ಕೋರ್ಟ್ ಆವರಣದಲ್ಲೇ ಕೊಲೆ ಯತ್ನ

1001182305.jpg
Published on

ದಾವಣಗೆರೆ: ಇಲ್ಲಿನ ಜಿಲ್ಲಾ ಕೌಟುಂಬಿಕ ನ್ಯಾಯಾಲಯ ಆವರಣದಲ್ಲೇ ಶುಕ್ರವಾರ, ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದು ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಾಕು ಇರಿತದಿಂದ ತೀವ್ರ ರಕ್ತಸ್ರಾವಕ್ಕೊಳಗಾದ ಪದ್ಮಾ (30) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿ ಪ್ರದೀಪ್‌ನನ್ನು ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯಕ್ಕೆ ಯಾವುದೇ ದೂರು ದಾಖಲಾಗಿಲ್ಲ.

ದಾವಣಗೆರೆ ಜಾಲಿನಗರ ನಿವಾಸಿ, ಆಟೋ ಚಾಲಕ ಪ್ರದೀಪ್, ಪದ್ಮಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ 3 ವರ್ಷದ ಒಂದು ಮಗುವಿತ್ತು.

ಆರೋಪಿ ಪ್ರದೀಪ್, ಪತ್ನಿಯ ಶೀಲ ಶಂಕಿಸಿ ಆಗಾಗ್ಗೆ ಗಲಾಟೆ ಮಾಡುತ್ತಿದ್ದ. ದಂಪತಿ ಕಲಹ ಕೋರ್ಟ್ ಮೆಟ್ಟಿಲೇರಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆಯಾಗಿತ್ತು. ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಪದ್ಮಾ ಮೇಲೆ ಈ ಹಿಂದೆಯೂ ಪತಿಯಿಂದ ಕೊಲೆ ಯತ್ನ ನಡೆದಿತ್ತು ಎನ್ನಲಾಗಿದೆ.

ಅಂತಿಮ ಹಂತದ ವಿಚಾರಣೆ ಸಂಬಂಧ ಶುಕ್ರವಾರ ಜಿಲ್ಲಾ ಕೌಟುಂಬಿಕ ನ್ಯಾಯಾಲಯಕ್ಕೆ ಬಂದಿದ್ದಾಗ ಪ್ರದೀಪ್, ಕೋರ್ಟ್ ಆವರಣದಲ್ಲೇ ಚಾಕುವಿನಿಂದ ಇರಿದಿದ್ದಾನೆ. ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಪದ್ಮಾ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net