

ದಾವಣಗೆರೆ: ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಎಚ್. ವೀರಭದ್ರಪ್ಪ ಅವರನ್ನು ವಿಧಾನ ಪರಿಷತ್ತಿಗೆ ನೇಮಕ ಮಾಡುವಂತೆ ಆಗ್ರಹಿಸಿ ಜಿಲ್ಲಾ ಮಾದಿಗರ ಸಮಾಜದಿಂದ ಭಾನುವಾರ ನಗರದಲ್ಲಿ ಮೌನ ಮೆರವಣಿಗೆ ನಡೆಸಲಾಯಿತು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಬಾಬಾಸಾಹೇಬರ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಆರಂಭವಾದ ಮೆರವಣಿಗೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ನಿವಾಸಕ್ಕೆ ತೆರಳಿದಾಗ ಪ್ರತಿಭಟನಾಕಾರರು ಮನೆಗೆ ಮುತ್ತಿಗೆ ಹಾಕಿದರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮನವಿಪತ್ರ ಸಲ್ಲಿಸಿದರು.
ವೀರಭದ್ರಪ್ಪ ಅವರು 40 ವರ್ಷದಿಂದ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದರೂ ಸೂಕ್ತ ಸ್ಥಾನಮಾನದಿಂದ ವಂಚಿತರಾಗಿದ್ದಾರೆ. ಎಂಎಲ್ಸಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವ ಅವರಿಗೆ ವರಿಷ್ಠರು ಸಮ್ಮತಿಸಿ ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ಶಾಸಕ ಡಾ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸೇರಿ ಜಿಲ್ಲೆಯ ಶಾಸಕರು ವೀರಭದ್ರಪ್ಪ ಅವರ ಹೆಸರನ್ನು ಸೂಚಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ವೀರಭದ್ರಪ್ಪ ಅವರನ್ನು ಈ ಸ್ಥಾನಕ್ಕೆ ಪರಿಗಣಿಸಬೇಕೆಂದು ಆಗ್ರಹಿಸಿದರು.
ಇಂದಿರಾಗಾಂಧಿ ಅವರು 1978ರಲ್ಲಿ ಬಂಧನಕ್ಕೆ ಒಳಗಾದಾಗ ದಾವಣಗೆರೆ ಜಿಲ್ಲೆ ಬಂದ್ ಮಾಡಿ ರೈಲುಗಳನ್ನು ತಡೆದು ಪ್ರತಿಭಟಿಸಿದ್ದ ವೀರಭದ್ರಪ್ಪ ಅವರು, 6 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದರು. ದಾವಣಗೆರೆಯ ರುದ್ರಭೂಮಿಯ ನೈರ್ಮಲ್ಯ ಕಾಪಾಡಲು 42 ಎಕರೆ ಸುತ್ತಲೂ 12 ಅಡಿ ಎತ್ತರ ಕಾಂಪೌಂಡ್ ನಿರ್ಮಾಣಕ್ಕೆ ಕಾರಣರಾದರು.
ಟ್ರಸ್ಟ್ ಮೂಲಕ ಎಲ್ಲ ಜಾತಿ ವರ್ಗದ ಬಡವರ ಸಾಮೂಹಿಕ ವಿವಾಹ ನಡೆಸುತ್ತ ಬಂದಿದ್ದಾರೆ. ಹೀಗಾಗಿ ಅವರ ಸೇವೆ ಪರಿಗಣಿಸಿ ಎಂಎಲ್ಸಿ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ದಲಿತರ ಮತಗಳು ಕಾಂಗ್ರೆಸ್‌ನಿಂದ ದೂರ ಉಳಿಯಲಿವೆ ಎಂದು ಮುಖಂಡರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಲ್.ಎಂ.ಹನುಮಂತಪ್ಪ, ಹೆಗ್ಗೆರೆ ರಂಗಪ್ಪ, ಕೆ.ಹರೀಶ್, ಬಿ. ಸುರೇಶ್, ಬಿ.ಆರ್. ಮಂಜುನಾಥ್, ಬಿ.ವಿ. ಮಂಜುನಾಥ್, ಪುಣಭಘಟ್ಟ ಹನುಮಂತಪ್ಪ, ಜಗಳೂರು ಮಹೇಶಪ್ಪ, ಚನ್ನಗಿರಿ ಗೋವಿಂದರಾಜ್, ಉಚ್ಚಂಗಿಪ್ರಸಾದ್, ಮಾಯಕೊಂಡ ಪರುಶರಾಮ್, ಕೊಡತಾಳ್ ರುದ್ರೇಶ್, ಶಾಂತರಾಜ್, ಹರಿಹರ ರಘುಪತಿ , ಸಂತೋಷ್, ಕೆ. ಚಂದ್ರಪ್ಪ, ಸೋಮಣ್ಣ, ಎನ್. ಶಂಕರ್, ಸಿ.ಮೂರ್ತಿ, ಮಾನಪ್ಪ ಚಿಕ್ಕನಹಳ್ಳಿ ನಿಂಗಪ್ಪ ಇತರರು ಪಾಲ್ಗೊಂಡಿದ್ದರು