ಮರೆತುಹೋಗಿದ್ದ ಹಣ ಮರಳಿಸಿದ ಶಾಸಕ

1000482255.jpg
Published on

ದಾವಣಗೆರೆ: ಜ್ಯೂಸ್ ಸೆಂಟರ್‌ನಲ್ಲಿ 1.20 ಲಕ್ಷ ಹಣದ ಕೈಚೀಲ ಮರೆತು ಹೋಗಿದ್ದ ವಾರಸುದಾರರಿಗೆ, ಶಾಸಕ ಕೆ.ಎಸ್.ಬಸವಂತಪ್ಪ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ಮೂಲದ ಕಿರಾಣಿ ಅಂಗಡಿ ಮಾಲೀಕ ವೆಂಕಟೇಶ್, ಮಗನನ್ನು ಶಿರಮಗೊಂಡನಹಳ್ಳಿಯ ಅನ್‌ಮೋಲ್ ಕಾಲೇಜಿಗೆ ಸೇರಿಸಿದ್ದರು. ಶುಲ್ಕ ಕಟ್ಟಲೆಂದು ಸೋಮವಾರ ಸಂಜೆ ದಾವಣಗೆರೆಗೆ ಬಂದಿದ್ದರು.
ನಗರದ ಹರಳೆಣ್ಣೆ ಕೊಟ್ರಬಸಪ್ಪ ವೃತ್ತದ ಜ್ಯೂಸ್ ಸೆಂಟರ್‌ನಲ್ಲಿ ಜ್ಯೂಸ್ ಕುಡಿದ ವೆಂಕಟೇಶ್ ಅಲ್ಲಿಂದ ತೆರಳಿದ್ದಾರೆ. ಟೇಬಲ್ ಮೇಲಿಟ್ಟಿದ್ದ ಹಣದ ಚೀಲವನ್ನು ಮರೆತು ಹೋಗಿದ್ದಾರೆ.
ನಂತರದಲ್ಲಿ ಎಚ್ಚೆತ್ತು, ಕಾರಿನಲ್ಲಿ ಹಣ ಇಟ್ಟಿದ್ದಾಗಿ ಭಾವಿಸಿ ಹುಡುಕಾಡಿದ್ದಾರೆ. ಗೂಗಲ್‌ನಲ್ಲಿ ಜ್ಯೂಸ್ ಸೇವಿಸಿದ್ದ ಅಂಗಡಿ ನಂಬರ್ ಹುಡುಕಿ ಕರೆ ಮಾಡಿದಾಗ ಬ್ಯಾಗ್ ಇಲ್ಲೇ ಇದ್ದಿದ್ದು ಗೊತ್ತಾಗಿದೆ.
ಜ್ಯೂಸ್ ಅಂಗಡಿಯಿಂದ ವೆಂಕಟೇಶ್ ತೆರಳಿದ್ದ ಜಾಗಕ್ಕೆ ಬಂದಿದ್ದ ಶಾಸಕ ಕೆ.ಎಸ್.ಬಸವಂತಪ್ಪ, ಟೇಬಲ್ ಮೇಲಿನ ಚೀಲವನ್ನು ತೆರೆದಿದ್ದು, ಜನರೆದುರೇ ಹಣದ ನೋಟುಗಳನ್ನು ಎಣಿಸಿ ಅದರಲ್ಲಿ 1.20 ಲಕ್ಷ ರೂ. ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ದಾವಣಗೆರೆಗೆ ಬಂದ ವೆಂಕಟೇಶ್‌ಗೆ ಥರಾವರಿ ಪ್ರಶ್ನೆ ಮಾಡಿದ ಶಾಸಕರು ಕಡೆಗೂ ಅವರಿಗೆ ಹಣ ಮರಳಿಸಿ ಮಾನವೀಯತೆ ಮೆರೆದಿದ್ದು ಸ್ಥಳೀಯ ನಾಗರಿಕರು ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net