ಎಂಆರ್‌ಐ ಗ್ಯಾರಂಟಿ ಯಾವಾಗ..? ಜಿಲ್ಲಾಸ್ಪತ್ರೆಯಲ್ಲಿಲ್ಲ ಸ್ಕಾೃನ್ ಸೌಕರ್ಯ

pixlr_20251013000651762.jpg
Published on
ಡಿ.ಎಂ.ಮಹೇಶ್, ದಾವಣಗೆರೆ:

ನನ್ನ ಮಗನಿಗೆ ಹತ್ತು ವರ್ಷ. ಕಾಲಿನ ಹಿಮ್ಮಡಿ ಊರಲೂ ಆಗುತ್ತಿಲ್ಲ. ತೆವಳುತ್ತಾ ನಡೆಯುತ್ತಾನೆ. ನರ ದೌರ್ಬಲ್ಯವಿರಬಹುದು, ಎಂಆರ್‌ಐ ಸ್ಕಾೃನಿಂಗ್ ಮಾಡಿಸಿಕೊಂಡು ಬನ್ನಿ ಎಂದು ವೈದ್ಯರು ಹೇಳಿದ್ದಾರೆ. ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಎಂಆರ್‌ಐ ಸೆಂಟರ್‌ಗೆ ಹೋಗಬೇಕಿದೆ ಎಂಬುದು ರಾಣೆಬೆನ್ನೂರಿನ ವ್ಯಾಪಾರಿ ಚಂದ್ರಪ್ಪ ಹೇಳಿದರು.

ನಮ್ಮ ಮಗನಿಗೆ ಆಗಾಗ್ಗೆ ತೀವ್ರ ತಲೆನೋವು ಬರುತ್ತದೆ. ಒಮ್ಮೊಮ್ಮೆ ಕೈ-ಕಾಲು ಜೋಮು ಹಿಡಿಯುತ್ತದೆ. ಎಂಆರ್‌ಐ ಸ್ಕಾೃನಿಂಗ್ ವರದಿ ನಂತರವೇ ಅವನ ಸಮಸ್ಯೆ ತಿಳಿಯಲಿದೆ ಎಂದು ವೈದ್ಯರು ಹೇಳಿದ್ದಾರೆ. ಸ್ಕಾೃನಿಂಗ್ ಸೆಂಟರ್‌ನಲ್ಲಿ ಹೆಚ್ಚಿನ ಹಣ ಕೇಳುತ್ತಿದ್ದಾರೆ ಎಂಬುದು ಹೊನ್ನಾಳಿಯ ಪರಮೇಶ್ವರಪ್ಪ ಅವರ ಬೇಸರ.

ಇಂತಹ ಅದೆಷ್ಟೋ ಆರೋಗ್ಯ ಸಮಸ್ಯೆಗಳನ್ನು ಹೊತ್ತು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಗೆ ಬರುವ ಬಡವರಿಗೆ ಎಂಆರ್‌ಐ ಸ್ಕಾೃನಿಂಗ್ ಮಾತ್ರ ದೊಡ್ಡ ಕೊರತೆಯಾಗಿದೆ. ಮಧ್ಯಕರ್ನಾಟಕದ ಜಿಲ್ಲಾ ಕೇಂದ್ರದಲ್ಲಿ, 950 ಹಾಸಿಗೆ ಸಾಮರ್ಥ್ಯವುಳ್ಳ ಈ ದೊಡ್ಡಾಸ್ಪತ್ರೆಗೆ ಸುಮಾರು ಐದಾರು ಜಿಲ್ಲೆಗಳ ರೋಗಿಗಳು ಬರುತ್ತಾರೆ. ಆದರೆ ಬೇಡಿಕೆ ಇರುವ ಎಂಆರ್‌ಐ ಮಾತ್ರ ಅರ್ಧಚಂದ್ರ.

ಯಾವ ಪರೀಕ್ಷೆಗಳಿಗೆ ಬೇಕು?

ವಿವಿಧ ಆರೋಗ್ಯ ಸಮಸ್ಯೆಗಳ ರೋಗ ನಿರ್ಣಯ ಮತ್ತು ಚಿಕಿತ್ಸೆಗೆ ಮೇಲ್ವಿಚಾರಣೆ ಮಾಡಲು ಎಂಆರ್‌ಐ ಸ್ಕಾೃನಿಂಗ್ ಅತ್ಯಗತ್ಯ. ಮಿದುಳು, ಬೆನ್ನುಮೂಳೆ, ಹೃದಯ, ಕಿಬ್ಬೊಟ್ಟೆ, ಎದೆ, ಲಿವರ್, ಕಣ್ಣು, ಕೀಲುಗಳು, ಮೊಣಕೈ, ಮೊಣಕಾಲು, ಕುತ್ತಿಗೆ ಮೊದಲಾದ ದೇಹದ ಅಂಗಗಳು ಮತ್ತು ಅದರ ವ್ಯವಸ್ಥೆ ಪರೀಕ್ಷೆ ಮಾಡಲಾಗುತ್ತದೆ.

ಮಕ್ಕಳಲ್ಲಿ ಪಾರ್ಶ್ವವಾಯು, ಸೆಲೆಬ್ರಲ್ ಪಾಲಸಿ, ಮೂರ್ಛೆ ರೋಗ, ಹಿರಿಯರಲ್ಲಿ ಮಿದುಳು ಸೇರಿ ವಿವಿಧ ರೀತಿಯ ಪಾರ್ಶ್ವವಾಯು, ಪ್ರಜ್ಞಾಹೀನ ಸ್ಥಿತಿ ಸಂದರ್ಭದಲ್ಲೂ ಎಂಆರ್‌ಐ ಅಗತ್ಯವಿದೆ. ತಜ್ಞರು ಹೇಳುವ ಪ್ರಕಾರ ಎಂಆರ್‌ಐ ಸ್ಕಾೃನಿಂಗ್ ಮೂಲಕ 205 ಮಾದರಿಯ ಪರೀಕ್ಷೆ ನಡೆಸಲು ಅವಕಾಶವಿದೆ. ನೆರೆಯ ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಗರಿಷ್ಠ 80 ನಮೂನೆಯ ಅಂಗ ಪರೀಕ್ಷೆ ಗೆ ಬಳಕೆಯಾಗುತ್ತಿದೆ.

ದಶಕದ ಬೇಡಿಕೆ

ಎಂಆರ್‌ಐ ಸ್ಕಾೃನ್ ಯಂತ್ರಕ್ಕೆ ದಶಕದಿಂದಲೂ ಬೇಡಿಕೆ ಇದೆ. 2014ರ ಜಿಪಂ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಅಲ್ಲಿಂದಲೂ ಆರೋಗ್ಯ ಇಲಾಖೆಗೆ ಪತ್ರಗಳು ರವಾನೆಯಾಗಿವೆ. ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 2024ರ ಜುಲೈ 11ಕ್ಕೆ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಎಂಆರ್‌ಐ ಸ್ಕಾೃನಿಂಗ್ ಯಂತ್ರದ ಅಗತ್ಯತೆ ಬಗ್ಗೆ ಚರ್ಚೆಯಾಗಿತ್ತು. ಸಾರ್ವಜನಿಕರ ಬೇಡಿಕೆಯಂತೆ ಇನ್ನು 2-3 ತಿಂಗಳಲ್ಲಿ ಆಸ್ಪತ್ರೆಗೆ ಈ ಸೌಲಭ್ಯ ಸಿಗಲಿದೆ ಎಂದು ಸಚಿವರು ಹೇಳಿದ್ದರು. ಈ ಭರವಸೆಗೆ ಬರೋಬ್ಬರಿ ಒಂದು ವರ್ಷ ಕಳೆದಿದೆ!

ಆಸ್ಪತ್ರೆ ಮೂಲಗಳ ಪ್ರಕಾರ ಅನೇಕ ಬಾರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ದಾವಣಗೆರೆಯಲ್ಲಿ ಎಂಆರ್‌ಐ ಕಾರ್ಯ ನಿರ್ವಹಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಜಿಲ್ಲಾಸ್ಪತ್ರೆಯ ಟ್ರಾಮಾ ಕೇರ್‌ಸೆಂಟರ್‌ನ ಹೊಸ ಕಟ್ಟಡದಲ್ಲಿ ಇದಕ್ಕಾಗಿ ಒಂದು ಕೊಠಡಿ ಸಿದ್ಧಪಡಿಸಿಕೊಳ್ಳಲಾಗಿದೆ. ಜನರು, ಆರೋಗ್ಯ ರಕ್ಷಾ ಸಮಿತಿ ಸದಸ್ಯರೂ ಈ ಯಂತ್ರ ಯಾವಾಗ ಬರಲಿದೆ ಎಂದು ಕೇಳುತ್ತಲೇ ಇದ್ದಾರೆ. ಆಸ್ಪತ್ರೆ ಅಧೀಕ್ಷಕರಲ್ಲೂ ಈ ಬಗ್ಗೆ ಸ್ಪಷ್ಟ ಉತ್ತರವಿಲ್ಲ!

ಬಡವರಿಗೆ ದುಬಾರಿ ಶುಲ್ಕದ ಹೊರೆ

ಕರ್ನಾಟಕದ ಐದಾರು ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕಾೃನರ್ ಸೌಲಭ್ಯವಿದೆ. ಉಳಿದಂತೆಲ್ಲ ಖಾಸಗಿ ಆಸ್ಪತ್ರೆಗಳು ಇದರ ಲಾಭ ಪಡೆಯುತ್ತಿವೆ. ಖಾಸಗಿ ಸೆಂಟರ್‌ಗಳು, ಆಸ್ಪತ್ರೆಗಳಲ್ಲಿ ದೇಹದ ಒಂದೊಂದು ಭಾಗದ ಪರೀಕ್ಷೆಗೂ 6 ಸಾವಿರ ರೂ.ನಿಂದ ಹಿಡಿದು 10 ಸಾವಿರ ರೂ.ವರೆಗೆ ದರ ನಿಗದಿಯಾಗಿದೆ.

ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಪಿಪಿಪಿ ಮಾದರಿಯಲ್ಲಿನ ಎಂಆರ್‌ಐ ಪರೀಕ್ಷಾ ಕೇಂದ್ರದಲ್ಲಿ ತಿಂಗಳೊಂದಕ್ಕೆ ಸರಾಸರಿ 800 ಎಂಆರ್‌ಐ ಸ್ಕಾೃನಿಂಗ್ ಮಾಡಲಾಗುತ್ತಿದೆ. ಇದರಲ್ಲಿ ದಾವಣಗೆರೆ, ಸುತ್ತಮುತ್ತಲ ಜಿಲ್ಲೆಯ ಶೇ. 50ರಷ್ಟು ರೋಗಿಗಳು ಎಬಿಎಆರ್‌ಕೆ ಇತರೆ ಯೋಜನೆಗಳಡಿ ಪೂರಕ ದಾಖಲಾತಿಗಳೊಂದಿಗೆ ಇದರ ಲಾಭ ಪಡೆಯುತ್ತಲಿದ್ದಾರೆ.

ಇಲ್ಲಿ 80 ನಮೂನೆಯ ಪರೀಕ್ಷೆ ನಡೆಸಲಾಗುತ್ತಿದ್ದು, ಪ್ರತಿ ಟೆಸ್ಟ್‌ನ ನಿಗದಿತ 3 ಸಾವಿರ ರೂ. ದರವನ್ನು ಸರ್ಕಾರವೇ ಭರಿಸಲಿದೆ. ಹೀಗಾಗಿ ಬಡವರು ತಡವಾಗಿಯಾದರೂ ಇದರ ಉಚಿತ ಪ್ರಯೋಜನ ಪಡೆಯುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗಳ ಲಾಬಿ?

ಎಂಆರ್‌ಐ ಸ್ಕಾೃನಿಂಗ್ ಸೌಲಭ್ಯ ಹೊಂದಿರುವ ದಾವಣಗೆರೆ ಹಾಗೂ ಸುತ್ತಮುತ್ತಲ ಜಿಲ್ಲೆ, ನಗರಗಳ ಖಾಸಗಿ ಸೆಂಟರ್‌ಗಳು, ಆಸ್ಪತ್ರೆಗಳಿಗೆ ದಿನವೂ ರೋಗಿಗಳು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ಸೌಲಭ್ಯ ಸಿಕ್ಕಲ್ಲಿ ತಮಗೆ ತೊಂದರೆ ಆಗಬಹುದು, ರೋಗಿಗಳ ಸಂಖ್ಯೆ ತಗ್ಗಬಹುದು ಎಂಬ ಲೆಕ್ಕಾಚಾರದಡಿ ಸರ್ಕಾರದೊಂದಿಗೆ ಖಾಸಗಿಯವರ ಲಾಭಿ ನಡೆದಿದೆಯೇ ಎಂಬ ಆರೋಪವೂ ಕೇಳಿಬರುತ್ತಿದೆ.

ಕನಿಷ್ಠ 14 ಹುದ್ದೆಗಳ ಸೃಜನೆ?

ಎಂಆರ್‌ಐ ಬಂದರೆ ತಂತ್ರಜ್ಞರು, ಸ್ಟಾಪ್‌ನರ್ಸ್, ವ್ಯವಸ್ಥಾಪಕರು, ಪಿಆರ್‌ಒ, ಅಟೆಂಡರ್ ಸೇರಿ ಕನಿಷ್ಠ 14 ಹುದ್ದೆಗಳು ಸೃಷ್ಟಿಯಾಗಲಿವೆ. ಒಂದು ಸಾಮಾನ್ಯ ಎಂಆರ್‌ಐ ಯಂತ್ರಕ್ಕೆ 7ರಿಂದ 8 ಕೋಟಿ ರೂ. ಆಗಲಿದೆ. ಉಳಿದಂತೆ 3 ಟೆಸ್ಲಾ, 5 ಟೆಸ್ಲಾ ಸೇರಿ ಅತ್ಯಧುನಿಕ ಮಾದರಿಯ ಯಂತ್ರಗಳಿಗೆ 12 ಕೋಟಿ ರೂ. ದರವಿದೆ. ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಜಿಲ್ಲಾಸ್ಪತ್ರೆಗೆ ಈ ಯಂತ್ರ ನೀಡುವುದು ಕಷ್ಟವೇನಲ್ಲ.

---

ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಎಂಆರ್‌ಐ ಸ್ಕಾೃನ್ ಯಂತ್ರ ಸ್ಥಾಪಿಸಲು ಅಗತ್ಯ ಅನುದಾನ, ಅವಶ್ಯ ಸಿಬ್ಬಂದಿ ಕಲ್ಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಅನೇಕ ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರವೇ ಎಂಆರ್‌ಐ ಯಂತ್ರ ಬರುವ ನಿರೀಕ್ಷೆ ಇದೆ. ಆಸ್ಪತ್ರೆಯಲ್ಲಿ ಇದಕ್ಕಾಗಿ ಕೊಠಡಿ ಸಿದ್ಧಪಡಿಸಲಾಗಿದೆ.

ಡಾ.ಎನ್.ಬಿ. ನಾಗೇಂದ್ರಪ್ಪ

ಚಿಗಟೇರಿ ಆಸ್ಪತ್ರೆ ಅಧೀಕ್ಷಕ.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net