ತಾಯಿ-ಮಗು ಮುಷ್ಯಗಳಿಗೆ ಗೌರವದ ವಿದಾಯ   ಹಳೇ ಕುಂದುವಾಡ ಗ್ರಾಮಸ್ಥರಿಂದ ಅಂತ್ಯಕ್ರಿಯೆ

pixlr_20240720004956335.jpg
Published on


ದಾವಣಗೆರೆ: ವಿದ್ಯುತ್ ಅಪಘಾತದಲ್ಲಿ ಮಡಿದ ತಾಯಿ-ಮಗು ಮುಷ್ಯ. ಅವೆರಡರ ಕಳೇಬರಕ್ಕೂ ಮಾನವ ಸಹಜ ಅಂತ್ಯಕ್ರಿಯೆ ನೆರವೇರಿಸಿ ಗೌರವದ ವಿದಾಯ ಹೇಳಿದ ಜನ ಮತ್ತೊಂದೆಡೆ.
ಶುಕ್ರವಾರ, ಈ ಮನ ಕಲುಕುವ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ದಾವಣಗೆರೆ ತಾಲೂಕಿನ ಹಳೇ ಕುಂದುವಾಡ ಗ್ರಾಮ. ವಿಧ್ಯುಕ್ತ ಪೂಜೆಯೊಂದಿಗೆ ಮಣ್ಣಿನಲ್ಲಿ ಹೂಳುವ ಮೂಲಕ ಅಂತಿಮ ಸಂಸ್ಕಾರ ಮಾಡಿ ಗೌರವದ ವಿದಾಯ ಹೇಳಿದ ಗಾಮಸ್ಥರ ಮಾನವೀಯ ನಡೆ ಸದ್ದು ಮಾಡಿತು.
ಹಳೆಯ ಹಗೂ ಹೊಸ ಕುಂದುವಾಡ ಎರಡೂ ಗ್ರಾಮದಲ್ಲಿ ನಿತ್ಯ ಮುಷ್ಯಗಳ ಹಾವಳಿ ಸಹಜ. ಆಹಾರ ಅರಸಿ ಹೊರಡುತ್ತಿದ್ದ ಅವು, ಯಾರಿಗೂ ವಿನಾಕಾರಣ ತೊಂದರೆ ನೀಡಿದ ನಿದರ್ಶನವಿಲ್ಲ.
ಶುಕ್ರವಾರ ಬೆೆಳಗ್ಗೆ ರಸ್ತೆ ದಾಟುತ್ತಿದ್ದ ತಾಯಿ ಮುಷ್ಯ ವಿದ್ಯುತ್ ಪರಿವರ್ತಕದ ಕಂಬವೇರಿತ್ತು. ತಕ್ಷಣ ವಿದ್ಯುತ್ ತಂತಿ ಸ್ಪರ್ಶಗೊಂಡು ಕೆಳಗೆ ಬಿದ್ದು ಮೃತಪಟ್ಟರೆ, ಅದರ ಕಂಕುಳದಲ್ಲಿದ್ದ ಮಗು ಕೂಡ ಉಸಿರು ನಿಲ್ಲಿಸಿತ್ತು.
ಇದನ್ನು ಗಮನಿಸಿದ ಗ್ರಾಮಸ್ಥರ ಒಂದು ಗುಂಪು ತಾವೇ ಹಣ ಜೋಡಿಸಿ ಅಂತ್ಯ ಸಂಸ್ಕಾರ ಮಾಡಲು ಸಜ್ಜಾದರು. ಜಿನುಗುವ ಮಳೆಯಲ್ಲೂ ಮಾನವ ಸಹಜವಾಗಿ ಮುಷ್ಯಗಳನ್ನು ಕುರ್ಚಿ ಮೇಲೆ ಕೂರಿಸಿ ಹೂಮಾಲೆ ಹಾಕಿ ಆರತಿ ಬೆಳಗಿ, ಅಗರಬತ್ತಿ ಬೆಳಗಿ ಪೂಜೆ ಸಲ್ಲಿಸಿದರು.
ನಂತರ ಟೆಂಪೋದಲ್ಲಿ ಎರಡೂ ಶವಗಳನ್ನು ಇರಿಸಿ ಮೆರವಣಿಗೆ ಮಾಡಿದರು. ಜೈ ಭಜರಂಗಿ ಎಂದು ಘೋಷಣೆ ಕೂಗಿದರು. ಗ್ರಾಮದ ದಾಸಪ್ಪನ ದೇವಸ್ಥಾನದ ಬಳಿಯ ಜಮೀನಿನ ಮಣ್ಣಿನಲ್ಲಿ ಶಾಸ್ತ್ರೋಕ್ತ ವಿಧಿ ನೆರವೇರಿಸಿ ಹೂತರು.
ಮೃತ ಮುಷ್ಯಗಳು ಆಂಜನೇಯನ ಸ್ವರೂಪ. ಹೀಗಾಗಿ ಅವನ್ನು ಯಾವುದೇ ತಾರತಮ್ಯ ಇಲ್ಲದಂತೆ ಗ್ರಾಮಸ್ಥರು ಸೇರಿ ಅಂತಿಮ ಸಂಸ್ಕಾರ ವಿಧಿಗಳನ್ನು ನೆರವೇರಿಸಿದ್ದೇವೆ ಎಂದು ಗ್ರಾಮದ ಯುವಕರಾದ ಚಂದ್ರು, ಮಾರುತಿ, ರಾಜು ಕರೂರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net