

ದಾವಣಗೆರೆ: ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಅರಣ್ಯ ಭೂಮಿಯಲ್ಲಿ 35 ವರ್ಷಗಳಿಂದ ಮನೆ ನಿರ್ಮಿಸಿಕೊಂಡು, ಜಮೀನು ಉಳುಮೆ ಮಾಡುತ್ತಿರರುವ ಎಸ್ಸಿ -ಎಸ್ಟಿ ಮತ್ತು ಹಿಂದುಳಿದ ವರ್ಗಗಳ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಶಾಸಕ ಕೆ.ಎಸ್.ಬಸವಂತಪ್ಪ, ಬೆಂಗಳೂರಿನಲ್ಲಿ ಶನಿವಾರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿಪತ್ರ ಸಲ್ಲಿಸಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಶೃಂಗಾರಬಾಗ್ ಮತ್ತು ಕಂಚಗಾರ್ತಿಕಟ್ಟೆ ಗ್ರಾಮಗಳ ವ್ಯಾಪ್ತಿಯ ಸರ್ವೆ ನಂ.16ರಲ್ಲಿ ಅನೇಕರು ಸುಮಾರು 35 ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಈ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳೂ ಇವೆ. ಈ ಗ್ರಾಮಗಳ ರೈತರು ಕೃಷಿ ಜೀವನ ಸಾಗಿಸುತ್ತಿದ್ದಾರೆ.
ಈ ಹಿಂದೆ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿದ್ದಾಗ ಈ ಗ್ರಾಮಗಳಲ್ಲಿ ವಾಸಿಸುತ್ತಿರುವವರಿಗೆ ನಿವೇಶನ ಮತ್ತು ಜಮೀನುಗಳಿಗೆ ಸಂಬಂಧಿಸಿದಂತೆ ಹಕ್ಕುಪತ್ರ ವಿತರಿಸಲಾಗಿದೆ. ಇಷ್ಟಿದ್ದರೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳು ನಿವಾಸಿ ಜನರನ್ನು ಹಾಗೂ ಉಳುಮೆ ಜಮೀನುಗಳನ್ನು ತೆರವುಗೊಳಿಸುವಂತೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.
ಈ ಗ್ರಾಮಗಳಲ್ಲಿ ಬದುಕು ಕಂಡುಕೊಂಡಿರುವ ಎಸ್ಸಿ ಎಸ್ಟಿ ಹಾಗೂ ಹಿಂದುಳಿದ ಸಮುದಾಯಗಳ ಜನರೇ ವಾಸವಿದ್ದಾರೆ. ಭದ್ರಾವತಿ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಅವರನ್ನು ಒಕ್ಕಲೆಬ್ಬಿಸಬಾರದು. ಯಥಾಸ್ಥಿತಿ ಕಾಪಾಡಿಕೊಂಡು ಹೋಗುವಂತೆ ಆದೇಶ ನೀಡಬೇಕು.
ಒಂದು ವೇಳೆ ಕ್ರಮ ಕೈಗೊಳ್ಳುವುದಾದರೆ ಸಂಬಂಧಪಟ್ಟ ಸಚಿವರು, ಶಾಸಕರೊಂದಿಗೆ ಚರ್ಚಿಸಿ ನಿರ್ಧಾರ ಮಾಡಬೇಕು. ಅಧಿಕಾರಿಗಳು ಏಕಾಏಕಿ ನಿರ್ಧಾರ ತೆಗೆದುಕೊಳ್ಳಬಾರದು. ಈ ಕುರಿತು ಡಿಎಫ್‌ಒಗೆ ಸೂಚನೆ ನೀಡಬೇಕೆಂದು ಶಾಸಕರು ಸಚಿವರಲ್ಲಿ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವರು, ಭದ್ರಾವತಿ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ರೈತರು ಮತ್ತು ಸಾರ್ವಜನಿಕರನ್ನು ಒಕ್ಕಲೆಬ್ಬಿಸದಿರುವಂತೆ ಸೂಚನೆ ನೀಡಿದ್ದಾರೆ.