ಬೆಳಗಾವಿ ಮೇಲೆ ಅಕ್ಕರೆ, ನ್ಯಾಮತಿ ಮೇಲೆ ತಾತ್ಸಾರ? ; ನರ ಬಲಿಗೆ ಚಿರತೆ ಹೊಂಚು ಅರಣ್ಯದಂಚಿನ ಜನರಲ್ಲಿ ಆತಂಕ

Davangere, Nyamati, Sasvehalli, leopard infestation,
Published on

ಸಂತೋಷ ಕವಚೂರು ದಾವಣಗೆರೆ

ದಾವಣಗೆರೆ ಜಿಲ್ಲೆಯ ನ್ಯಾಮತಿ, ಸಾಸ್ವೆಹಳ್ಳಿ ಭಾಗದಲ್ಲಿ ಕಳೆದ ಕೆಲ ತಿಂಗಳಿಂದ ಚಿರತೆಗಳ ಹಾವಳಿ ಹೆಚ್ಚಿದ್ದು ಅರಣ್ಯದಂಚಿನ ಗ್ರಾಮಗಳ ಜನರಲ್ಲಿ ಜೀವ ಭಯ ಆವರಿಸಿದೆ.

ಇದುವರೆಗೆ ಕುರಿ, ನಾಯಿಗಳನ್ನು ಬೇಟೆಯಾಡಿಕೊಂಡಿದ್ದ ಚಿರತೆ ಮಂಗಳವಾರ ಸಂಜೆ ರೈತ ಮಹಿಳೆಯೊಬ್ಬರನ್ನು ಬಲಿ ಪಡೆಯುವ ಮೂಲಕ ಮನುಷ್ಯರ ರಕ್ತದ ರುಚಿ ನೋಡಿದೆ.

ನ್ಯಾಮತಿ-ಸಾಸ್ವೆಹಳ್ಳಿ ಭಾಗದಲ್ಲಿ ಐದಾರು ಚಿರತೆಗಳು ಓಡಾಡಿಕೊಂಡಿದ್ದು ಅವುಗಳನ್ನು ಸೆರೆ ಹಿಡಿಯುವಂತೆ ಸಾರ್ವಜನಿಕರು ಮಾಡಿದ ಮನವಿಗಳನ್ನು ಉಪೇಕ್ಷಿಸಿದ ಕಾರಣ ಇಂಥದ್ದೊಂದು ದುರಂತ ಸಂಭವಿಸಿದೆ.

ದೂರದ ಬೆಳಗಾವಿಯಲ್ಲಿ ಅಲ್ಲಿನ ಗಾಲ್ಫ್ ಕ್ಲಬ್‌ನಲ್ಲಿ ಕಳೆದ 20 ದಿನಗಳಿಂದ ಅವಿತಿರುವ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ಡ್ರೋನ್, ಆನೆ, ಶಾರ್ಪ ಶೂಟರ್ಸ್ ಸೇರಿ 200ಕ್ಕೂ ಹೆಚ್ಚು ಸಿಬ್ಬಂದಿ ಸಾಥ್ ನೀಡಿದ್ದಾರೆ.

ಆದರೆ, ಈ ವಿಷಯದಲ್ಲಿ ಬೆಳಗಾವಿಗೆ ನೀಡಿದ ಮಹತ್ವ ನ್ಯಾಮತಿಗೆ ಸಿಕ್ಕಿಲ್ಲ. ಅರಣ್ಯದಂಚಲ್ಲಿ ಬೋನು ಅಳವಡಿಸಿ ಅದರೊಳಗೊಂದು ನಾಯಿ ಕಟ್ಟಿಹಾಕಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ.

ಬೆಳಗಾವಿ ಮೇಲೆ ಅಕ್ಕರೆ ತೋರಿ ನ್ಯಾಮತಿಯನ್ನು ತಾತ್ಸಾರ ಮಾಡಲಾಗಿದೆ. ಇಲ್ಲಿಯ ರೈತರ, ಮಹಿಳೆಯರ ಜೀವಕ್ಕೆ ಬೆಲೆ ಇಲ್ಲವೇ? ಎಂದು ಸ್ಥಳೀಯರನೇಕರು ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಚಿರತೆ ಕಾಣಿಸಿದೆಯಷ್ಟೇ., ಇಲ್ಲಿ ನರ ಬಲಿ ನಡೆದರೂ ಶಾರ್ಪ್ ಶೂಟರ್ಸ್‌ಗಳ ಸುಳಿವಿಲ್ಲ. ಕ್ಯಾಮರಾ, ಬೋನು, ಬಲೆ, ನಾಯಿಗಳನ್ನು ಮಾತ್ರ ಬಳಸಲಾಗಿದೆ.

ರೈತ ಮಹಿಳೆಯ ರಕ್ತ ಹೀರಿದ ಚಿರತೆ
ನ್ಯಾಮತಿ ತಾಲೂಕು ಫಲವನಹಳ್ಳಿಯಲ್ಲಿ ಮಂಗಳವಾರ ಹೊಲದಲ್ಲಿ ಕಳೆ ತೆಗೆಯುತ್ತಿದ್ದ ರೈತ ಮಹಿಳೆ ಕಮಲಾಬಾಯಿ ಚಿರತೆಗೆ ಆಹಾರವಾಗಿದ್ದಾರೆ. ಜತೆಗಿದ್ದವರು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಸಾಸ್ವೆಹಳ್ಳಿ ಹೋಬಳಿಯಲ್ಲೂ ನರ ಬಲಿಗಾಗಿ ಕಾಯುತ್ತಿದ್ದ ಚಿರತೆಯನ್ನು ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೈರನಹಳ್ಳಿಯ ಶ್ರೀನಿಧಿ ಎಸ್ಟೇಟ್‌ನಲ್ಲಿ ಬೋನಿಗೆ ಕೆಡವಿದ್ದರು. ಆದರೆ ಫಲವನಹಳ್ಳಿ ಸುತ್ತ ಓಡಾಡುತ್ತಿದ್ದ ಚಿರತೆ ಸೆರೆ ಸಿಕ್ಕಿರಲಿಲ್ಲ.
ಇವೆಯಂತೆ ಐದಾರು ಚಿರತೆ?
ನ್ಯಾಮತಿ, ಸಾಸ್ವೆಹಳ್ಳಿ ಸುತ್ತಮುತ್ತ ಅರಣ್ಯದಂಚಿನಲ್ಲಿ ಐದಾರು ಚಿರತೆಗಳಿವೆ. ಈ ಪೈಕಿ ಒಂದು ಮಾತ್ರ ಸೆರೆ ಸಿಕ್ಕಿದೆ. ಇದೀಗ ಕಮಲಾಬಾಯಿ ರಕ್ತದ ರುಚಿ ನೋಡಿರುವ ಚಿರತೆ ಮತ್ತೆಷ್ಟು ಜನರ ಮೇಲೆರಗುವುದೋ? ಎಂಬ ಭಯ ಆವರಿಸಿದೆ. ಮಕ್ಕಳು ಶಾಲೆ,ಕಾಲೇಜಿಗೆ ಹೋಗಲು ಅಂಜುತ್ತಿದ್ದಾರೆ. ರೈತರು ತೋಟ, ಗದ್ದೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಕ್ಯಾಸಿನಕೆರೆ, ಹಟ್ಟಿಹಾಳ್, ಚೀಲಾಪುರ, ಬೈರನಹಳ್ಳಿ, ಹುಣಸಘಟ್ಟ ಗ್ರಾಮಗಳಲ್ಲಿ ಇಂಥ ವಾತಾವರಣವಿದೆ. ಅರಣ್ಯದಂಚಿನ ಗ್ರಾಮಗಳಲ್ಲಿ ಟಾಂ ಟಾಂ ಮೂಲಕ ಜಾಗೃತಿ ಮೂಡಿಸುವ ಜತೆಗೆ ಮೂರ‌್ನಾಲ್ಕು ಕಡೆ ಬೋನಿರಿಸಲಾಗಿದೆ. ಕ್ಯಾಮರಾ ಸಹ ಅಳವಡಿಸಿ ಸಲಾಗಿದೆ, ಚಿರತೆ ಚಲನವಲನದ ಮೇಲೆ ನಿಗಾ ಇಡಲಾಗಿದೆ.

ನಮ್ಮದು ತೋಟದ ಮನೆ. ಹಗಲು-ರಾತ್ರಿ ನಮ್ಮ ಜೀವನ ತೋಟದಲ್ಲಿಯೇ. ಮಳೆ ಕೈ ಕೊಟ್ಟಾಗ ರಾತ್ರಿ ತೋಟಕ್ಕೆ ನೀರು ಹಾಯಿಸಲು ಓಡಾಡುತ್ತಿರುತ್ತೇವೆ. ಹೋಬಳಿಯ ಕೆಲ ಗ್ರಾಮಗಳಲ್ಲಿ ಚಿರತೆ ಕಾಣಿಸಿದ ವಿಷಯ ತಿಳಿದು ತೋಟಕ್ಕೆ ಹೋಗಲು ಭಯವಾಗುತ್ತಿದೆ.

ಸೋಮಶೇಖರ್ ಹುಡೇದ್, ಹೊಸಹಳ್ಳಿ 2ನೇ ಕ್ಯಾಂಪ್

ಗ್ರಾಮೀಣ ಭಾಗದಲ್ಲಿ ಒಂದು ಹಳ್ಳಿಯಿಂದ -ಮತ್ತೊಂದು ಹಳ್ಳಿಗೆ ಮಕ್ಕಳು ಶಾಲೆಗೆ ಓಡಾಡುತ್ತಾರೆ. ಚಿರತೆ ಹಾವಳಿಯಿಂದ ಮಕ್ಕಳನ್ನು ಶಾಲೆಗೆ ಕಳಿಸುವುದು ಹೇಗೆಂಬ ಚಿಂತೆ ಕಾಡುತ್ತಿದೆ.

ಮಂಜುನಾಥ್ ಬಜ್ಜಿ, ಕ್ಯಾಸಿನಕೆರೆ ರೈತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net