

ದಾವಣಗೆರೆ: ಮಾನವ ಜೀವನ ಇರುವುದು ಸಾಧಿಸಲು ಮತ್ತು ಜಯಿಸಲಿಕ್ಕೆ. ಬದುಕಿನಲ್ಲಿ ಎಂಥದ್ದೇ ಕಷ್ಟಗಳು ಬಂದರೂ ಹೋರಾಡಿ. ಆತ್ಮಹತ್ಯೆಯ ಯೋಚನೆ ಕೈಬಿಡಿ ಎಂದು ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷೆ ಪದ್ಮಶ್ರೀ ಮಂಜಮ್ಮ ಜೋಗತಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸಂಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ, ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ ಇತರೆ ಚಟುವಟಿಕೆಗಳ ಕಾರ್ಯಕ್ರಮದ ದೀಪ ಬೆಳಗಿ ಮಾತನಾಡಿದರು.
ಸತ್ತರೆ ಏನನ್ನೂ ಸಾಧಿಸದಂತೆ ಆಗುವುದಿಲ್ಲ. ಬದುಕಿದ್ದಾಗಲೇ ಏನನ್ನಾದರೂ ಸಾಧಿಸಿ. ಒಂಟಿತನವೇ ಬರಲಿ, ವ್ಯಾಪಾರದಲ್ಲಿ ನಷ್ಟವೇ ಬರಲಿ, ಗಟ್ಟಿಯಾಗಿ ಬದುಕು ನಡೆಸಿ. ಮಂಜಮ್ಮ ಜೋಗತಿಯಂತೆ ಬದುಕು ಕಟ್ಟಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಬಡತನದಲ್ಲಿದ್ದಾಗ ನಾನು ಒಂದು ರೂ.ಗೆ ನಾಲ್ಕು ಇಡ್ಲಿ ಮಾರಿ ಜೀವನ ನಡೆಸಿದ್ದೇನೆ. ಏರ್‌ಪೋರ್ಟ್‌ನಲ್ಲಿ 218 ರೂ. ಕೊಟ್ಟು ಮೂರು ಇಡ್ಲಿಯನ್ನೂ ತಿಂದಿದ್ದೇನೆ. ಎಲ್ಲರ ಬದುಕಿನಲ್ಲೂ ಏರುಪೇರು ಇರುತ್ತವೆ. ಕಾಲೆಳೆಯುವವರು ಎಲ್ಲೆಲ್ಲೂ ಇದ್ದಾರೆ. ನಿಮ್ಮನ್ನು ಹೀಯಾಳಿಸುವವರೂ ಬೆರಗಾಗುವಂತೆ ಸಾಧನೆ ಮಾಡಿ ಎಂದು ಹೇಳಿದರು.
ಜೋಗತಿಯಾದ ಬಳಿಕ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಪುಂಡರ ಕಿರುಕುಳಕ್ಕೆ ಸಿಕ್ಕ ಯಾತನೆ ಹೇಳಿ ಕಣ್ಣೀರಾದ ಮಂಜಮ್ಮ, ಈ ಜಗತ್ತಿನಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ನನ್ನಂತೆ ತೃತೀಯ ಲಿಂಗಿಗಳು ನಿಮ್ಮ ಮನೆಯಲ್ಲಿದ್ದರೆ ಅವರಿಗೆ ಹಣ-ಅಂತಸ್ತು ಮಾಡದೆ ಉತ್ತಮ ಶಿಕ್ಷಣ ಕೊಡಿಸಿ. ವ್ಯತ್ಯಾಸದ ಧ್ವನಿಯುಳ್ಳ ಸ್ನೇಹಿತರನ್ನು ಹೀಯಾಳಿಸಬೇಡಿ ಎಂದೂ ಮನವಿ ಮಾಡಿದರು.
ನನ್ನ ಗುರು ಕಾಳವ್ವ ಜೋಗತಿಯಿಂದಾಗಿ ನಾನು ಎತ್ತರದ ಬದುಕು ಕಂಡಿದ್ದೇನೆ. ಇಡೀ ದೇಶದಲ್ಲೇ ತೃತೀಯ ಲಿಂಗಿಗಳ ಪೈಕಿ ಎರಡನೇ ಪದ್ಮಶ್ರೀ ಪ್ರಶಸ್ತಿ ನನಗೆ ದಕ್ಕಿದೆ. ಭಾರತದಲ್ಲೇ ಮೊದಲ ಬಾರಿಗೆ ಅಕಾಡೆಮಿಯೊಂದರ ಅಧ್ಯಕ್ಷ ಸ್ಥಾನ ನನಗೇ ಸಿಕ್ಕಿದೆ. ಗುರು-ಹಿರಿಯರನ್ನು ಗೌರವಿಸಿ. ಪಾಲಕರಿಗೆ ಮೋಸ ಮಾಡದಿರಿ. ಅವರ ಮನಸ್ಸು ನೋಯಿಸುವ ಕೆಲಸಕ್ಕೆ ಕೈ ಹಾಕದಿರಿ ಎಂದು ಹೇಳಿದರು. ’
ಈ ಸರ್ಕಾರಿ ಕಾಲೇಜಿನಲ್ಲಿ ಯಾವ ಸೌಲಭ್ಯಗಳಿವೆಯೋ ತಿಳಿದಿಲ್ಲ. ಆದರೆ ಇಲ್ಲಿ ಉತ್ತಮ ಶಿಕ್ಷಣ ಸಿಗುತ್ತಿರುವ ಕಾರಣಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದಿದವರು ಸಂಸ್ಕಾರವಂತರಾಗುತ್ತಾರೆ. ಸರ್ಕಾರವನ್ನೂ ಆಳುವವರೂ ಆಗುತ್ತಾರೆ ಎಂದರು.
ಮಾತೃಭಾಷೆ ಹುಗ್ಗಿ, ಹೋಳಿಗೆ, ಅನ್ನ-ಸಾರು ಆಗಿದ್ದರೆ ಇಂಗ್ಲಿಷ್ ಭಾಷೆ ಹಪ್ಪಳ. ಸೆಂಡಗಿ, ಉಪ್ಪಿನಕಾಯಿ ಇದ್ದ ಹಾಗೆ. ಒಂದನ್ನು ಬಿಟ್ಟು ಇನ್ನೊಂದು ಇರಲು ಆಗುವುದಿಲ್ಲ. ನಮ್ಮ ಬದುಕಿಗೆ ಎರಡೂ ಬೇಕು. ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆ ಅದರಲ್ಲೂ ಕನ್ನಡ ಮಾಧ್ಯಮದಲ್ಲೇ ಓದಿಸಿ ಕನ್ನಡವನ್ನು ಉಳಿಸಿ. ಇಂಗ್ಲೀಷನ್ನೂ ಬೆಳೆಸಿ ಎಂದು ಹೇಳಿದರು.
ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ. ಬಸವರಾಜ ಸಿ. ತಹಸೀಲ್ದಾರ್, ಸಂಜೆ ಕಾಲೇಜಿನ ಪ್ರಾಚಾರ್ಯೆ ಕೆ.ಬಿ.ಸುನೀತಾ, ಐಕ್ಯುಎಸಿ ಸಂಚಾಲಕ ಡಾ.ಜೆ.ಪಿ. ಗುರುರಾಜ್, ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಲೋಕೇಶ ನಾಯ್ಕ, ಮಂಜುನಾಥ್, ಡಾ. ಎನ್. ಕರಿಬಸಪ್ಪ, ನಾಗೇಂದ್ರನಾಯ್ಕ, ಮಾದಾನಾಯ್ಕ, ಎಸ್.ಎಚ್. ರವಿಕುಮಾರ್, ಹಳೇ ವಿದ್ಯಾರ್ಥಿಗಳ ಸಂಘದ ರಾಮಪ್ರಸಾದ್, ಜಗದೀಶ್, ಶ್ರೀಧರ್, ಪವನ್ ಇತರರಿದ್ದರು.