

ದಾವಣಗೆರೆ: ಹಳೆಯ ವಿದ್ಯಾರ್ಥಿಗಳ ಸಂಘಗಳ ಬೆಂಬಲದೊಂದಿಗೆ ಐಐಟಿ, ಐಐಎಂ ಸಂಸ್ಥೆಗಳು ಎತ್ತರಕ್ಕೆ ಬೆಳೆಯುತ್ತಿವೆ. ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ, ಓದಿದ ಸಂಸ್ಥೆಗೆ ಕೊಡುಗೆ ನೀಡುವ ಹಾಗೂ ಸಂವಹನ ಶಕ್ತಿಯಾಗಬೇಕು ಎಂದು ಜಿಎಂ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ ಸಲಹೆ ನೀಡಿದರು.
ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಹಳೇ ವಿದ್ಯಾರ್ಥಿಗಳ ಪುನರ್ಮಿಲನ -2 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೆನಪುಗಳಿಲ್ಲದ ಜೀವನವು ನರಕದಂತೆ. ಒಳ್ಳೆಯ ನೆನಪುಗಳು ಚಿರಂತನ ಸ್ಥಾನ ತರಲಿವೆ. ಹಳೆಯ ವಿದ್ಯಾರ್ಥಿಗಳ ಮಿಲನ ಕಾರ್ಯಕ್ರಮವು ಜೀವನವನ್ನು ಮರು ನವೀಕರಿಸುವ ಹಾಗೂ ಪರಿಶುದ್ಧ ಶೈಕ್ಷಣಿಕ ಅಂತರಕ್ರಿಯೆಯಾಗಿದೆ. ನಿಮ್ಮಲ್ಲಿನ ಜ್ಞಾನವನ್ನು ವಿದ್ಯಾರ್ಥಿ ಸಮುದಾಯಕ್ಕೆ ಹಾಗೂ ಮುಂದಿನ ತಲೆಮಾರಿಗೆ ಹಂಚಿಕೊಳ್ಳಬೇಕಿದೆ ಎಂದರು.
ಎಂಬಿಎ ವಿಭಾಗದ ನಿರ್ದೇಶಕ ಡಾ. ಬಿ. ಬಕ್ಕಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ಮಾನವೀಯ ಸಂಬಂಧಗಳ ಜತೆಗೆ ಮಾನವೀಯ ಅಂತರಕ್ರಿಯೆ ಕಡಿಮೆಯಾಗುತ್ತಿದೆ. ಇಂತಹ ಸಭೆಗಳಲ್ಲಿ ಮಾನವೀಯ ಸಂಬಂಧ ಮತ್ತು ಬೆಂಬಲವನ್ನು ಪ್ರೀತಿ ಹಾಗೂ ನಿಷ್ಠೆಯಿಂದ ಅನುಭವಿಸಬಹುದು ಎಂದರು.
ಜ್ಞಾನವು ತುಂಬಾ ವೇಗವಾಗಿ ಬೆಳೆದಿದೆ. ಇದರ ಬೆಳವಣಿಗೆಯಂತೆ ಜ್ಞಾನದ ಹಂಚಿಕೆ ಮತ್ತು ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಇದು ಮುಂದಿನ ವಿದ್ಯಾರ್ಥಿಗಳಿಗೆ ಅನುಭವದ ದಾರಿಯಾಗಲಿದೆ ಎಂದರು.
ಜಿಎಂಐಟಿ ಕಾಲೇಜಿನ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ, ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಪಿ.ಎಸ್. ಬಸವರಾಜು, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಐ. ವಿನಯ್ ಇತರರಿದ್ದರು.
ಎರಡನೇ ವರ್ಷದ ಈ ಪುನರ್ಮಿಲನ ಕಾರ್ಯಕ್ರಮ ಇದಾಗಿತ್ತು. 2008ರಿಂದ 2024ನೇ ಸಾಲಿನವರೆಗೆ ಒಟ್ಟು 15 ಬ್ಯಾಚ್ ಗಳಿಂದ 900 ವಿದ್ಯಾರ್ಥಿಗಳು ಪದವಿ ಪಡೆದು ತೆರಳಿದ್ದು, ಕಾರ್ಯಕ್ರಮದಲ್ಲಿ 250 ಹಳೆಯ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ವೀರೇಶ್ ಮತ್ತು ಜ್ಯೋತಿ ದಂಪತಿ, ಸಂತೋಷ್ ಕಾಟ್ವೆ, ಪುನೀತ್ ಎಸ್. ಕೊಟ್ರೆ, ವಸಂತ ಕುಮಾರ್ ಹೊಸಮನಿ, ರವಿ ಹಿರೇಮಠ್ ತಮ್ಮೆಲ್ಲ ಕಾಲೇಜು ದಿನಗಳ ನೆನಪು, ಅನಿಸಿಕೆ ಹಂಚಿಕೊಂಡರು.