

ದಾವಣಗೆರೆ: ವೃಂದ ಮತ್ತು ನೇಮಕಾತಿ ನಿಯಮ 2011ರ ತಿದ್ದುಪಡಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದರ ಹಿನ್ನೆಲೆಯಲ್ಲಿ ಮಂಗಳವಾರ ನಗರಪಾಲಿಕೆ ಕಾರ್ಯ ಚಟುವಟಿಕೆಗಳು ಸ್ತಬ್ದವಾಗಿದ್ದವು.
ನಗರಪಾಲಿಕೆಯ ಎ, ಬಿ ಹಾಗೂ ಸಿ ದರ್ಜೆಯ ಸುಮಾರು 500 ಅಧಿಕಾರಿ-ನೌಕರರು. ವಲಯ ಕಚೇರಿ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಮುಷ್ಕರದಲ್ಲಿ ಭಾಗಿಯಾಗಿದ್ದರು. ಬಹುತೇಕ ಪೌರಕಾರ್ಮಿಕರು ಕೂಡ ಕೆಲಸಕ್ಕೆ ಹಾಜರಾಗಿರಲಿಲ್ಲ. ತ್ಯಾಜ್ಯ ವಿಲೇ ವಾಹನಗಳ ಚಾಲಕರು, ಹೆಲ್ಪರ್, ಲೋಡರ್ಸ್‌ಗಳು ಕೂಡ ಗೈರಾಗಿದ್ದರು.
ಹೀಗಾಗಿ ನಗರ ಸ್ವಚ್ಛತೆ ಕಾರ್ಯಕ್ಕೆ ಬೆಳಗ್ಗಿನಿಂದಲೇ ಬ್ರೇಕ್ ಬಿದ್ದಿತ್ತು. ಮುಷ್ಕರ ಹಿನ್ನೆಲೆಯಲ್ಲಿ ಭಾನುವಾರವೇ ವಾಣಿಜ್ಯ ಪ್ರದೇಶ, ಮಾರುಕಟ್ಟೆ ಪ್ರಾಂಗಣದ ಕಸ ಸಂಗ್ರಹಿಸಲಾಗಿತ್ತು. ಆದರೆ ಮುಷ್ಕರ ಪರಿಣಾಮ ಕಸ ಎತ್ತುವಳಿಗೂ ಬಿಸಿ ತಟ್ಟಿತ್ತು.
ಪಾಲಿಕೆ ಸುತ್ತ ತ್ಯಾಜ್ಯ ವಿಲೇವಾರಿಯ ಲಾರಿ, ಟಿಪ್ಪರ್, ಟ್ರಾೃಕ್ಟರ್‌ಗಳು, ಕ್ಯಾಂಪ್ಯಾಕ್ಟರ್, ಸಕ್ಕಿಂಗ್, ಜೆಟ್ಟಿಂಗ್, ಸೂಪರ್ ಸಕ್ಕರ್ ಯಂತ್ರಗಳು, ಜೆಸಿಬಿಗಳು ವಿಶ್ರಾಂತಿ ಪಡೆದವು. ಶವಗಳನ್ನು ರುದ್ರಭೂಮಿಗೆ ಸಾಗಿಸುವ ಮುಕ್ತಿ ವಾಹಿನಿ ವಾಹನಗಳು ಕೂಡ ಬೀದಿಗಿಳಿಯಲಿಲ್ಲ. ಮುಖ್ಯ ಕಚೇರಿ ಆವರಣ ಜನರು, ನೌಕರರಿಲ್ಲದೆ ಭಣಗುಟ್ಟಿತು.
ಕಂದಾಯ, ಸಿವಿಲ್-ಒಳಚರಂಡಿ, ನಗರ ಯೋಜನೆ, ವಿದ್ಯುತ್, ಟಪಾಲು ಶಾಖೆಗಳು ಬೀಗ ಹಾಕಿದ್ದರಿಂದ ಸಾರ್ವಜನಿಕರು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಹೊರನಡೆದರು. ಮುಷ್ಕರ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ನೌಕರರ ಸಂಘ ಮನವಿ ಮಾಡಿದ್ದ ಫ್ಲೆಕ್ಸನ್ನು ಕಚೇರಿ ಸುತ್ತಮುತ್ತಲಲ್ಲಿ ಅಳವಡಿಸಲಾಗಿತ್ತು.
ಜನನ ಮರಣ ಪ್ರಮಾಣ ವಿಭಾಗ ಸೇವೆ ಸ್ಥಗಿತವಾಗಿತ್ತು. ಆದರೂ ವಿವಿಧೆಡೆಗಳಿಂದ ಬಂದ ಜನರು ಮಕ್ಕಳು, ಕುಟುಂಬ ಸದಸ್ಯರ ಜನನ ಮರಣ ಪ್ರಮಾಣಪತ್ರ, ಹೆಸರು ತಿದ್ದುಪಡಿ ಮಾಡಿಕೊಳ್ಳಲು ದೂರದಿಂದ ಬಂದ ಜನರು ಕಾಯುತ್ತಲಿದ್ದರು. ಕೆಲವರು ಆಯುಕ್ತರನ್ನು ಸಂಪರ್ಕಿಸಿದರು.
ಇಟ್ಟಿಗೆಭಟ್ಟಿಯಲ್ಲಿ ಕೆಲಸಕ್ಕಿದ್ದ ವಿಜಯಪುರ ಮೂಲದ ಕುಟುಂಬದ ಲಕ್ಷ್ಮಿ ಎಂಬುವರಿಗೆ ದಾವಣಗೆರೆಯ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಅಂಗನವಾಡಿಗೆ ಮಗುವನ್ನು ಸೇರಿಸಲು ಬೇಕಿದ್ದ ಜನನ ಮರಣ ಪ್ರಮಾಣಪತ್ರ ಪಡೆಯಲು ತಾಯಿ ಶಾಂತಾಬಾಯಿ ಜತೆ ಬಂದಿದ್ದರು. ಪ್ರತಿಭಟನೆ ಮಾಹಿತಿ ಇಲ್ಲದ್ದರಿಂದ ಬರಿಗೈಲಿ ಮರಳಿದರು.
ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು ರಜೆ ಪಡೆದು ಇಲ್ಲಿಗೆ ಬಂದಿದ್ದೇನೆ. ಅಂಗನವಾಡಿಗೆ ಸೇರಿಸಲು ಮಗುವಿನ ಜನನ ಪ್ರಮಾಣಪತ್ರ ಬೇಕಿತ್ತು. ಮುಷ್ಕರದ ಮಾಹಿತಿ ತಿಳಿದಿದ್ದರೆ ಬರುತ್ತಿರಲಿಲ್ಲ ಎಂದು ಹೊಳಲ್ಕೆರೆಯ ಪ್ರಕಾಶ್ ಎಂಬುವರು ಗೊಣಗಿದರು.
ನಗರದ ಮೂರು ವಲಯ ಕಚೇರಿಗಳು ಕೂಡ ನೌಕರರ ಕೊರತೆಯಿಂದಾಗಿ ಸಮರ್ಪಕ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿಲ್ಲ. ಆಶ್ರಯ ಆಸ್ಪತ್ರೆ ಸಮೀಪದ ವಲಯ 3ರ ಕಚೇರಿಗೆ ಬೀಗ ಹಾಕಿದ್ದರಿಂದ ಇ-ಸ್ವತ್ತು, ಖಾತೆ ಬದಲಾವಣೆ, ಪೌತಿ ಖಾತೆ ಇನ್ನಿತರೆ ದಾಖಲೆ ಪಡೆಯಲು ಬಂದವರು ಬಂದ್‌ನ ಪ್ರಕಟಣೆ ಗಮನಿಸಿ ಮನೆ ಕಡೆ ಹೊರಳಿದರು.
----
ಹಿರಿಯ ಅಧಿಕಾರಿಗಳೇ ಜನರ ಸಮಸ್ಯೆ ಸಾಧ್ಯವಾದಷ್ಟು ಪರಿಹರಿಸಲು ಪ್ರಯತ್ನಿಸಿದ್ದೇವೆ. ಬುಧವಾರದ ವೇಳೆಗೆ ಸರ್ಕಾರ ನೌಕರರ ಸಮಸ್ಯೆ ಪರಿಹರಿಸುವ ವಿಶ್ವಾಸವಿದೆ. ನೌಕರರ ಪ್ರತಿಭಟನೆ ಹಿನ್ನೆಲೆಯಲ್ಲಿ ಸರ್ಕಾರದ ಕಾರ್ಯದರ್ಶಿ ಹಾಗೂ ಪೌರಾಡಳಿತ ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದೇವೆ.
ರೇಣುಕಾ
ಪಾಲಿಕೆ ಆಯುಕ್ತೆ.
-------
ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಮುಷ್ಕರಕ್ಕೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಪಂದಿಸಿಲ್ಲ. ಹೀಗಾಗಿ ನಮ್ಮ ಬೇಡಿಕೆ ಈಡೇರಿಕೆಗಾಗಿ ಮಹಾನಗರಪಾಲಿಕೆ ಕಚೇರಿ ಎದುರಲ್ಲೇ ಪ್ರತಿಭಟನೆ ಮುಂದುವರಿಸಲಿದ್ದೇವೆ. ಸರ್ಕಾರ ಸ್ಪಂದಿಸದಿದ್ದಲ್ಲಿ ಕುಡಿವ ನೀರು ಪೂರೈಕೆಯನ್ನೂ ಸ್ಥಗಿತಗೊಳಿಸಬೇಕಾಗುತ್ತದೆ.
ಕೆ.ಎಸ್. ಗೋವಿಂದರಾಜ್
ದಾವಣಗೆರೆ ಮಹಾನಗರಪಾಲಿಕೆ ನೌಕರರ ಸಂಘದ ಅಧ್ಯಕ್ಷ.