

ದಾವಣಗೆರೆ: ನವರಾತ್ರಿ ಆಚರಣೆಯ ಚೊಚ್ಚಲ ದಿನ ಸೋಮವಾರ ನಗರದೆಲ್ಲೆಡೆ ಅಮ್ಮನ ದೇಗುಲಗಳಲ್ಲಿ ಭಕ್ತಿಯ ಸಡಗರ ಕಂಡುಬಂದಿತು. ವಿದ್ಯುದ್ದೀಪ ಅಲಂಕಾರ, ತಳಿರು ತೋರಣ, ಹೂವಿನ ಸಿಂಗಾರದೊಂದಿಗೆ ಆಕರ್ಷಣೆಗೊಂಡಿದ್ದ ದೇವಸ್ಥಾನಗಳು ಭಕ್ತರನ್ನು ಬರಸೆಳೆದವು.
ನಸುನಿನಿಂದಲೇ ವಿಶೇಷ ಪೂಜೆ, ಅಭಿಷೇಕ ನೆರವೇರಿದವು. ದೇವಿ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ಘಟ ಸ್ಥಾಪನೆ ನೆರವೇರಿಸಲಾಯಿತು. ಕುಂಕುಮಾರ್ಚನೆ, ದೇವಿ ಭಜನೆ, ದೀಪಾರಾಧನೆ, ವಿವಿಧ ಹೋಮ ಇತ್ಯಾದಿ ಪೂಜಾ ಕೈಂಕರ್ಯಗಳು ನಡೆದವು.
ಬೆಳಗ್ಗೆಯಿಂದಲೇ ಭಕ್ತಸಂದಣಿ ಹೆಚ್ಚಿತ್ತು. ಬಿಸಿಲನ್ನೂ ಲೆಕ್ಕಿಸದೆ ದೇವಿಯ ದೇವಸ್ಥಾನಗಳಿಗೆ ತೆರಳಿದ ಮಹಿಳೆಯರು ಪೂಜೆ ಸಲ್ಲಿಸಿದರು. ವಿಶೇಷ ಅಲಂಕಾರಗಳಲ್ಲಿದ್ದ ಅಮ್ಮನನ್ನು ಕಣ್ತುಂಬಿಕೊಂಡರು. ಕೆಲವೆಡೆ ಪ್ರಸಾದ ವ್ಯವಸ್ಥೆ ಆಯೋಜನೆ ಮಾಡಲಾಗಿತ್ತು.
ಶಿವಾಜಿನಗರದ ನಗರದೇವತೆ ದುರ್ಗಾಂಬಿಕಾ ದೇವಿಗೆ ಬಹುಬಗೆಯ ವರ್ಣಗಳ ಹೂವಿನ ಅಲಂಕಾರ ಮಾಡಲಾಗಿತ್ತು. ನಿಟುವಳ್ಳಿಯ ದುರ್ಗಾಂಬೆ ಶೈಲಪುತ್ರಿ ಅವತಾರದಲ್ಲಿ ದರ್ಶನ ನೀಡಿದರೆ, ಅರಿಶಿಣ- ಕುಂಕುಮದ ಅಲಂಕಾರದಲ್ಲಿ ಮೈದಳೆದ ದಾವಲ್‌ಪೇಟೆಯ ಚೌಡೇಶ್ವರಿ ದೇವಿ ಗಮನ ಸೆಳೆದಳು.
ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ತಾಯಿ ರುಕ್ಮಿಣಿದೇವಿ ವೇಷದಲ್ಲಿ ಮನಮೋಹಕಗೊಳಿಸಿದರೆ, ಕಾಳಿಕಾದೇವಿ ರಸ್ತೆಯ ಕಾಳಿಕಾಂಬೆಯು ಭಸ್ಮ ಅಲಂಕಾರದಲ್ಲಿ ಕಂಗೊಳಿಸಿದಳು. ಎಸ್.ನಿಜಲಿಂಗಪ್ಪ ಬಡಾವಣೆಯ ಶಾರದಾ ಮಾತೆಗೆ ಹಂಸ ವಾಹನಾಲಂಕಾರದಲ್ಲಿ ಕಂಡರೆ, ಜಯದೇವ ವೃತ್ತದ ಕೂಡಲೀ ಶೃಂಗೇರಿ ಶಂಕರಾಚಾರ್ಯರ ಮಠದಲ್ಲಿ ದೇವಿಗೆ ಶೈಲಪುತ್ರಿಯ ಅಲಂಕಾರ ಮಾಡಲಾಗಿತ್ತು.
ಶಂಕರ ವಿಹಾರ ಬಡಾವಣೆಯ ಅಂಬಾಭವಾನಿ ದೇವಿ ವಿಶೇಷ ಅಲಂಕಾರದಲ್ಲಿ ಕಾಣಿಸಿಕೊಂಡರೆ, ಶಿವಾಜಿನಗರದ ನಿಮಿಷಾಂಬಾ ದೇವಿಗೆ ರಜತ ಅಲಂಕಾರ ಮಾಡಲಾಗಿತ್ತು. ನಿಟುವಳ್ಳಿಯ ಕರಿಯಾಂಬಿಕಾ ದೇವಿ ಹಾಗೂ ಬೇತೂರು ರಸ್ತೆಯ ಬನಶಂಕರಿ ಮಾತೆ ಶೈಲಪುತ್ರಿಯ ರೂಪ ಧರಿಸಿದ್ದರೆ, ಗಾಂಧಿನಗರದ ಹುಲಿಗೆಮ್ಮ ದೇವಿ, ಆವರಗೊಳ್ಳದ ಪುರವರ್ಗ ಹಿರೇಮಠದಲ್ಲಿ ದುರ್ಗಾಮಾತೆ ಮೊದಲಾದ ದೇವತೆಯರು ನಾನಾ ರೂಪದಲ್ಲಿ ದರ್ಶನ ನೀಡಿದರು.
ನಿಟುವಳ್ಳಿಯ ಶ್ರೀ ಜೋಡಿ ಬನ್ನಿ ಮಹಾಂಕಾಳಿ ಮತ್ತು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ಮೆರವಣಿಗೆ ನಡೆಸಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು. ಸಂಜೆ ಪುಷ್ಪಾ, ಚಿತ್ತರಗಿ ಆಶಾ ಅವರಿಂದ ಶ್ರೀದೇವಿ ಪಾರಾಯಣ ಮಾಡಿದರು. ಹೊಳಲ್ಕೆರೆಯ ವೀರಭದ್ರೇಶ್ವರ ತಂಡದಿಂದ ವೀರಗಾಸೆ, ಶುಭದಾ ತಂಡದಿಂದ ವೀಣಾವಾದನ ನಡೆಯಿತು.
ಎಸ್. ನಿಜಲಿಂಗಪ್ಪ ಬಡಾವಣೆಯ ಶಾರದಾಂಬಾ ದೇವಸ್ಥಾನದಲ್ಲಿ ಬೆಳಗ್ಗೆ ದುರ್ಗಾ ಜಪ, ಸಪ್ತಶತಿ ಪಾರಾಯಣ ನಡೆದರೆ, ಸಂಜೆ ದತ್ತಾತ್ರೇಯ ಭಟ್ ಅವರು ದೇವಿ ಪಾರಾಯಣ ವಿಧಾನದ ಬಗ್ಗೆ ವಿವರಿಸಿದರು. ನಿಟುವಳ್ಳಿಯ ದುರ್ಗಾಂಬಿಕಾ ದೇವಸ್ಥಾನದಲ್ಲಿ ಸಂಜೆ ದೀಪಾರಾಧನೆ ಬಳಿಕ ದುರ್ಗಾಂಬಿಕಾ ದೇವಿ ಭಜನಾ ಮಂಡಳಿಯಿಂದ ಭಜನೆ, ದೇವಿಯ ಪುರಾಣ ಹಾಗೂ ಲಲಿತಾ ಸಹಸ್ರನಾಮಾವಳಿ ನೆರವೇರಿತು. ಕನ್ಯಕಾ ಪರಮೇಶ್ವರಿ ದೇಗುಲದಲ್ಲಿ ವಾಸವಿ ಭಜನಾ ಮಂಡಳಿಯಿಂದ ಲಲಿತ ಸಹಸ್ರನಾಮಾರ್ಚನೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಸಚಿವ ಮಲ್ಲಿಕಾರ್ಜುನ್ ದಂಪತಿ ಪೂಜೆ
ಸೋಮವಾರ ಜನ್ಮದಿನ ಆಚರಿಸಿಕೊಂಡ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಪತ್ನಿ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರೊಂದಿಗೆ ನಗರದೇವತೆ ದುರ್ಗಾಂಬಿಕಾ ದೇವಿ ಸನ್ನಿದಾನದಲ್ಲಿ ಪೂಜೆ, ಅಭಿಷೇಕದಲ್ಲಿ ಭಾಗಿಯಾದರು.
ಎಸ್.ಎಸ್. ಗಣೇಶ್, ಸಮರ್ಥ ಶಾಮನೂರು ಹಾಗೂ ಶಾಮನೂರು ಕುಟುಂಬ ಸದಸ್ಯರು ಪಾಲ್ಗೊಂಡು ದೇವಿ ದರ್ಶನ ಪಡೆದರು. ಬೆಳಗ್ಗೆಯಿಂದಲೇ ವಿವಿಧ ದೇವರಿಗೆ ರುದ್ರಾಭಿಷೇಕ, ಪೂಜೆ, ಉದಯರವಿ ಪಾರಾಯಣ ನಡೆದವು. ಸಂಜೆ ಬೆಂಗಳೂರಿನ ಡಾ.ಸಿದ್ದೇಶ್ವರ ದೇವರು ಮರಿಕಟ್ಟಿ ಅವರಿಂದ ದೇವಿ ಪುರಾಣ ಪ್ರವಚನ ಶುರುವಾಯಿತು.
ಪೂರ್ಣಕುಂಭಗಳ ಮೆರವಣಿಗೆ
ವಿಶ್ವ ಹಿಂದು ಪರಿಷದ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಸಾರ್ವಜನಿಕ ವಿಜಯದಶಮಿ ಮಹೋತ್ಸವದ ಅಂಗವಾಗಿ ನಗರದ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನದಿಂದ ಶ್ರೀ ದುರ್ಗಾ ದೇವಿ ಮೂರ್ತಿಯ ಮೆರವಣಿಗೆ ನಡೆಸಲಾಯಿತು. ಮಹಿಳೆಯರು ಪೂರ್ಣಕುಂಭ ಹೊತ್ತು ಹೆಜ್ಜೆ ಹಾಕಿದರು.
ನಂತರ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ದುರ್ಗಾದೇವಿಯ ಘಟ ಸ್ಥಾಪನೆ ಮಾಡಲಾಯಿತು. ವಿನೋಬನಗರದ ಜಡೇಸಿದ್ದ ಶಿವಯೋಗೀಶ್ವರ ಮಠದ ಡಾ. ಶಿವಾನಂದ ಸ್ವಾಮೀಜಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು. ದರು. ಸಂಜೆ ಮಹಿಳೆಯರಿಂದ ಲಲಿತಾಸಹಸ್ರನಾಮ ಪಠಣ ನಡೆಯಿತು.
ಮಹೋತ್ಸವ ಸಮಿತಿ ಅಧ್ಯಕ್ಷ ಎಂ.ಆನಂದ್, ಸಂಚಾಲಕ ಆರ್.ಎಲ್. ಶಿವಪ್ರಕಾಶ್, ಯಶವಂತರಾವ್ ಜಾಧವ್, ಎಸ್.ಟಿ.ವೀರೇಶ್, ರಾಜನಹಳ್ಳಿ ಶಿವಕುಮಾರ್, ಎಲ್. ಧನುಷ್, ಎಚ್.ಪಿ. ವಿಶ್ವಾಸ್, ವಿನಾಯಕ ರಾನಡೆ, ದುರ್ಗೇಶ್, ಟಿಂಕರ್ ಮಂಜಣ್ಣ, ಚೇತನಾ ಶಿವಕುಮಾರ್ ಇತರರಿದ್ದರು.