

ದಾವಣಗೆರೆ: ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದನಂತರ ಸಂಶೋಧನೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಹಾಗೂ ತರಳಬಾಳು ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ.ಎಚ್.ವಿ. ವಾಮದೇವಪ್ಪ ಹೇಳಿದರು.
ಎಂ.ಎಂ.ಶಿಕ್ಷಣ ಮಹಾವಿದ್ಯಾಲಯದ 1998ನೇ ಸಾಲಿನ ಬಿ.ಇಡಿ ವಿದ್ಯಾರ್ಥಿಗಳ ಬಳಗದಿಂದ ನಗರದ ಪಂಜುರ್ಲಿ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಂದು ಕ್ಷೇತ್ರದಲ್ಲೂ ಗಣನೀಯ ಪ್ರಗತಿ ಸಾಧಿಸುವುದು ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ. ಸಂಶೋಧನೆ ಇಲ್ಲದೇ ಯಾವುದೇ ಕ್ಷೇತ್ರದ ಬೆಳೆವಣಿಗೆ ಅಸಾಧ್ಯ. ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವುದೇ ಸಂಶೋಧನೆ ಎಂದು ತಿಳಿಸಿದರು.
ಪಿಎಚ್‌ಡಿ ಮಾಡುವುದು ಸಂಶೋಧನೆಯ ಆರಂಭ. ಅಲ್ಲಿಂದ ಮುಂದೇನು ಮಾಡಬೇಕು ಎಂಬುದು ನಿಜವಾದ ಸಂಶೋಧನೆ. ಪ್ರಸ್ತುತ ಶಿಕ್ಷಣ ಕ್ಷೇತ್ರ ಸೇರಿ ವಿವಿಧ ಕ್ಷೇತ್ರದಲ್ಲಿ ಸಂಶೋಧನೆಗೆ ಉತ್ತಮ ಅವಕಾಶವಿದೆ. ಒಬ್ಬ ರೈತ ಯಾವ ಕಾಲದಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದು ಸಹ ಸಂಶೋಧನೆ ಎಂದರು.
ಎಂ.ಎಂ. ಶಿಕ್ಷಣ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದವರು ಜಿಲ್ಲಾ ನ್ಯಾಯಾಧೀಶರು, ವಿಜ್ಞಾನಿಗಳು, ಸಂಶೋಧಕರು ಹಾಗೂ ಶಿಕ್ಷಕರಾಗಿ ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು, ದೊಡ್ಡ ಸಾಧನೆ ಮೂಲಕ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಇದು ಒಬ್ಬ ಶಿಕ್ಷನಿಗೆ ನಿಜವಾಗಿಯೂ ಹೆಮ್ಮೆ ತರುವ ಸಂಗತಿ ಎಂದು ಸಾಧಕ ಶಿಷ್ಯರನ್ನು ಅಭಿನಂದಿಸಿದರು.
ಉಪನ್ಯಾಸಕ ತೀರ್ಥಂಕರ ಮಾತನಾಡಿ, ಸಮಾಜದಲ್ಲಿ ಗುರುವನ್ನು ಮೀರಿಸಿ ಬೆಳೆದ ಶಿಷ್ಯಂದಿರನ್ನು ನೋಡುವುದು ಅತ್ಯಂತ ಸಂತೋಷದ ಸಂಗತಿ. ಧರ್ಮ ಹಾಗೂ ಭಾವನೆಗಳಿಗೆ ಮೀರಿದ್ದು ಸ್ನೇಹ ಸಂಬಂಧ ಎಂದು ಕಾರ್ಯಕ್ರಮ ಹಮ್ಮಿಕೊಂಡಿದ್ದ ಗೆಳೆಯರ ಬಳಗವನ್ನು ಶ್ಲಾಘಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಗಣಿತ ಅಧ್ಯಯನ ವಿಭಾಗದ ಮುಖ್ಯಸ್ಥ, ವಿಶ್ವ ಶ್ರೇಷ್ಠ ವಿಜ್ಞಾನಿ ಪುರಸ್ಕೃತ ಡಾ.ಬಿ.ಸಿ. ಪ್ರಸನ್ನಕುಮಾರ್, ಮಲ್ಲಾಡಿಹಳ್ಳಿ ಶ್ರೀ ರಾಘವೇಂದ್ರ ಬಿ.ಇಡಿ ಕಾಲೇಜು ಪ್ರಾಚಾರ್ಯ, ಪಿಎಚ್‌ಡಿ ಪದವಿ ಪುರಸ್ಕೃತ ಡಾ.ಜಿ.ಯು. ನಾಗರಾಜು ಹಾಗೂ ಹೊಸಪೇಟೆ ಎಸ್‌ಬಿಬಿಎಸ್ ಬಿ.ಇಡಿ ಕಾಲೇಜು ಸಹಾಯಕ ಪ್ರಾಧ್ಯಾಪಕಿ, ಪಿಎಚ್‌ಡಿ ಪದವಿ ಪುರಸ್ಕೃತೆ ಡಾ. ಶೋಭಾ ಪಾಟೀಲ್ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ಮೂವರು ಸನ್ಮಾನಿತರು ಕಾಲೇಜಿನ ಹಳೆಯ ನೆನಪುಗಳನ್ನು ಮೆಲುಕು ಹಾಕಿದರಲ್ಲದೆ, ಎಂ.ಎಂ.ಶಿಕ್ಷಣ ಮಹಾವಿದ್ಯಾಲಯ ರಾಜ್ಯಕ್ಕೆ ಉತ್ತಮ ಶಿಕ್ಷಕರನ್ನು ನೀಡುತ್ತಿದೆ ಎಂದು ಸ್ಮರಿಸಿದರು. ಗೆಳೆಯರ ಬಳಗದ ಆತ್ಮೀಯ ಸನ್ಮಾನಕ್ಕೆ ಧನ್ಯವಾದ ಸಲ್ಲಿಸಿದರು.
ಅಲ್ಲದೇ ಪತ್ರಕರ್ತರಾದ ಸೋಮಶೇಖರ್ ಹಾಗೂ ನಾರಾಯಣ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ರಾಜಶೇಖರ್ ಹಳ್ಳೂರು, ಸುಜಾತಾ, ನಟರಾಜ್ ಇತರರು ಇದ್ದರು.
----