

ದಾವಣಗೆರೆ: ಅಹಿಂದ ವರ್ಗದ ಮುಖಂಡ, ಸಿಎಂ ಸಿದ್ದರಾಮಯ್ಯ ಅವರು ಕಷ್ಟದಲ್ಲಿದ್ದಾಗ, ನೈತಿಕ ಬೆಂಬಲ ನೀಡುವಲ್ಲಿ ಶಾಮನೂರು ಮನೆತನ ಮೌನ ತಾಳಿದೆ ಎಂದು ಇನ್‌ಸೈಟ್ಸ್ ಸಂಸ್ಥೆ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ಟೀಕಿಸಿದರು.
ಲೋಕಸಭೆ ಚುನಾವಣಾ ಪ್ರಚಾರಕ್ಕೆ ದಾವಣಗೆರೆಗೆ ಬಂದು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಕಾರಣರಾಗಿದ್ದವರು ಸಿದ್ದರಾಮಯ್ಯ. ಅವರ ಪರ ಮೈಸೂರಿನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಜನಾಂದೋಲನ ಸಭೆಯಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸದೆ ನಿರ್ಲಕ್ಷೃ ವಹಿಸಿದರು. ಸಂಸತ್ತಿನಲ್ಲೂ ಅಧಿಕಾರ ದುರುಪಯೋಗ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿರುದ್ಧ ಧ್ವನಿ ಎತ್ತಲಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಶಿವಮೊಗ್ಗಕ್ಕೆ ತೆರಳಿ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದಿದ್ದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರು, ಬಿಜೆಪಿ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರಿಗೆ ಬೆನ್ನು ತಟ್ಟಿದ್ದರು. ಒಂದು ಮಠದ ಬಗ್ಗೆ ಸಭೆ ಮಾಡಿ ಮಾತನಾಡಿದರು. ಆದರೆ, ಸಿದ್ದರಾಮಯ್ಯ ಅವರ ಸಂಕಷ್ಟ ಸಮಯದಲ್ಲಿ ಯಾವ ಹೇಳಿಕೆಯನ್ನೂ ನೀಡಲಿಲ್ಲ.
ದಾವಣಗೆರೆಯಲ್ಲಿ ಅಹಿಂದ ವರ್ಗದ ಹೋರಾಟ ನಡೆದಾಗಲೂ ಎಸ್ಸೆಸ್ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪಾಲ್ಗೊಳ್ಳಲಿಲ್ಲ. ಸಿದ್ದರಾಮಯ್ಯ ಅವರಿಂದಾಗಿಯೇ ನಾವು ಗೆದ್ದಿದ್ದೇವೆ, ಅವರ ಹಿಂದೆ ನಾವಿದ್ದೇವೆ ಎಂಬ ನೈತಿಕ ಬೆಂಬಲ ಸೂಚಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಕ್ಕೆ ಬರುವವರೆಗೆ ಅಹಿಂದ ವರ್ಗವನ್ನು ಬಳಸಿಕೊಂಡು ಅಧಿಕಾರ ಸಿಕ್ಕ ನಂತರ ಮೂಲೆಗುಂಪು ಮಾಡುವ ಧೋರಣೆ ಕಾಂಗ್ರೆಸ್‌ನ ಜಿಲ್ಲಾ ನಾಯಕರಲ್ಲಿ ಮುಂದುವರಿದಿದೆ. ಇನ್ನಾದರೂ ಶಾಮನೂರು ಮನೆತನದವರು ಸಿದ್ದರಾಮಯ್ಯ ಪರವಾಗಿ ಹೇಳಿಕೆ ನೀಡಲಿ ಎಂದು ಆಗ್ರಹಿಸಿದರು.
ಮೌಲ್ಯಾಧಾರಿತ, ಸೈದ್ಧಾಂತಿಕ ರಾಜಕೀಯ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿದರೆ ಭ್ರಷ್ಟಾಚಾರಿಗಳು, ಬಂಡವಾಳಶಾಹಿಗಳಿಗೆ ಅನುಕೂಲವಾಗದು ಎಂಬ ಕಾರಣಕ್ಕೆ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ರಾಜಕೀಯ ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದರು.
15 ಬಾರಿ ಬಜೆಟ್ ಮಂಡಿಸಿ, 9 ಪ್ರಮುಖ ಖಾತೆ ನಿಭಾಯಿಸಿದ್ದ ಸಿದ್ದರಾಮಯ್ಯ ಅವರು ಸ್ವಂತಕ್ಕೆ ಯಾವ ಸಂಸ್ಥೆ ಮಾಡದೇ ತಮ್ಮದೇ ಆದ ಪರಂಪರೆ ಹುಟ್ಟುಹಾಕಿದ್ದಾರೆ. ಇದನ್ನು ಕೊನೆಗಾಣಿಸುವುದೇ ಪಟ್ಟಭದ್ರ ಶಕ್ತಿಗಳ ಅಜೆಂಡಾ ಆಗಿದೆ. ಅವರನ್ನು ಕೆಳಗಿಳಿಸಿದರೆ ದಲಿತ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದವರ ಧ್ವನಿ ಅಡಗಿಸಬಹುದೆಂಬ ಹುನ್ನಾರ ನಡೆದಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಂದರ ಲೋಕಿಕೆರೆ, ಅಯ್ಯಣ್ಣ, ಸಾದಿಕ್, ಶರತ್‌ಕುಮಾರ್ ಇದ್ದರು.