ದಾವಣಗೆರೆಯಲ್ಲಿ 16ರಂದು ಹಿಂದೂಸ್ತಾನಿ ಸಂಗೀತ ಕಾರ್ಯಕ್ರಮ

1000180861.jpg
Published on

ದಾವಣಗೆರೆ: ಪಂಡಿತ್ ಲಿಂಗರಾಜ ಬುವಾ ಯರಗುಪ್ಪಿ ಸಂಗೀತ ಪ್ರತಿಷ್ಠಾನದಿಂದ ನಗರದ ನಿಜಲಿಂಗಪ್ಪ ಬಡಾವಣೆಯ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಹಾರಾಜರ ಮಂದಿರದಲ್ಲಿ ಜೂ.16 ರಂದು ‘ಪರಂಪರಾ’ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪಂ. ಲಿಂಗರಾಜ ಬುವಾ ಯರಗುಪ್ಪಿ ಹಾಗೂ ರಾಮಪ್ಪ ವೈ. ಹುಗ್ಗಣ್ಣವರ ಸ್ಮರಣೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಾವಿದ ಡಾ.ಅಶೋಕ ಹುಗ್ಗಣ್ಣವರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಭಾನುವಾರ ಸಂಜೆ 5 ಗಂಟೆಗೆ ಕಾರ್ಯಕ್ರಮ ಆಯೋಜನೆಯಾಗಿದ್ದು ಶ್ರೀಗೌರಿ ಎಂ. ಜೋಶಿ, ಬೆಂಗಳೂರಿನ ಅನಿರುದ್ಧ ಐತಾಳ, ಹೊನ್ನಾವರದ ವಿಶ್ವೇಶ್ವರ ಭಟ್, ಕುಮುಟಾದ ರೇಷ್ಮಾ ಭಟ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಹೇಳಿದರು.
ಅಲ್ಲಮಪ್ರಭು ಕಡಕೋಳ, ಚಂದ್ರಶೇಖರ ಪಂಜಿ, ಅಶೋಕ ಪತ್ತಾರ ತಬಲಾ ಹಾಗೂ ಆನಂದ ಆರ್. ಪಾಟೀಲ್, ಮಾಲತೇಶ ದತ್ತಾತ್ರೇಯ ಜೋಶಿ ಹಾರ‌್ಮೋನಿಯಂ ಸಾಥ್ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಅಲ್ಲಮಪ್ರಭು ಕಡಕೋಳ ಅವರಿಗೆ ಪಂ. ಲಿಂಗರಾಜ ಬುವಾ ಯರಗುಪ್ಪಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗದಗಿನ ಗಾಯಕ ಡಾ.ಮೃತ್ಯುಂಜಯ ಉಪಸ್ಥಿತರಿರುವರು ಎಂದರು.
ಒಂದು ಕಾಲದಲ್ಲಿ ಸಾಂಸ್ಕೃತಿಕ ಕೇಂದ್ರವಾಗಿದ್ದ ದಾವಣಗೆರೆ ವಾಣಿಜ್ಯ ಕ್ಷೇತ್ರವಾಗಿದ್ದು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ನಶಿಸುತ್ತಿದೆ. ಇದನ್ನು ಪುನಶ್ಚೇತನಗೊಳಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು. ಕಲಾವಿದ ಮಾಲತೇಶ ಜೋಶಿ, ಅಚ್ಯುತಾನಂದ, ಲಲಿತ್‌ಕುಮಾರ್ ಜೈನ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net