

ಡಿ.ಎಂ.ಮಹೇಶ್, ದಾವಣಗೆರೆ
ಪೂರ್ವ ಮುಂಗಾರು ಮಳೆ ಚುರುಕಾಗಿದ್ದು, ಮುಂಗಾರು ಹಂಗಾಮಿನ ಕೃಷಿ ಕಾರ್ಯಕ್ಕೆ ಭೀಮಬಲ ಬಂದಿದೆ. ಜಿಲ್ಲೆಯಾದ್ಯಂತ ರೈತರು ಕಳೆ ತೆಗೆದು, ಭೂಮಿ ಹಸನು ಮಾಡುವಲ್ಲಿ ನಿರತರಾಗಿದ್ದಾರೆ. ಬದು ಸ್ವಚ್ಛತೆಗೂ ಆದ್ಯತೆ ನೀಡುತ್ತಿದ್ದಾರೆ.
ಮಾರ್ಚ್‌ನಿಂದ ಮೇ 19ರವರೆಗೆ ವಾಡಿಕೆಗಿಂತ 65 ಮಿಮೀ ಅಧಿಕ (ಸರಾಸರಿ 127.5ಮಿ.ಮೀ.) ಮಳೆಯಾಗಿದೆ. ಏಪ್ರಿಲ್‌ನಲ್ಲಿ ವಾಡಿಕೆಯಿದ್ದ 32.2 ಮಿ.ಮೀ. ಪೈಕಿ 47.2 ಮಿ.ಮೀ. ವಾಸ್ತವಿಕ ಮಳೆಯಾಗಿದೆ. ಮೇ ತಿಂಗಳಲ್ಲಿ ಇದುವರೆಗೆ ವಾಡಿಕೆಯ 35.2 ಮಿ.ಮೀ ಪೈಕಿ 78.3 ಮಿ.ಮೀನಷ್ಟು ಮಳೆಯಾಗಿದ್ದು ಶೇ. 122ರಷ್ಟು ಹೆಚ್ಚುವರಿಯಾಗಿದೆ.
ಉತ್ತಮ ಮಳೆ ಹಿನ್ನೆಲೆಯಲ್ಲಿ ಕೊಯ್ಲಿಗೆ ಬಂದಿರುವ ಭತ್ತಕ್ಕೆ ತುಸು ಅನನುಕೂಲವಾಗಿದೆ. ಉಳಿದಂತೆ ತೋಟಗಾರಿಕೆ ಬೆಳೆಗಳಿಗೆ ಹೇಳಿ ಮಾಡಿಸಿದ ವಾತಾವರಣ ಇದಾಗಿದೆ. ಅಂತರ್ಜಲ ವೃದ್ಧಿ ಜತೆಗೆ ವಿದ್ಯುತ್, ಡೀಸೆಲ್ ವೆಚ್ಚ ಉಳಿತಾಯವಾಗಿದೆ. ಮಾಗಿ ಉಳುಮೆ ಮಾಡದವರಿಗೆ ಈಗ ಕೆಲಸ ಮಾಡುವುದು ಸಲೀಸಾಗಿದೆ.
ಸದ್ಯಕ್ಕೆ ಸುರಿಯುತ್ತಿರುವ ಕೃತಿಕಾ ಮಳೆಯು ಹತ್ತಿ, ಎಳ್ಳು, ಹೆಸರು ಬಿತ್ತನೆಗೆ ಸಕಾಲ. ಸಾಮೆ, ನವಣೆ ಹಾಕಲೂ ಅನುಕೂಲಕರ. ಜಗಳೂರು, ಚನ್ನಗಿರಿ ತಾಲೂಕಿನಲ್ಲಿ ಚದುರಿದಂತೆ ಹತ್ತಿ ಬಿತ್ತನೆ ಕಾರ್ಯ ನಡೆಯುತ್ತಿದೆ. ಉಳಿದಂತೆ ಕೃಷಿ ಬೆಳೆಗಳ ಬಿತ್ತನೆಗೆ ಜೂನ್ ಮೊದಲ ವಾರದವರೆಗೆ ಕಾಯಬೇಕು.
1.20 ಲಕ್ಷ ಹೆ.ನಲ್ಲಿ ಮೆಕ್ಕೆಜೋಳ ಗುರಿ
ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ 2.44,702 ಹೆಕ್ಟೇರ್ ಕೃಷಿ ಪ್ರದೇಶದಲ್ಲಿ 2.43 ಲಕ್ಷ ಹೆ. ಗುರಿ ಸಾಧನೆ ಮಾಡಲಾಗಿತ್ತು. ಈ ಬಾರಿ ಜಿಲ್ಲೆಯಲ್ಲಿ 1,96,468 ಹೆ. ಬೆಳೆ ಗುರಿ ಹೊಂದಲಾಗಿದೆ. 1,20,450 ಹೆ.ನಲ್ಲಿ ಪ್ರಮುಖ ಬೆಳೆ ಮೆಕ್ಕೆಜೋಳ ಬೆಳೆಯುವ ಗುರಿ ಇದೆ. ಭತ್ತ 53,300 ಹೆ., ರಾಗಿ 9775, ಶೇಂಗಾ- 4270 ಹೆ., ಹತ್ತಿ 1883 ಹೆ., ಸೂರ್ಯಕಾಂತಿ 1528 ಹೆ., ಜೋಳ 507 ಹೆ., ಸಿರಿಧಾನ್ಯ 315 ಹೆ., 305 ಹೆ. ನಲ್ಲಿ ಸಜ್ಜೆ ಬೆಳೆಯುವ ಇರಾದೆ ಇದೆ.
ತೊಗರಿ ಪ್ರದೇಶ ವಿಸ್ತರಣೆ
ಕಳೆದ ಬಾರಿ ಜಿಲ್ಲೆಯಲ್ಲಿ ತೊಗರಿ ಬೆಳೆ ವಿಸ್ತೀರ್ಣಕ್ಕೆ ಪ್ರಯತ್ನ ನಡೆದಿತ್ತು. ಈ ಬಾರಿಯೂ 12 ಸಾವಿರ ಹೆಕ್ಟೇರ್ ಪ್ರದೇಶ ವಿಸ್ತರಣೆಗೆ ಕೃಷಿ ಇಲಾಖೆ ಮುಂದಾದೆ. ಸೋಯಾಬೀನ್ ಹಾಗೂ ಅವರೆ ಬೆಳೆಯನ್ನೂ 500 ಹೆಕ್ಟೇರ್‌ನಷ್ಟು ವಿಸ್ತರಿಸಲೂ ಯೋಜಿಸಿದೆ. ಶೇಂಗಾದಲ್ಲಿ ನಾಲ್ಕೈದು ಹೊಸ ತಳಿಗಳನ್ನು ಪರಿಚಯಿಸಲು ಇಲಾಖೆ ಹೆಜ್ಜೆ ಇಟ್ಟಿದೆ.
1.04 ಲಕ್ಷ ಹೆ. ಅಡಕೆ ಪ್ರದೇಶ
ಜಿಲ್ಲೆಯಲ್ಲಿ 1,18,851 ಹೆ. ತೋಟಗಾರಿಕಾ ಪ್ರದೇಶವಿದೆ. ಈ ಪೈಕಿ 2467.97 ಹೆ.ನಲ್ಲಿ ಹಣ್ಣಿನ ಬೆಳೆಗಳು, 3645.71 ಹೆ. ನಲ್ಲಿ ತರಕಾರಿ ಬೆಳೆ, 69.87. 32ಹೆ. ನಷ್ಟು ತೋಟದ ಬೆಳೆಗಳು, 1175.20ಹೆ.ನಲ್ಲಿ ಇತರೆ ಬೆಳೆಗಳಿವೆ. 1.04,574.95 ಹೆ.ನಷ್ಟು ಪ್ರದೇಶದಲ್ಲಿ ಅಡಕೆ ವಿಸ್ತೀರ್ಣಗೊಂಡಿದೆ. ವರ್ಷದಿಂದ ವರ್ಷಕ್ಕೆ ಇದರ ಪ್ರದೇಶ ಹಿಗ್ಗುತ್ತಿದೆ.
61265 ಕ್ವಿಂ. ಬಿತ್ತನೆ ಬೀಜ ದಾಸ್ತಾನು
ಕರ್ನಾಟಕ ಬೀಜ ನಿಗಮ ಹಾಗೂ ಖಾಸಗಿ ವಿತರಕರೂ ಸೇರಿ ಜಿಲ್ಲೆಯಲ್ಲಿ 61265 ಕ್ವಿಂ.ನಷ್ಟು ಬಿತ್ತನೆ ಬೀಜ ಲಭ್ಯತೆ ಇದೆ. ಭತ್ತ- 35150 ಕ್ವಿಂ, ಮೆಕ್ಕೆಜೋಳ- 22350 ಕ್ವಿಂ, ಶೇಂಗಾ- 2100 ಕ್ವಿಂ, ರಾಗಿ 950 ಕ್ವಿಂ, ದ್ವಿದಳ ಧಾನ್ಯ- 380 ಕ್ವಿಂ. ಏಕದಳ ಧಾನ್ಯ 125 ಕ್ವಿಂ, ಸೂರ್ಯಕಾಂತಿ 110 ಕ್ವಿಂ. ಸೋಯಾಬೀನ್ 55 ಕ್ವಿಂ. ಹತ್ತಿ 35 ಕ್ವಿಂ, ಎಣ್ಣೆ ಕಾಳುಗಳು- 35 ಕ್ವಿಂ. ಬಿತ್ತನೆ ಬೀಜ ದಾಸ್ತಾನಿದೆ.
ರಸಗೊಬ್ಬರದ ವಿವರ ( ಮೆಟ್ರಿಕ್ ಟನ್‌ಗಳಲ್ಲಿ)
ಮಾದರಿಗಳು ಒಟ್ಟು ಬೇಡಿಕೆ ಮೇ ಬೇಡಿಕೆ ಲಭ್ಯ ದಾಸ್ತಾನು
ಯೂರಿಯಾ 54162 6293 15249
ಡಿಎಪಿ 14672 3175 3358
ಎನ್‌ಪಿಕೆ ಕಾಂಪ್ಲೆಕ್ಸ್ 72616 11412 36311
ಎಂಒಪಿ 4586 738 6073
ಎಸ್‌ಎಸ್‌ಪಿ 513 77 678
------------------------------------
ಒಟ್ಟು 146549 21695 61669
----------------------------
ಮುಂಗಾರಿಗೆ ಅಗತ್ಯ ಸಿದ್ಧತೆ ನಡೆದಿದೆ. ಬಿತ್ತನೆ ಬೀಜ-ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ರೈತರು ಮೆಕ್ಕೆಜೋಳಕ್ಕೆ ಡಿಎಪಿ ಬದಲಾಗಿ ಪೊಟ್ಯಾಷ್ ಅಂಶ ಹೊಂದಿರುವ ಕಾಂಪ್ಲೆಕ್ಸ್ ರಸಗೊಬ್ಬರವನ್ನು ಬಳಸಬೇಕು. ಮುಸುಕಿನ ಜೋಳದಲ್ಲಿ ಕೇವಲ ಡಿಎಪಿ ಬಳಸುವುದರಿಂದ ಪೊಟಾಷ್ ಪೋಷಕಾಂಶದ ಕೊರತೆ ಕಂಡುಬಂದಿದ್ದು, ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ.
ಶ್ರೀನಿವಾಸ ಚಿಂತಾಲ್
ಜಂಟಿ ಕೃಷಿ ನಿರ್ದೇಶಕ, ದಾವಣಗೆರೆ.
----