

ದಾವಣಗೆರೆ: ಸಂತೇಬೆನ್ನೂರಿನ ಪೆಟ್ರೋಲ್ ಬಂಕ್ ಎದುರಿನ ಮುಖ್ಯರಸ್ತೆಯಲ್ಲಿ ಸೋಮವಾರ ನಡೆದಿದ್ದ ಗಾರೆ ಕೆಲಸಗಾರನ ಕೊಲೆ ಪ್ರಕರಣವನ್ನು ಪೊಲೀಸರು ಆರು ಗಂಟೆಯೊಳಗೆ ಭೇದಿಸಿದ್ದು, ಧಾರಾಕಾರ ಮಳೆಯಲ್ಲೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸ್ ಶ್ವಾನ ‘ತುಂಗಾ-2’ ಪ್ರಮುಖ ಪಾತ್ರ ನಿರ್ವಹಿಸಿ ಗಮನ ಸೆಳೆದಿದೆ.
ಸಂತೇಬೆನ್ನೂರು-ದಾವಣಗೆರೆ ಮುಖ್ಯರಸ್ತೆಯ ಹಿಂದುಸ್ತಾನ ಪೆಟ್ರೋಲಿಯಂ ಬಂಕ್ ಬಳಿ ಸೋಮವಾರ ರಾತ್ರಿ 9-30ಕ್ಕೆ ಅದೇ ಗ್ರಾಮದ ಗಾರೆ ಕೆಲಸಗಾರ ಸಂತೋಷ (36) ಅವರನ್ನು ದುಷ್ಕರ್ಮಿಗಳನ್ನು ಮಚ್ಚಿನಿಂದ ಬರ್ಬರವಾಗಿ ಹಲ್ಲೆ ಎಸಗಿ ಕೊಲೆ ಮಾಡಿದ್ದರು. ಈ ಪ್ರಕರಣ ಗ್ರಾಮಸ್ಥರಲ್ಲಿ ಭಯ ಮೂಡಿಸಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು, ಸಂತೇಬೆನ್ನೂರು ಠಾಣೆ ಪಿಎಸ್‌ಐಗಳಾದ ರೂಪಾ ತೆಂಬದ್, ಚನ್ನವೀರಪ್ಪ ಹಾಗೂ ಸಿಬ್ಬಂದಿ, ತುಂಗಾ-2 ಶ್ವಾನದಳದೊಂದಿಗೆ ಲಭ್ಯವಿರುವ ಸಾಕ್ಷಾೃಧಾರಗಳೊಂದಿಗೆ ಕಾರ್ಯಪ್ರವೃತ್ತರಾಗಿ ಕಲವೇ ಗಂಟೆಗಳಲ್ಲಿ ಪ್ರಕರಣ ಭೇದಿಸಿತು.
ಚನ್ನಗಿರಿ ತಾಲೂಕಿನ ಚನ್ನಾಪುರ ಗ್ರಾಮದ ಪಂಚರ್ ಹಾಕುವ ಶ್ರೀರಂಗಸ್ವಾಮಿ ಬಂಧಿತ ಆರೋಪಿಯಾಗಿದ್ದು, ಆರೋಪಿತನ ಪತ್ನಿ ಜತೆಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದಡಿ ಸಂತೋಷನನ್ನು ಕೊಲೆ ಮಾಡಿದ್ದ. ಅಲ್ಲದೆ ಪತ್ನಿಯನ್ನೂ ಕೊಲೆ ಮಾಡುವ ಸಂಚು ರೂಪಿಸಿದ್ದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ್ದರಿಂದ ಮತ್ತೊಂದು ಕೊಲೆ ಯತ್ನ ತಡೆದಂತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ನಡೆಸಿದ ಅಧಿಕಾರಿ-ಸಿಬ್ಬಂದಿ ಹಾಗೂ ತುಂಗಾ-2 ಶ್ವಾನದ ಕಾರ್ಯನಿಷ್ಠೆ ಹಾಗೂ ಶ್ವಾನದಳದ ಸಿಬ್ಬಂದಿ ಎಂ.ಡಿ. ಶಫೀವುಲ್ಲಾ, ದರ್ಗ್ಯಾನಾಯ್ಕ ತಂಡದ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.