

ದಾವಣಗೆರೆ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮತದಾನ ಪ್ರಮಾಣದಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಪಕ್ಷದ ಬಗ್ಗೆ ಜನವಿಶ್ವಾಸ ಕುಂದದಂತೆ ಎಚ್ಚರಿಕೆ ವಹಿಸುವ ಅವರ ಸಲಹೆಯನ್ನು ಕಾರ್ಯಕರ್ತರು ಪಾಲಿಸಬೇಕು ಎಂದು ನೂತನ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಎಸ್‌ಎಸ್ ಬಡಾವಣೆಯ ತಮ್ಮ ಗೃಹಕಚೇರಿಯಲ್ಲಿ ಮಂಗಳವಾರ, ದಾವಣಗೆರೆ ಜಿಲ್ಲೆ ಹಾಗೂ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದರು.
ಚುನಾವಣಾ ಪ್ರಚಾರದ ವೇಳೆ ರಾಜ್ಯದ ಜನರು ಗ್ಯಾರಂಟಿ ಯೋಜನೆ ಸೇರಿ ಕಾಂಗ್ರೆಸ್‌ನ ಜನಪರ ಕೆಲಸಗಳಿಗೆ ಪ್ರಶಂಸೆ ವ್ಯಕ್ತಪಡಿಸಿದ್ದರೂ ಮತ ಗಳಿಕೆಯಲ್ಲಿ ಹಿನ್ನಡೆಯಾಗಿದೆ. ಮುಂದೆ ಇಂತಹ ಲೋಪ ಆಗದಂತೆ ಗಮನ ಹರಿಸಬೇಕು ಎಂದರು.
ಕೆಲವೆಡೆ ಪ್ರಚಾರದ ವೇಳೆ ಉತ್ತಮ ಜನಾಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಮತಗಳು ಕುಸಿದಿದ್ದು ಇದರ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಕಾರಣಗಳನ್ನು ಗುರುತಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಿದರು.
ಚುನಾವಣೆಯಲ್ಲಿ ಶಾಸಕರ ಜತೆಗೂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿ ಪಕ್ಷದ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಚ್. ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಹರಿಹರದ ನಂದಿಗಾವಿ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಗೋವಿಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಬಿ.ಕೆ. ಪರಶುರಾಮ್, ಜಿ.ಸಿ.ನಿಂಗಪ್ಪ, ಕಮ್ಮತ್ತಹಳ್ಳಿ ಮಂಜುನಾಥ್, ಕುಬೇರಪ್ಪ, ಎಂ.ವಿ. ಅಂಜಿನಪ್ಪ, ಎಲ್ .ಬಿ .ಹನುಮಂತಪ್ಪ, ಜಬೀವುಲ್ಲಾ, ಶ್ರೀನಿವಾಸ್, ಅಬೀದ್ ಅಲಿ, ಬಿ.ಜಿ. ನಾಗರಾಜ್, ಶಂಷೀರ್ ಅಹಮದ್ ಇತರರಿದ್ದರು.