ಒದ್ದೆ ಮೈದಾನದಲ್ಲಿ ಸೊಳ್ಳೆಗಳ ಡಾನ್ಸ್!

1000316967.jpg
Published on

ದಾವಣಗೆರೆ: ಬುಧವಾರ ರಾತ್ರಿಯ ಮಳೆಯಿಂದಾಗಿ ಜಿಲ್ಲಾ ಕ್ರೀಡಾಂಗಣ ಒದ್ದೆಯಾಗಿತ್ತು. ನಗರಪಾಲಿಕೆ ಸಿಬ್ಬಂದಿ ಮೈದಾನದ ಕೆಲವೆಡೆ ಎಂ-ಸ್ಯಾಂಡ್ ಹರವಿದ್ದರು. ತೇವಾಂಶದಿಂದಾಗಿ ವೇದಿಕೆ ಬಳಿ ಹಾಕಿದ್ದ ಬೃಹತ್ ಆಕಾರದ ರಂಗೋಲಿ ಮಾಸಿತ್ತು. ಇದೇ ನೆಲದ ಮೇಲೆ ಮಾತ್ರ ಸೊಳ್ಳೆಗಳ ಡಾನ್ಸ್ ನಿರಾತಂಕವಾಗಿ ನಡೆಯಿತು!
ಹೌದು. ಆದರವು ನಿಜ ಸೊಳ್ಳೆಗಳಲ್ಲ. ಅವುಗಳ ವೇಷದಲ್ಲಿದ್ದವರು ಪುಟಾಣಿಗಳು. ‘ಈಗ‘ ತೆಲುಗು ಸಿನಿಮಾದ ಕನ್ನಡ ಅವತರಣಿಕೆಯ ಹಾಡು ‘ಓಡು,. ಓಡು’ ಹಾಡಿಗೆ  ಸಖತ್ ಸ್ಟೆಪ್ಸ್ ಹಾಕಿ ರಂಜಿಸಿದರು. ವಿನೋಬನಗರದ ಸೇಂಟ್‌ಮೇರಿಸ್ ಶಾಲೆಯ ಮಕ್ಕಳು ಡೆಂೆ ಹಾವಳಿ ಮತ್ತು ಅದರ ನಿಯಂತ್ರಣ ಕುರಿತ ಸಂದೇಶಾತ್ಮಕ ನೃತ್ಯರೂಪಕ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು.
ಮೈದಾನದ ತುಂಬಾ ಫಾಗಿಂಗ್ ಹೊಗೆ ಆವರಿಸಿದ್ದೆ,  ಫ್ಲೆಕ್ಸ್ ರೂಪದಲ್ಲಿದ್ದ ಆಂಬುಲೆನ್ಸ್‌ಗಳು ಸಂಚರಿಸಿ ಸದ್ದು ಮಾಡಿದವು. ದೊಡ್ಡ ಗಾತ್ರದ ಚುಚ್ಚುಮದ್ದುಗಳು ಕೂಡ ರೂಪಕದಲ್ಲಿ ಹಾದು ಹೋದವು. ವೈದ್ಯರು, ಪೌರಕಾರ್ಮಿಕರು ಕೂಡ ಕಾಣಿಸಿಕೊಂಡರು.
ತ್ಯಾಜ್ಯ ನಿರ್ವಹಣೆಗೆ ಸ್ಥಳೀಯ ಸಂಸ್ಥೆ ಜತೆ ಸಾರ್ವಜನಿಕರು ಕೈ ಜೋಡಿಸಬೇಕು. ಮಲಗುವಾಗ ಸೊಳ್ಳೆಪರದೆ ಅಳವಡಿಸಿಕೊಳ್ಳಬೇಕು. ಮನೆ-ಕಚೇರಿ ಆವರಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ ಎಂಬ ಧ್ವನಿಮುದ್ರಿತ ಸಂದೇಶ ಎಲ್ಲರ ಕಿವಿಗೆ ನಾಟಿತು.
ಜೈನ್ ವಿದ್ಯಾಲಯದ ಮಕ್ಕಳು ಭರತನಾಟ್ಯಂ, ರಾಜಸ್ಥಾನಿ, ಪಂಜಾಬಿ ಹಾಗೂ ಕರ್ನಾಟಕದ ಜಾನಪದ ನೃತ್ಯಗಳ ಮಿಶ್ರಣದೊಂದಿಗೆ ದೇಶಭಕ್ತಿ ಮೂಡಿಸಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರೃ ಸೇನಾನಿಗಳಾದ ತಮಿಳುನಾಡಿನ ತಿರುಪ್ಪುರ್ ಕುಮಾರನ್, ಪಂಜಾಬಿನ ಲಾಲಾ ಲಜಪತ್ ರಾಯ್, ರಾಜಸ್ಥಾನದ ಸಗರ್‌ಮಲ್ ಗೋಪ ಅವರ ಪುಟ್ಟ ಪರಿಚಯ ನೀಡಲಾಯಿತು. ಬ್ರಿಟಿಷರ ವಿರುದ್ಧದ ಕರ್ನಾಟಕದ ಈಸೂರು ಜನರ ದಂಗೆಯನ್ನು ಸ್ಮರಿಸುವುದರೊಂದಿಗೆ ನಮನ ಸಲ್ಲಿಸಲಾಯಿತು.
ರಾಜನಹಳ್ಳಿ ಸೀತಮ್ಮ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಭಾರತದ ರಾಷ್ಟ್ರ ಧ್ವಜದಲ್ಲಿನ ಮೂರೂ ಬಣ್ಣಗಳ ಪ್ರತ್ಯೇಕ ವೇಲ್‌ಗಳಿಂದಲೇ ವೈವಿಧ್ಯಮಯ ನೃತ್ಯದ ಭಂಗಿಗಳನ್ನು ಪ್ರದರ್ಶಿಸಿದರು. ವಂದೇ ಮಾತರಂ ಹಾಡಿಗೆ ಹೆಜ್ಜೆ ಹಾಕಿದ ಮಕ್ಕಳು ಎಲ್ಲರ ಎದೆಯಲ್ಲಿ ದೇಶಪ್ರೇಮದ ಬಾವುಟಗಳನ್ನು ಹಾರಿಸಿದರು.
ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನ ಮಕ್ಕಳು ಇದೇ ಪ್ರಥಮ ಬಾರಿಗೆ ನೃತ್ಯರೂಪಕ ಮಾಡಿ ರಂಜಿಸಿದರು. ಶ್ವೇತವರ್ಣದ ದರಿಸಿನಲ್ಲಿದ್ದ ವಿದ್ಯಾರ್ಥಿನಿಯರು ಮೈಸೂರು ಮಲ್ಲಿಗೆ ಚಿತ್ರದ ‘ನಾವು ಭಾರತೀಯರು’ ಹಾಡಿಗೆ ಕುಣಿದರು. ನಮನ ಅಕಾಡೆಮಿಯ ಮುಖ್ಯಸ್ಥೆ ಮಾಧವಿ ಗೋಪಾಲಕೃಷ್ಣ ಅವರು ನೃತ್ಯ ಸಂಯೋಜನೆ ಮಾಡಿದ್ದರು.
ಸಪ್ತಗಿರಿ ಶಾಲೆಯ ಮಕ್ಕಳು 120 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ಮೈದಾನದಲ್ಲಿ ಪ್ರದರ್ಶಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಆರು ಮಂದಿ ಮುಸ್ಲಿಂ ವಿದ್ಯಾರ್ಥಿಗಳನ್ನು ಮೌಲಾನಾ ಅಬ್ದುಲ್ ಕಲಾಂ ಆಜಾದ್ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಳೇಬಿಸಲೇರಿಯ ಸ್ವಾತಂತ್ರೃಯೋಧರಾದ ನೀಲಪ್ಪ, ಚನ್ನಬಸಪ್ಪ ಅವರನ್ನು ಸಚಿವರು ಸನ್ಮಾನಿಸಿದರು.
ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ, ಪೊಲೀಸ್ ತುಕಡಿ, ವಿವಿಧ ಶಾಲಾ ಕಾಲೇಜುಗಳು, ಭಾರತ್ ಸ್ಕೌಟ್ಸ್-ಗೈಡ್ಸ್‌ನ ಬ್ಯಾಂಡ್ ಟ್ರೂಪ್, ಜಿಲ್ಲಾ ಪೊಲೀಸ್ ವಾದ್ಯವೃಂದ ಸೇರಿ 31 ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net