

ದಾವಣಗೆರೆ: ನಾವಿಂದು ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿದ್ದರೂ ಪ್ರಕೃತಿ ಜತೆಗೆ ಹೆಜ್ಜೆ ಹಾಕಬೇಕಿದೆ. ಪರಿಸರ ಪೂರಕವಾದ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಹೋಮಿಯೋಪಥಿ ಪರಂಪರೆಗಳನ್ನು ಮರೆಯುವಂತಿಲ್ಲ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ವಿದ್ಯಾನಗರದ ತುಳಸಿ ರಾಮರಾಜು ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಏಳನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯಲ್ಲಿ ಮಾತನಾಡಿದರು.
ನಮ್ಮ ದೇಹ ಮತ್ತು ಮನಸ್ಸನ್ನು ಪ್ರಕೃತಿಯೊಂದಿಗೆ ಸಮನ್ವಯಗೊಳಿಸುವ ಪ್ರಾಚೀನ ಶಾಸ್ತ್ರ ವಿಧಾನವೇ ಪ್ರಕೃತಿ ಚಿಕಿತ್ಸೆಯಾಗಿದೆ. ಇದು ದೇಹವನ್ನು ತಂತ್ರಜ್ಞಾನದ ಬದಲು ಸಹಜ ಮತ್ತು ಸ್ವಾಭಾವಿಕ ದಾರಿಗೆ ಒಳಪಡಿಸಲು ನೆರವಾಗಲಿದೆ ಎಂದು ಹೇಳಿದರು.
ಇಂದಿನ ವೈಜ್ಞಾನಿಕ ತಂತ್ರಜ್ಞಾನ ಕೂಡ ಆಹಾರ, ಪರಿಸರ ಮತ್ತು ಮನಃಶಾಂತಿಗಾಗಿ ನೈಸರ್ಗಿಕ ಚಿಕಿತ್ಸೆಗಳ ಮಹತ್ವವನ್ನು ಪರಿಗಣಿಸಲು ಆರಂಭಿಸಿದೆ. ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿಸಲು ಪ್ರಕೃತಿ ಚಿಕಿತ್ಸೆ ಪೂರಕವಾಗಿದೆ.
ನಾವು ಪ್ರಕೃತಿಯ ಭಾಗವಾಗಿದ್ದೇವೆ. ನಮ್ಮ ಆರೋಗ್ಯವೂ ಪ್ರಕೃತಿಯ ಪಂಚಭೂತಗಳಿಂದ ಪ್ರೇರಿತವಾಗಿದೆ. ನಮ್ಮನ್ನು ತಾಯಿಯಂತೆ ಪೋಷಿಸುವ ಪ್ರಕೃತಿಯನ್ನು ನಾವೂ ಗೌರವಿಸುವುದು ಅತ್ಯಗತ್ಯ. ಹೀಗಾಗಿ ಪ್ರಕೃತಿ ಚಿಕಿತ್ಸೆಯನ್ನು ನಾವು ಅನುಸರಿಸುವ ಜತೆಗೆ ಪರಿಸರಮುಖಿ ಜೀವನ ಶೈಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವೈದ್ಯೆ ಡಾ. ವಿಂಧ್ಯಾ ಗಂಗಾಧರ ವರ್ಮ ಮಾತನಾಡಿ, ನಾವು ದಿನಕ್ಕೆ 2 ಬಾರಿ ಊಟ ಮಾಡಬೇಕು. ನಿತ್ಯ ವ್ಯಾಯಾಮ, ಯೋಗ ಮಾಡಬೇಕು. ದಿನಕ್ಕೆ ಶೇ.75ಭಾಗದಷ್ಟು ನೀರನ್ನು ಕುಡಿಯಬೇಕು. ವಾರಕ್ಕೊಮ್ಮೆ ಉಪವಾಸ ಮಾಡಿದರೆ ಆರೋಗ್ಯ ಸುಸ್ಥಿತಿಯಲ್ಲಿ ಇಡಬಹುದು ಎಂದರು.
ಪ್ರಕೃತಿ ಚಿಕಿತ್ಸೆಯು ನಿರೌಷಧ ಚಿಕಿತ್ಸಾ ಕ್ರಮವಾಗಿದೆ. ದೇಹದಲ್ಲಿ ವಿಷಕಾರಿ ವಸ್ತುಗಳ ಸಂಗ್ರಹಣೆಯಿಂದಾಗಿ ಕಾಯಿಲೆಗಳು ಬರಲಿವೆ. ಪ್ರಕೃತಿ ಚಿಕಿತ್ಸೆ ವೈದ್ಯರು ಇದರ ಮೂಲಕಾರಣ ಹುಡುಕಿ ಇಡೀ ದೇಹವನ್ನು ಶುದ್ಧೀಕರಣಗೊಳಿಸುವ ಚಿಕಿತ್ಸೆ ನೀಡುತ್ತಾರೆ ಎಂದರು.
ವೈದ್ಯೆ ಡಾ.ತುಳಸಿ ಮಾತನಾಡಿ, ನಾವು ತಿನ್ನುವ ಹಣ್ಣುಗಳ ಬೀಜಗಳನ್ನು ಮಣ್ಣಿಗೆ ಹಾಕುವ ಮುಖಾಂತರ ಮತ್ತಷ್ಟು ಗಿಡ-ಮರಗಳನ್ನು ಪ್ರಕೃತಿಯಲ್ಲಿ ಹೆಚ್ಚಿಸಿದರೆ ಮಾತ್ರ ಪ್ರಕೃತಿ ಚಿಕಿತ್ಸಾ ಪದ್ಧತಿಗೆ ಉಳಿಗಾಲವಿದೆ ಎಂದು ಹೇಳಿದರು.
ವೈದ್ಯ ಡಾ. ಗಂಗಾಧರ ವರ್ಮ ಮಾತನಾಡಿ, ಪ್ರಕೃತಿ ಚಿಕಿತ್ಸೆಯಿಂದ ಮೂಳೆ, ನರ, ಶ್ವಾಸಕೋಶ, ಜೀರ್ಣಾಂಗವ್ಯೆಹ, ಚರ್ಮ, ದೀರ್ಘಕಾಲಿಕ, ಮುಟ್ಟಿನ ಸಮಸ್ಯೆಗಳು ಸಂಪೂರ್ಣವಾಗಿ ಔಷಧಗಳ ಪ್ರಮೇಯವೇ ಇಲ್ಲದೆ ಸಂಪೂರ್ಣ ಗುಣವಾಗುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ಶಲ್ಯ ವೈದ್ಯ ಬಿ. ರಾಮರಾಜು ಆಸ್ಪತ್ರೆಯ ಸಿಬ್ಬಂದಿ ಪ್ರಹ್ಲಾದ್, ಸುಧಾ ಜಾಧವ್, ಪವಿತ್ರಾ, ನಾಗಣ್ಣ, ಗಾಯತ್ರಿ, ಅಬ್ದುಲ್‌ಸಾಬ್ ಇತರರಿದ್ದರು. ಕನಕ ಬಿಂದು ಕಾರ್ಯಕ್ರಮ ನಿರ್ವಹಿಸಿದರು