ಕಾರ್ಮಿಕರ ಸಂಖ್ಯೆ ವೃದ್ಧಿಸಿದ ನರೇಗಾ ಕೂಲಿ!   ಸೃಜನೆಯಾದ 4.97 ಲಕ್ಷ ಮಾನವ ದಿನಗಳು  28293 ಕುಟುಂಬಗಳಿಗೆ ಕೆಲಸದ ಖುಷಿ

1000133461.jpg
Published on

ಡಿ.ಎಂ.ಮಹೇಶ್, ದಾವಣಗೆರೆ:

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿ ರಾಜ್ಯದಲ್ಲೇ ಏಳನೇ ಸ್ಥಾನದಲ್ಲಿರುವ ದಾವಣಗೆರೆ ಜಿಲ್ಲೆ,  ಹೆಚ್ಚಿನ ಕೂಲಿಕಾರ್ಮಿಕರನ್ನು ಬರಸೆಳೆಯುತ್ತಿದೆ! ಹೆಚ್ಚಿದ ಕೂಲಿ ದರವೇ ಇದರ ಕ್ರೆಡಿಟ್‌ಗೆ ಕಾರಣವಾಗಿದೆ!!
ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಗ್ರಾಮೀಣಾವೃದ್ಧಿ ಸಚಿವಾಲಯವು ಏ.1ರಿಂದ ಅನ್ವಯವಾಗುವಂತೆ ಕನಿಷ್ಠ ಕೂಲಿ ದರ ಶೇ.10.44ರಷ್ಟು ಹೆಚ್ಚಿಸಿದೆ. ದಿನಗೂಲಿ ದರ 316 ರೂ.ಗಳಿಂದ 349ಕ್ಕೆ ಜಿಗಿತವಾದ್ದರಿಂದ ಕೂಲಿಕಾರ್ಮಿಕರ ಪ್ರಮಾಣದಲ್ಲೂ ಏರಿಕೆ ಕಂಡಿದೆ.  
ಮೇ ಅಂತ್ಯಕ್ಕೆ ಗುರಿ ಇದ್ದ 5.62 ಲಕ್ಷ ಮಾನವ ದಿನಗಳ ಪೈಕಿ ಮೇ 16ರ ಅಂತ್ಯಕ್ಕೆ 4,97,322 ಮಾನವ ದಿನಗಳನ್ನು ಸೃಜಿಸಿ ಶೇ.89ರಷ್ಟು ಸಾಧನೆ ಮಾಡಲಾಗಿದೆ. 1649 ಲಕ್ಷ ರೂ. ಕೂಲಿ, 1035.81 ಲಕ್ಷ ರೂ. ಸಾಮಗ್ರಿ ವೆಚ್ಚ ಸೇರಿ ಇದುವರೆಗೆ 2684.93 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ.
ಕಳೆದೆರಡು ತಿಂಗಳಲ್ಲಿ 28293 ಕುಟುಂಬಗಳ ಕೈಗೆ ಕೆಲಸ ದಕ್ಕಿದೆ. ಮಹಿಳಾ ಕೂಲಿಕಾರ್ಮಿಕರಿಂದ 2,67,232 ಹಾಗೂ ಪುರುಷರಿಂದ 2,30,090 ಮಾನವ ದಿನಗಳು ಸೃಜನೆಯಾಗಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್-ಮೇ ಅವಧಿಯಲ್ಲಿ ಕೂಲಿ ಅರಸಿ ಬಂದವರೇ ಹೆಚ್ಚು.
ಮೇ ಅಂತ್ಯಕ್ಕೆ ನಿಗದಿಪಡಿಸಿದ ಗುರಿಯಲ್ಲಿ ಜಗಳೂರು ತಾಲೂಕಿನಲ್ಲಿ 1.80 ಲಕ್ಷ, ಚನ್ನಗಿರಿ- 1.25 ಲಕ್ಷ, ದಾವಣಗೆರೆ- 74 ಸಾವಿರ,  ಹೊನ್ನಾಳಿ-59 ಸಾವಿರ, ಹರಿಹರ ಹಾಗೂ ನ್ಯಾಮತಿ ತಾಲೂಕುಗಳಲ್ಲಿ ತಲಾ 29 ಸಾವಿರ ಮಾನವ ದಿನ ಸೃಜಿಸಲಾಗಿದೆ.
2022-23ನೇ ಸಾಲಿನಲ್ಲಿ ಗುರಿ ಇದ್ದ 36 ಲಕ್ಷ ಮಾನವ ದಿನ ಸೃಜನೆ ಪೈಕಿ 34.21 ಲಕ್ಷ ಸಾಧಿಸಲಾಗಿತ್ತು. 2023-24ರಲ್ಲಿ ಗುರಿ ಮೀರಿ 34.10 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿತ್ತು. ಆರ್ಥಿಕ ಸಾಲಿನಲ್ಲಿ ದಾವಣಗೆರೆ ಜಿಲ್ಲಾ ಪಂಚಾಯ್ತಿಯಿಂದ ನರೇಗಾದಡಿ ರೂಪಿಸಲಾದ ಕ್ರಿಯಾಯೋಜನೆಯಲ್ಲಿ ವಾರ್ಷಿಕ  215.80 ರೂ. ವೆಚ್ಚದ ಆರ್ಥಿಕ ಗುರಿ ಹಾಗೂ 35 ಲಕ್ಷ ಮಾನವ ಗುರಿ ಸೃಜಿಸುವ ಗುರಿ ಇದೆ.
ಜಲಾನಯನ ವೃದ್ಧಿಗೆ ಆದ್ಯತೆ
ಬರಗಾಲವಿರುವ ಹಿನ್ನೆಲೆಯಲ್ಲಿ ಜಲಾನಯನ ವೃದ್ಧಿಗೆ ಖಾತ್ರಿ ಯೋಜನೆಯಡಿ ಆದ್ಯತೆ ನೀಡಲಾಗಿದೆ. 1809 ಕಾಮಗಾರಿಗಳ ಗುರಿ ಪೈಕಿ ಇದುವರೆಗೆ 343 ಕಾಮಗಾರಿ ಪೂರ್ಣಗೊಂಡಿವೆ. ಶೇ.18.96ರಷ್ಟು ಭೌತಿಕ ಪ್ರಗತಿ ಸಾಧಿಸಲಾಗಿದೆ.
ಜಿಲ್ಲೆಯಲ್ಲಿ ಕೆರೆ ಹೂಳೆತ್ತುವ 193 ಕಾಮಗಾರಿಗಳಲ್ಲಿ 67 ಪೂರ್ಣಗೊಂಡಿವೆ. ಜಗಳೂರು ತಾಲೂಕಿನಲ್ಲಿ ಈ ಬಾರಿ ಅತಿ ಹೆಚ್ಚು ಅಂದರೆ 23 ಕೆರೆಗಳ ಹೂಳೆತ್ತಲಾಗುತ್ತಿದೆ. ಉಳಿದಂತೆ ನಾಲಾ/ ಹಳ್ಳ/ ಚೆಕ್‌ಡ್ಯಾಂ ಹೂಳೆತ್ತುವ 205 ಕಾಮಗಾರಿಗಳಲ್ಲಿ 57 ಮುಗಿದಿವೆ. ಉದ್ದೇಶಿತ 87 ಗೋಕಟ್ಟೆಗಳಲ್ಲಿ 11 ನಿರ್ಮಾಣವಾಗಿವೆ.
ಅರಣ್ಯೀಕರಣ. ಕಂದಕ ಬದು ನಿರ್ಮಾಣದ 210ರಲ್ಲಿ 56 ಕೆಲಸ ನಡೆದಿವೆ. ವೈಯಕ್ತಿಕ ಹಾಗೂ ಸಮುದಾಯ ಯೋಜನೆಯಡಿ ಬದು ನಿರ್ಮಾಣದ 624 ಕಾಮಗಾರಿಗಳಿವೆ. ಇದರಲ್ಲಿ 55 ಸಂಪನ್ನವಾಗಿವೆ. ಬರ ಹಿನ್ನೆಲೆಯಲ್ಲಿ 187 ಕಡೆ ಬೋರ್‌ವೆಲ್ ರಿಚಾರ್ಜ್ ಪಿಟ್ ನಿರ್ಮಿಸುವ ಯೋಜನೆ ಪೈಕಿ 12 ಮುಗಿದಿವೆ.303  ಕೃಷಿ ಹೊಂಡಗಳ ಪೈಕಿ ಸದ್ಯಕ್ಕೆ 85 ನನಸಾಗಿವೆ.
ಉಳಿದಂತೆ ಶಾಲಾ ಶೌಚಗೃಹಗಳು, ಕಾಂಪೌಂಡ್ ನಿರ್ಮಾಣ, ಆಟದ ಮೈದಾನಗಳ ನಿರ್ಮಾಣ ಕೂಡ ಕ್ರಿಯಾಯೋಜನೆಯಲ್ಲಿ ಅನುಮೋದನೆಗೊಂಡಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆರ್ಥಿಕ ಬಲದೊಂದಿಗೆ ಅನುದಾನ ಲಭ್ಯತೆ ಗಮನಿಸಿ ಅಂಗನವಾಡಿ ಕಟ್ಟಡಗಳನ್ನು ಕೈಗೆತ್ತಿಕೊಳ್ಳಲು ಜಿಪಂ ನಿರ್ಧರಿಸಿದೆ.
ಮಹಿಳೆಯರ ಪಾಲೇ ಹೆಚ್ಚು
2023-24ರಲ್ಲಿ ಮಹಿಳಾ ಕೂಲಿಕಾರ್ಮಿಕರ ಪಾಲುದಾರಿಕೆ ಶೇ.52.01ರಷ್ಟಿತ್ತು. ಕಳೆದ ಎರಡು ತಿಂಗಳವಧಿಯಲ್ಲಿ ಈ ಪ್ರಮಾಣ ಶೇ. 53.73ಕ್ಕೆ ಏರಿಕೆಯಾಗಿದೆ. ಉಷ್ಣಾಂಶ ಹೆಚ್ಚಿರುವ ಹಿನ್ನೆಲೆಯಲ್ಲಿ ಮುಂಜಾನೆಗೂ ಮುನ್ನವೇ ದೈನಂದಿನ ಕೆಲಸ ಆರಂಭಿಸಲು ಸೂಚನೆ ನೀಡಲಾಗಿದೆ.
ಒಟ್ಟು 232700 ಉದ್ಯೋಗಚೀಟಿ ಹಂಚಿಕೆಯಾಗಿದ್ದು ಇದರಲ್ಲಿ 1,22,638 ಮಾತ್ರ ಸಕ್ರಿಯವಾಗಿವೆ. ಕೂಲಿಕಾರ್ಮಿಕರು ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಉಳಿದವು ನಿಷ್ಕ್ರಿಯವಾಗಿವೆ.
ಜನರು ಗುಳೆ ಹೋಗುವುದನ್ನು ತಪ್ಪಿಸಲು ಎಲ್ಲ ಗ್ರಾಪಂಗಳಲ್ಲಿ ಡಂಗುರ ಸಾರಿಸಿ ನರೇಗಾ ಕೆಲಸದಲ್ಲಿ ತೊಡಗಲು ಮಾಹಿತಿ ನೀಡಲಾಗಿದೆ. ಗ್ರಾಪಂವಾರು ಐಇಸಿ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಸೂಕ್ತ ದಾಖಲಾತಿ ಇದ್ದವರು ಕೇಳಿಬಂದಲ್ಲಿ ಕೂಲಿ ಕೆಲಸ ನೀಡಲಾಗುತ್ತಿದೆ ಎನ್ನುತ್ತವೆ ಜಿಪಂ ಮೂಲಗಳು.
--
ಕೂಲಿ ದರ ಹೆಚ್ಚಳದಿಂದ ಕಾರ್ಮಿಕರಿಗೆ ಅನುಕೂಲವಾಗಿದೆ. ಹಿಂದಿನ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ 15 ಸಾವಿರದಷ್ಟು ಕೂಲಿಕಾರ್ಮಿಕರಿದ್ದರು. ಆದರೆ ಈ ಬಾರಿ 25 ಸಾವಿರಕ್ಕೆ ತಲುಪಿದೆ. ಹೀಗಾಗಿ ಕೆರೆಗಳು ಹಾಗೂ ನಾಲೆಗಳ ಹೂಳೆತ್ತುವ ಜತೆಗೆ ಜಲಾನಯನ ಕೆಲಸಕ್ಕೆ ಹೆಚ್ಚು ಗಮನ ಹರಿಸಿದ್ದೇವೆ. ಪ್ರತಿ ತಾಲೂಕಿನಲ್ಲಿ ಒಂದೆರಡು ಗೋಕಟ್ಟೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ.
ಸುರೇಶ್ ಬಿ. ಇಟ್ನಾಳ್
ದಾವಣಗೆರೆ ಜಿಪಂ ಸಿಇಒ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net