿರಿಯ ವೈದ್ಯೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಪ್ರಕರಣ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ನೀಡಿದ್ದ ವೈದ್ಯರ ಮುಷ್ಕರಕ್ಕೆ ಜಿಲ್ಲಾದ್ಯಂತ ಶನಿವಾರ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕರ್ನಾಟಕ ಸರ್ಕಾರಿ ವೈದ್ಯರ ಸಂಘ, ನರ್ಸಿಂಗ್ ಹೋಂ ಅಸೋಸಿಯೇಷನ್, ಔಷಧ ವಿತರಕರ ಸಂಘಗಳು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದವು.
ಜಿಲ್ಲೆಯ 60ಕ್ಕೂ ಹೆಚ್ಚು ನರ್ಸಿಂಗ್ ಹೋಂಗಳು, ಸುಮಾರು 300ಕ್ಕೂ ಹೆಚ್ಚು ಕ್ಲಿನಿಕ್‌ಗಳು, ಡೇ ಕೇರ್ ಸೆಂಟರ್‌ಗಳಲ್ಲಿ ಬೆಳಗ್ಗಿನಿಂದಲೇ ಹೊರರೋಗಿ ವಿಭಾಗದ ಸೇವೆ ಸ್ಥಗಿತಗೊಳಿಸಲಾಗಿತ್ತು. ತುರ್ತು ಚಿಕಿತ್ಸಾ ವಿಭಾಗ, ತೀವ್ರ ನಿಗಾ ಚಿಕಿತ್ಸಾ ವಿಭಾಗ, ಡಯಾಲಿಸಸ್ ಘಟಕಗಳು ಕಾರ್ಯ ನಿರತವಾಗಿದ್ದವು. ಅಲ್ಲಿನ ಸೀಮಿತ ಸಂಖ್ಯೆಯ ವೈದ್ಯರು ಕೈ ತೋಳುಗಳಿಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.
ದಿನವೂ ಗಿಜಿಗುಡುತ್ತಿದ್ದ ಚಿಗಟೇರಿ ಆಸ್ಪತ್ರೆಯ ಒಪಿಡಿ ವಿಭಾಗ ಬಂದ್ ಆಗಿತ್ತು. ಶೆಟರ್ಸ್‌ ಮೇಲೆ ‘ತುರ್ತು ಚಿಕಿತ್ಸಾ ವಿಭಾಗದಲ್ಲಿ ಮಾತ್ರ ಚಿಕಿತ್ಸೆ ಲಭ್ಯವಿರುತ್ತದೆ’ ಎಂಬ ಪಟ್ಟಿ ಅಂಟಿಸಲಾಗಿತ್ತು. ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳ ಒಪಿಡಿ ಕೇಂದ್ರಗಳತ್ತ ಬರುವ ರೋಗಿಗಳು ಮತ್ತು ಕುಟುಂಬದವರಿಗೆ ‘ಇವತ್ತು ಡಾಕ್ಟರ್ ಸಿಗಲ್ಲ, ನಾಳೆ ಬನ್ನಿ’ ಎಂದು ಹೇಳಿ ಕಳಿಸುತ್ತಿದ್ದುದು ಕಂಡುಬಂದಿತು. ನೋಂದಣಿ ವಿಭಾಗದಲ್ಲಿ ‘ಕ್ಲೋಸಡ್‌‘ ಬೋರ್ಡ್ ನೇತು ಹಾಕಲಾಗಿತ್ತು.
ವೈದ್ಯರ ಮುಷ್ಕರದಿಂದಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಬಂದ ಅನೇಕರು ಪರದಾಡಿದರು. ಮುಷ್ಕರದ ಮಾಹಿತಿ ಇಲ್ಲದೆ ಬಂದಿದ್ದ ಸುತ್ತಮುತ್ತಲ ಜಿಲ್ಲೆಗಳ ರೋಗಿಗಳು ಚಿಗಟೇರಿ ಜಿಲ್ಲಾಸ್ಪತ್ರೆಯ ನೋಂದಣಿ ವಿಭಾಗದ ಕಟ್ಟೆ ಮೇಲೆ ಕೂತಿದ್ದರು. ಡ್ರೆಸ್ಸಿಂಗ್ ಮಾಡಿಸಿಕೊಳ್ಳಲು ಬಂದವರ ಸಂಖ್ಯೆ ಹೆಚ್ಚಿತ್ತು.
ಹರ್ನಿಯಾ ತೊಂದರೆಗೀಡಾಗಿ ಸ್ಕಾೃನಿಂಗ್ ಬಳಿಕ ಆಪರೇಷನ್ ಮಾಡಿಸಲೆಂದು ಜಿಲ್ಲಾಸ್ಪತ್ರೆಗೆ ಬಂದಿದ್ದ ಕೂಡ್ಲಿಗಿ ತಾಲೂಕು ಹುಲಿಕೆರೆ ಗ್ರಾಮದ 80 ವರ್ಷದ ವೃದ್ಧ ಬಸಣ್ಣ ಮುಷ್ಕರದಿಂದ ನಲುಗಿದರು. ‘ಸ್ಟ್ರೈಕ್ ಐತಿ ಅಂಥ ಗೊತ್ತಿರಲಿಲ್ಲ. ಇಲ್ಲಾಂದ್ರೆ ಬಸ್‌ಚಾರ್ಜ್ ಖರ್ಚು ಮಾಡಿ ಇಲ್ಲಿ ತನಕ ಯಾಕ್ ಬರ‌್ಲಿ ಹೇಳ್ರೀ’ ಎನ್ನುತ್ತ ಬೇಸರ ವ್ಯಕ್ತಪಡಿಸಿದರು.
ಪತ್ನಿಯ ಮಾನಸಿಕ ಚಿಕಿತ್ಸೆಗೆ ಖಾಲಿಯಾಗಿದ್ದ ಮಾತ್ರೆಗಳನ್ನು ಪಡೆದುಹೋಗಲೆಂದು ಬಂದಿದ್ದ ದಾವಣಗೆರೆ ತಾಲೂಕು ಜಡಗನಹಳ್ಳಿಯ ಮೈಲಾರಪ್ಪ ‘ಇವತ್ತು ಆಸ್ಪತ್ರೆ ನಡೆಯಲ್ಲ ಅಂತ ಗೊತ್ತಿದ್ದರೆ ಬರುತ್ತಿರಲಿಲ್ಲ. ನಾಳೇನೂ ರಜೆ. ಸೋಮವಾರವೇ ಬರಬೇಕು’ ಎಂದು ಹೇಳುತ್ತ ಹೊರನಡೆದರು.
ಕಾಲು ಗ್ಯಾಂಗ್ರಿನ್ ಸಮಸ್ಯೆಗಿಡಾಗಿದ್ದ ಕರೂರು ಇಂಡಸ್ಟ್ರಿಯಲ್ ಏರಿಯಾದ ಗಂಗಮ್ಮನಿಗೆ ಚಿಕಿತ್ಸೆ ಸಿಗದೆ ಪತಿ ಹಾಲಪ್ಪ, ಮೊಮ್ಮಗಳ ಜತೆ ಮನೆಯತ್ತ ಹೆಜ್ಜೆ ಹಾಕಿದು ಕಂಡುಬಂದಿತು. ಅಪಘಾತದಿಂದ ತಲೆ ಪೆಟ್ಟಿಗೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೋಲ್ಕುಂಟೆ ಗ್ರಾಮದ ಬಾಲಕ ಆನಂದ್ ಡ್ರಸ್ಸಿಂಗ್‌ಗೆಂದು ಕದ ಹಾಕಿದ್ದ ಕೊಠಡಿ ಹೊರಗೆ ಕಾಯುತ್ತಲಿದ್ದ.
ಮೂತ್ರಪಿಂಡ ಸಮಸ್ಯೆ ಪರಿಣಾಮ ಕಾಲೂತಕ್ಕೆ ಒಳಗಾಗಿದ್ದ ಹನುಮಂತಪ್ಪ ಹೆಚ್ಚು ಹೊತ್ತು ಕೂರಲಾಗದೆ ಪರಿತಪಿಸಿದರು. ಕಿಡ್ನಿ ಸ್ಟೋನ್ ಸಮಸ್ಯೆಯಲ್ಲಿದ್ದ ನಿಂಬಳಗೆರೆ ಗ್ರಾಮದ ತಾಯಿ ಮಂಜುಳಾ ಅವರಿಗೆ ಚಿಕಿತ್ಸೆ ಕೊಡಿಸಲಾಗದೆ ಮಗ ಪರದಾಡಿದರು. ಗಾಯದ ಮೇಲೆ ಕಾಲಿಗೆ ಸಲಿಕೆ ಬಡಿಸಿಕೊಂಡು ಓಡಾಡಲು ಸಾಧ್ಯವಾಗದೆ ಬಂದಿದ್ದ ಸಾಲಕಟ್ಟೆಯ ಸಿದ್ದೇಶಪ್ಪ ‘ಡಾಕ್ಟರ್ ಎಲ್ಲಿ ಸಿಗುತ್ತಾರೆ’ ಎಂದು ಗೋಗರೆಯುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net