ಮಧ್ಯಾಹ್ನದ ಬಿಸಿಯೂಟಕ್ಕೆ ಕ್ಷಣಗಣನೆ 1508 ಅಡುಗೆ ಕೇಂದ್ರಗಳಲ್ಲಿ ಸಿದ್ಧತೆ

1000907739.jpg
Published on

ಡಿ.ಎಂ.ಮಹೇಶ್, ದಾವಣಗೆರೆ :

ಜಿಲ್ಲೆಯ ಅಕ್ಷರಾಲಯಗಳಲ್ಲಿ 29 ರಿಂದ ಘಂಟೆ ಶಬ್ದ ಮೊಳಗಲಿದೆ. ಮಧ್ಯಾಹ್ನದ ಬಿಸಿಯೂಟದ ಪರಿಮಳ ಕೂಡ ಬೀರಲಿದೆ. ಇದಕ್ಕಾಗಿ ಅಡುಗೆ ಕೋಣೆ ಸೇರಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 1508 ಅಡುಗೆ ಕೇಂದ್ರಗಳಿವೆ. ಈ ಪೈಕಿ 1201 ಸರ್ಕಾರಿ, 307 ಅನುದಾನಿತ ಶಾಲೆಗಳಲ್ಲಿವೆ. ಕಳೆದ ವರ್ಷ, ಒಂದರಿಂದ ಎಸ್ಸೆಸ್ಸೆಲ್ಸಿವರೆಗಿನ ಸರ್ಕಾರಿ-ಅನುದಾನಿತ ಶಾಲೆಗಳಲ್ಲಿ ಒಟ್ಟು 1,37,808 ಮಕ್ಕಳು ಅನ್ನದಾಸೋಹದ ಸವಿ ಅನುಭವಿಸಿದ್ದರು.

ಬಿಸಿಯೂಟ ಸೇವಿಸಿದ ಮಕ್ಕಳ ಸರಾಸರಿ ಲೆಕ್ಕಾಚಾರದಡಿ ಸದ್ಯಕ್ಕೆ ಬಿಸಿಯೂಟಕ್ಕೆ ಪಿಎಂ ಪೋಷಣ್ ಶಕ್ತಿ ನಿರ್ಮಾಣ ಶಿಕ್ಷಣಾಧಿಕಾರಿಗಳ ಕಚೇರಿ ಹಂತದಲ್ಲಿ ತಯಾರಿ ನಡೆದಿದೆ. ಇಲಾಖೆ ಆದೇಶದಂತೆ ಗ್ಯಾಸ್ ಸ್ಟೌ, ಸಿಲಿಂಡರ್ ಸುವ್ಯವಸ್ಥೆ, ಆಹಾರಧಾನ್ಯಗಳ ಸ್ವಚ್ಛತೆ ಕಾರ್ಯ ಸೋಮವಾರದಿಂದ ಶುರುವಾಗಲಿದೆ. ಪಾತ್ರೆ ಸರಂಜಾಮು ಝಳಝಳ ಆಗಲಿವೆ.

ಮೊದಲ ಒಂದು ವಾರಕ್ಕೆ ಅಗತ್ಯ ಸಾರವರ್ಧಿತ ಅಕ್ಕಿ ದಾಸ್ತಾನಿದೆ. ರಾಜ್ಯ ಮಟ್ಟದ ಟೆಂಡರ್ ಪ್ರಕ್ರಿಯೆ ತರುವಾಯ ಇನ್ನೊಂದು ವಾರದೊಳಗಾಗಿ, ಜಿಲ್ಲೆಗೆ ಜುಲೈ ಅಂತ್ಯದವರೆಗೆ (54 ದಿನದ) ಬೇಡಿಕೆಯಿರುವ ತೊಗರಿಬೇಳೆ, ಸೂರ್ಯಕಾಂತಿ ಎಣ್ಣೆ ಕೆಎಫ್‌ಸಿಎಸ್‌ಸಿ ಗೋದಾಮುಗಳ ಮೂಲಕ ತಲುಪಲಿದೆ. ಆಯಾ ತರಗತಿ ಮಕ್ಕಳಿಗೆ ಇಲಾಖೆ ನಿಗದಿಪಡಿಸಿದ ಮಾಪನದಂತೆ ಆಹಾರ ವಿತರಣೆ ಆಗಲಿದೆ.

ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಉಳಿದ ಬೇಡಿಕೆಯ ಅಕ್ಕಿ- ಗೋಧಿ ಎತ್ತುವಳಿ ಆಗಬೇಕಿದೆ. ಹಾಲಿನ(ವಾರಕ್ಕೆ ಐದು ದಿನ)ಪುಡಿ, ಸಾಯಿ ಶ್ಯೂರ್ ರಾಗಿ ಮಾಲ್ಟ್ ಮಿಕ್ಸ್ ಬೇಡಿಕೆಯಿದೆ. ಎಸ್‌ಡಿಎಂಸಿ ವತಿಯಿಂದ ಕೋಳಿಮೊಟ್ಟೆ (ಒಂದಕ್ಕೆ 6 ರೂ.) / ಬಾಳೆಹಣ್ಣು, ತರಕಾರಿ ಕೂಡ ಖರೀದಿ ಆಗಬೇಕಿದೆ. ಕೋಳಿಮೊಟ್ಟೆ ವಿತರಣೆಗೆ ಅಜೀಂ ಪ್ರೇಮ್‌ಜಿ ಫೌಂಡೇಷನ್ ನೆರವು ಕಲ್ಪಿಸಿದೆ.

ಮುಖ್ಯ ಅಡುಗೆಯವರು, ಬಿಸಿಯೂಟ ತಯಾರಕರು ಸೇರಿ ಒಟ್ಟು 3228 ಸಿಬ್ಬಂದಿಗೆ ಈಗಾಗಲೆ ಅಡುಗೆ ಅನಿಲ ಸುರಕ್ಷತೆ, ಕುಕ್ಕರ್ ಬಳಕೆ, ಸ್ವಚ್ಛತೆ ನಿರ್ವಹಣೆ ಸಂಬಂಧ ತಾಲೂಕುವಾರು ತರಬೇತಿ ನೀಡಲಾಗಿದೆ. ಸಂಚಿತ ನಿಧಿಯಡಿ ಪಾತ್ರೆಗಳ ಖರೀದಿಗೆ ಅವಕಾಶವಿದೆ. ಶಾಲಾರಂಭದ ದಿನದಂದು ಮಕ್ಕಳು, ಅತಿಥಿಗಳಿಗೆ ಸಿಹಿಯೂಟ ವಿತರಿಸಲು ಸೂಚನೆ ನೀಡಲಾಗಿದೆ.

132 ಅಡುಗೆ ಕೇಂದ್ರಗಳು ಶಿಥಿಲ

ಒಟ್ಟು ಅಡುಗೆ ಕೇಂದ್ರಗಳ ಪೈಕಿ 327ರಲ್ಲಿ ಸಣ್ಣ ಪುಟ್ಟ ದುರಸ್ತಿ ಅಗತ್ಯವಿದೆ. 132 ಸಂಪೂರ್ಣ ಶಿಥಿಲಾವಸ್ಥೆಯಲ್ಲಿವೆ. 20 ಶಾಲೆಗಳಲ್ಲಿ ಪ್ರತ್ಯೇಕ ಅಡುಗೆ ಕೋಣೆಗಳಿಲ್ಲ. ಅಲ್ಲಿನ ತರಗತಿ ಕೊಠಡಿಗಳನ್ನೇ ಬಳಸಿಕೊಳ್ಳಲಾಗುತ್ತಿದೆ. ಜಿಪಂ ಮೂಲಕ ಅಗತ್ಯ ಅನುದಾನಕ್ಕಾಗಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

* ಪೌಷ್ಟಿಕ ಕೈತೋಟ ನಿರ್ಮಾಣಕ್ಕೆ ಒತ್ತು

ಜಿಲ್ಲೆಯ ಅಡುಗೆ ಕೇಂದ್ರಗಳ ಪೈಕಿ ಹಾಲಿ 665ರಲ್ಲಿ ಪೌಷ್ಟಿಕ ಕೈತೋಟಗಳನ್ನು ನಿರ್ಮಿಸಲಾಗಿದೆ. ಈ ಬಾರಿ ಎಲ್ಲ ಬಿಸಿಯೂಟ ತಯಾರಕರು ಶಾಲಾವರಣದ ಲಭ್ಯ ಜಾಗದಲ್ಲಿ ತಲಾ ಐದು ಗಿಡಗಳನ್ನು ನೆಡುವಂತೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ನುಗ್ಗೆ, ಕರಿಬೇವು, ನಿಂಬೆ, ಪಪ್ಪಾಯ, ತರಕಾರಿ-ಸೊಪ್ಪುಗಳ ಸಹಿತ ಪೌಷ್ಟಿಕ ಕೈತೋಟಗಳ ಸಂಖ್ಯೆ ಹೆಚ್ಚಿಸುವ ಇರಾದೆ ಇದೆ ಎನ್ನುತ್ತಾರೆ ಅಕ್ಷರದಾಸೋಹ ಅಧಿಕಾರಿ.

ಇಡಿಗಂಟು ನೀಡಲು ಕ್ರಮ

ಸರ್ಕಾರದ ಸುತ್ತೋಲೆಯಂತೆ ಮಧ್ಯಾಹ್ನದ ಉಪಹಾರ ಯೋಜನೆಯಡಿ 60 ವರ್ಷ ವಯೋಮಿತಿ ಪೂರೈಸಿ ಕೆಲಸದಿಂದ ಬಿಡುಗಡೆ ಹೊಂದಿದ ಅಡುಗೆ ಸಿಬ್ಬಂದಿಗೆ ಅಂತಿಮವಾಗಿ ಒಂದು ಬಾರಿಗೆ ಇಡಿಗಂಟು ಸೌಲಭ್ಯವಿದೆ. 5 ರಿಂದ 15 ವರ್ಷದೊಳಗಿನ ಸೇವೆಗಾಗಿ 30 ಸಾವಿರ ರೂ., 15 ಮತ್ತು ಅದಕ್ಕೂ ಹೆಚ್ಚು ವರ್ಷ ಸೇವೆ ಸಲ್ಲಿಸಿದ್ದಲ್ಲಿ 40 ಸಾವಿರ ಮೊತ್ತ ನೀಡಲು ಅವಕಾಶವಿದೆ. ಈಗಾಗಲೆ ಇಂಥವರ ಪಟ್ಟಿ ತಯಾರಾಗಿದೆ.

-----------

*54 ದಿನಕ್ಕೆ ತಾಲೂಕುವಾರು ಬೇಡಿಕೆ (ಕ್ವಿಂ.ನಲ್ಲಿ)

ತಾಲೂಕು ಅಕ್ಕಿ ಗೋಧಿ ತೊ.ಬೇಳೆ ಎಣ್ಣೆ (ಲೀ) ಹಾಲಿನಪುಡಿ ರಾಗಿಮಾಲ್ಟ್

-------------------------------------------------

ದಾವಣಗೆರೆ 2017.10 229.8 614 16862 29692 ಕೆಜಿ 10733 ಕೆಜಿ

ಹರಿಹರ 890 118.90 286 15572 12900 4722

ಹೊನ್ನಾಳಿ 944 112 288 6138 15319 4792

ಚನ್ನಗಿರಿ 1116 128 328 9754 14934 5134

ಜಗಳೂರು 825 100 266 7270 13001 4398

------------------------------------------------

ಒಟ್ಟು 5792.1 688.7 1782 55596 85846 29779

----------------------------------------------

ಶಾಲಾ ಆರಂಭೋತ್ಸವಕ್ಕೆ ಅಡುಗೆ ಕೇಂದ್ರಗಳಲ್ಲಿ ಸಿದ್ಧತೆ, ಆಹಾರ ಸಾಮಗ್ರಿ ದಾಸ್ತಾನಿಗೆ ಕ್ರಮ ವಹಿಸಲಾಗಿದೆ. ಸಂಪನ್ಮೂಲ ವ್ಯಕ್ತಿಗಳಿಂದ ಅಡುಗೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಬಿಸಿಯೂಟಕ್ಕೆ ಬೇಕಾದ ತರಕಾರಿ-ಸೊಪ್ಪು ಹಾಗೂ ಹಣ್ಣಿನ ಗಿಡಗಳ ಸಹಿತ ಪೌಷ್ಟಿಕ ಕೈ ತೋಟಗಳನ್ನು ಹೆಚ್ಚಿಸುವ ಗುರಿ ಇದೆ.

ಎನ್.ಮಂಜುನಾಥ ಸ್ವಾಮಿ

ಪಿಎಂ ಪೋಷಣ್ ಶಕ್ತಿ ನಿರ್ಮಾಣ ಕಾರ್ಯಕ್ರಮ ಶಿಕ್ಷಣಾಧಿಕಾರಿ.

-------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net