

ದಾವಣಗೆರೆ: ಬಾಪೂಜಿ ಶಿಕ್ಷಣ ಸಂಸ್ಥೆಗಳ ಮಹಿಳಾ ಸಿಬ್ಬಂದಿಗಾಗಿ ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ, ದಾವಣಗೆರೆಯ ಎಂಬಿಎ ಕಾಲೇಜು ಸಭಾಂಗಣದಲ್ಲಿ ಸೋಮವಾರ ‘ಮಿಸ್ ಪಾರ್ವತಿ‘ ಫ್ಯಾಷನ್ ಶೋ ಸ್ಪರ್ಧೆ ನಡೆಸಲಾಯಿತು.
ಮೊದಲ ಸುತ್ತಿನಲ್ಲಿ ಆಯ್ಕೆಗೊಂಡ 40 ಮಹಿಳಾ ಸ್ಪರ್ಧಿಗಳು ಪ್ರೀ ಫಿನಾಲೆ ರೌಂಡ್ ನ ವೇದಿಕೆಯಲ್ಲಿ ಆತ್ಮವಿಶ್ವಾಸದೊಂದಿಗೆ ಆಕರ್ಷಕ ರ‌್ಯಾಂಪ್ ವಾಕ್ ಮಾಡಿದರು.
ಹೂವುಗಳ ಸೌಂದರ್ಯ ಎಂಬ ಪರಿಕಲ್ಪನೆ ಅಡಿಯಲ್ಲಿ ಬಣ್ಣ ಬಣ್ಣದ ಹೂವುಗಳ ಚಿತ್ತಾರ ಇರುವ ಸೀರೆಗಳನ್ನು, ವಿವಿಧ ಶೈಲಿಯ ಉಡುಗೆಗಳನ್ನು ಧರಿಸಿ, 21 ರಿಂದ 55 ವಯಸ್ಸಿನ ವರೆಗಿನ ಹೆಂಗೆಳೆಯರು ವಿಭಿನ್ನ ಶೈಲಿಯಲ್ಲಿ ಹೆಜ್ಜೆ ಹಾಕಿದ್ದು ಆಕರ್ಷಕವಾಗಿತ್ತು.
ಮಹಿಳೆ ಹಾಗೂ ಅವಳ ಹಕ್ಕುಗಳು, ಸಮಾಜದಲ್ಲಿ ಮಹಿಳೆಯರ ಪಾತ್ರ ಮುಂತಾದ ವಿಷಯ ಸಂಬಂಧಿತ ನಿರ್ಣಾಯಕರ ಪ್ರಶ್ನೆಗಳಿಗೆ , ಸ್ಥಳದಲ್ಲಿಯೇ ಹಲವು ಸ್ಪರ್ಧಿಗಳು ಮನಮುಟ್ಟುವ ಉತ್ತರಗಳನ್ನು ನೀಡುತ್ತಿದ್ದಂತೆ ಸಭಾಂಗಣದಲ್ಲಿ ಚಪ್ಪಾಳೆ ಸದ್ದು ಮಾಡಿತು.
ಸಂಸದೆ, ಬಾಪೂಜಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಬೆಂಗಳೂರಿನ ಉದ್ಯಮಿ ಹಾಗೂ ಮಿಸ್ಸೆಸ್ ಪರ್ಸೋನಾ ಯುನಿವರ್ಸ್ 2022ರ ಹೇಮಾ ನಿರಂಜನ್ ಹಾಗೂ ಚಿತ್ರದುರ್ಗದ ಭರತನಾಟ್ಯ ಗುರು ಡಾ. ನಂದಿನಿ ಶಿವಪ್ರಕಾಶ್ ನಿರ್ಣಾಯಕ ರಾಗಿ ಆಗಮಿಸಿದ್ದರು.
ವೈದ್ಯರಾದ ಡಾ. ಶಶಿಕಲಾ ಕೃಷ್ಣಮೂರ್ತಿ, ಡಾ. ರೂಪಶ್ರೀ, ಎವಿಕೆ ಕಾಲೇಜು ಪ್ರಾಚಾರ್ಯೆ ಕಮಲಾ ಸೊಪ್ಪಿನ್, ಡಾ. ವಿನುತಾ ವೇದಿಕೆಯಲ್ಲಿದ್ದರು.