

ದಾವಣಗೆರೆ: ಹಿಂದು ಮತ್ತು ಲಿಂಗಾಯತ ಧರ್ಮಗಳ ಕುರಿತಂತೆ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಗೊಂದಲದ ಹೇಳಿಕೆ ನೀಡುವುದನ್ನು ಕೈಬಿಡಬೇಕು. ಈ ವಿಚಾರವಾಗಿ ಸ್ವಾಮೀಜಿ ಜತೆ ಚರ್ಚೆಗೆ ಸಿದ್ಧ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವ ಬಳಗದ ಜಿಲ್ಲಾ ಘಟಕಗಳು ಸ್ಪಷ್ಟಪಡಿಸಿವೆ.
ಲಿಂಗಾಯತ ಸ್ವತಂತ್ರ ಧರ್ಮವಾಗಿದೆ. ಹಿಂದು ಪದ ಪ್ರದೇಶವಾಚಕವಾಗಿ ಬಳಕೆಯಾದಲ್ಲಿ ಲಿಂಗಾಯತರೂ ಹಿಂದುಗಳೆ. ಧರ್ಮ ಎಂದು ಬಳಕೆಯಾಗುವುದಾದರೆ ಲಿಂಗಾಯತರು ಹಿಂದುಗಳಲ್ಲ ಎಂಬುದು ಸ್ಪಷ್ಟ. ಆದರೂ ವಚನಾನಂದ ಸ್ವಾಮೀಜಿ ಈ ಬಗ್ಗೆ ಸಮಾಜದಲ್ಲಿ ಗೊಂದಲದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಆವರಗೆರೆ ರುದ್ರಮುನಿ, ಬಸವ ಬಳಗದ ಸದಸ್ಯ ಮಹಾಂತೇಶ ಅಗಡಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲಿಂಗಾಯತ ಎಂಬುದು ಸಕಲ ಜೀವಾತ್ಮರಿಗೆ ಒಳಿತು ಬಯಸುವ, ಏಕದೇವ ನಿಷ್ಠೆ ಬೆಳೆಸುವ, ಜಾತ್ಯತೀತ ಮನೋಭಾವದ, ಅನ್ಯಾಯ ನೇರವಾಗಿ ಪ್ರತಿಭಟಿಸುವ ಸತ್ಯ ಪಕ್ಷಪಾತಿಯಾಗಿರುವ ಸ್ವತಂತ್ರ ಧರ್ಮ ಎಂಬುದಾಗಿ ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ಲಿಂಗಾಯತ ಸ್ವತಂತ್ರ ಧರ್ಮ ಎಂಬುದನ್ನು ಬಸವಾದಿ ಶಿವಶರಣರು ಸ್ಪಷ್ಟಪಡಿಸಿದ್ದರೂ ಇದನ್ನು ಒಪ್ಪಿಕೊಳ್ಳದ ಕೆಲವರು ತಮಗೆ ತೋಚಿದಂತೆ ವಿಶ್ಲೇಷಣೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಅಸಮಾಧಾನ ಹೇಳಿಕೊಂಡರು.
ಭೌಗೋಳಿಕವಾಗಿ ನಾವೆಲ್ಲ ಹಿಂದುಗಳೇ ಹೊರತು ಧಾರ್ಮಿಕವಾಗಿ ಅಲ್ಲ. ಲಿಂಗಾಯತ ಧರ್ಮದಲ್ಲಿ ಆಚರಣೆಗಳೇ ಬೇರೆ ಬೇರೆ ಆಗಿವೆ. ವೇದ, ಪುರಾಣಗಳನ್ನು ತಿರಸ್ಕರಿಸಿದ್ದ ಲಿಂಗಾಯತ ಧರ್ಮವು ಹಿಂದು ವ್ಯಾಪ್ತಿಯಲ್ಲಿ ಬರಲಿದೆ ಎಂಬುದನ್ನು ಒಪ್ಪಲಾಗದು. ಎರಡೂ ಧರ್ಮಗಳ ತಾತ್ವಿಕ ವಿಚಾರಗಳಲ್ಲಿ ಅಜಗಜಾಂತರ ವ್ಯತ್ಯಾಸ ಇರುವುದನ್ನು ಗಮನಿಸಿ ಕಳೆದ ಡಿಸೆಂಬರ್‌ನಲ್ಲಿ ದಾವಣಗೆರೆಯಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭೆ ಅಧಿವೇಶನದಲ್ಲಿ ಈ ಬಗ್ಗೆ ನಿರ್ಣಯಿಸಲಾಗಿತ್ತು. ಈಗ ಅದನ್ನು ಮತ್ತೆ ವಿಸ್ತರಿಸುವ ಅಗತ್ಯವಿಲ್ಲ. ವಚನಾನಂದ ಶ್ರೀಗಳು ವಾಸ್ತವ ಅರಿಯದಷ್ಟು ಅಜ್ಞಾನಿಗಳಲ್ಲ. ವಾಸ್ತವಾಂಶ ಅರಿತು ಮಾತನಾಡಲಿ ಎಂದರು.
ಲಿಂಗಾಯತ ಸ್ವತಂತ್ರ ಧರ್ಮ, ಬಸವಣ್ಣ ಇದರ ಸಂಸ್ಥಾಪಕರು, ವಚನಸಾಹಿತ್ಯವೇ ಇದರ ಧರ್ಮಗ್ರಂಥ, ಇಷ್ಟಲಿಂಗವೇ ಈ ಧರ್ಮದ ಲಾಂಛನ ಎಂದು ಹೇಳಿದಾಕ್ಷಣ ನಾವು ದೇಶದ್ರೋಹಿ ಅಥವಾ ಹಿಂದುಗಳ ವಿರೋಧಿಗಳಾಗಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ಮಧುಮತಿ ಗಿರೀಶ್, ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರುದ್ರೇಗೌಡ, ಮುಖಂಡರಾದ ಬಿ.ಎಂ. ವಿಶ್ವೇಶ್ವರಯ್ಯ, ಶಿವಮೂರ್ತಿ, ಶಶಿಧರ ಬಸಾಪುರ, ಕೆ.ಸಿ. ನಾಗರಾಜ, ಕೊಟ್ರೇಶ ಇದ್ದರು.