

ಡಿ.ಎಂ.ಮಹೇಶ್, ದಾವಣಗೆರೆ
ದಾವಣಗೆರೆ ಮತ್ತು ಸುತ್ತಮುತ್ತಲ ಜಿಲ್ಲೆಯ ಪಾಲಕರಿಗೆ ವರವಾಗಿದ್ದ, ಲಕ್ಷಾಂತರ ನವಜಾತ ಶಿಶುಗಳಿಗೆ ಜನ್ಮವಿತ್ತ ಚಿಗಟೇರಿ ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗ ಸ್ಥಳಾಂತರದ ಕಾತರದಲ್ಲಿದೆ.
ಸಿಬ್ಬಂದಿ ವಸತಿಗೃಹದ ಸ್ಥಳದಲ್ಲೀಗ ತಲೆ ಎತ್ತಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎರಡಂತಸ್ತಿನ ಸುಸಜ್ಜಿತ ಕಟ್ಟಡಕ್ಕೆ ಈ ವಿಭಾಗ ತಿಂಗಳಲ್ಲಿ ಶಿಫ್ಟಾಗುತ್ತಿದೆ. ಇಲ್ಲಿನ ವೈದ್ಯ-ಶುಶ್ರೂಷಾ ಸಿಬ್ಬಂದಿಗೂ ಹೊಸ ಹುರುಪು ತಂದಿದೆ.
ದಾನಿ ಧರ್ಮಪ್ರಕಾಶ ಚಿಗಟೇರಿ ಮುರಿಗೆಪ್ಪ ಅವರ ದೇಣಿಗೆ ಹಾಗೂ ಮೈಸೂರು ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರಿಂದ 1956ರಲ್ಲಿ ಶಂಕುಸ್ಥಾಪನೆಗೊಂಡು, 1961ರಲ್ಲಿ ಅಂದಿನ ಸಿಎಂ ಬಿ.ಡಿ.ಜತ್ತಿ ಅವರಿಂದ ಉದ್ಘಾಟನೆಗೊಂಡಿದ್ದ ಚಿಗಟೇರಿ ಜಿಲ್ಲಾಸ್ಪತ್ರೆ ಕಟ್ಟಡದ ಹೆರಿಗೆ ವಿಭಾಗವಿದು.
ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಒಟ್ಟು 200 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ಹಳೆಯ ಆಸ್ಪತ್ರೆಯಲ್ಲಿನ 8 ವೆಂಟಿಲೇಟರ್ ಜತೆಗೆ 30 ಬೇಬಿ ವಾರ್ಮರ್ಸ್, ಎರಡು ಮಾಡ್ಯುಲರ್ ಶಸ್ತ್ರಚಿಕಿತ್ಸಾ ಕೊಠಡಿಗಳು ಇಲ್ಲಿವೆ.
ನೆಲ ಅಂತಸ್ತು ಹಾಗೂ ಮೊದಲ ಮಹಡಿಯಲ್ಲಿ ಮಹಿಳೆಯರ ವಿಭಾಗ, ಎರಡನೇ ಮಹಡಿಯಲ್ಲಿ ಮಕ್ಕಳ ವಿಭಾಗಗಳಿವೆ. ತೀವ್ರ ನಿಗಾ ಘಟಕ, ನವಜಾತ ಶಿಶು ವಿಭಾಗ, ಮಕ್ಕಳ ತುರ್ತು ಚಿಕಿತ್ಸಾ ಘಟಕ, ಮಕ್ಕಳ ಸಲಹಾ ಕೊಠಡಿ, ಅಪೌಷ್ಟಿಕ ಮಕ್ಕಳ ಆರೈಕೆ ಕೇಂದ್ರ, ಎನ್‌ಆರ್‌ಸಿ, ಹಾಗೂ ಮಕ್ಕಳ ಒಪಿಡಿ ವಿಭಾಗಗಳಿವೆ. ಅಲ್ಟ್ರಾಸೌಂಡ್, ಕ್ಷಕಿರಣ, ಪ್ರಯೋಗಶಾಲೆ, ರಕ್ತನಿಧಿ ಭಂಡಾರ ಸೇರಿ ಖಾಸಗಿ ಆಸ್ಪತ್ರೆ ಮೀರಿಸುವಷ್ಟು ಸೌಲಭ್ಯಗಳು ಇಲ್ಲಿ ಸಿಗಲಿವೆ.
ತಾಯಂದಿರು ಮತ್ತು ಮಕ್ಕಳಿಗೆ ಆಮ್ಲಜನಕ ಪೂರೈಸಲು 13 ಸಾವಿರ ಲೀ. ಸಾಮರ್ಥ್ಯದ ಆಕ್ಸಿಜನ್ ಘಟಕ ಆಸ್ಪತ್ರೆ ಹೊರಾವರಣದಲ್ಲಿ ನಿರ್ಮಾಣಗೊಂಡಿದ್ದು ವಾರ್ಡ್‌ಗಳಿಗೆ ಇದರ ಸಂಪರ್ಕ ಕಲ್ಪಿಸಲಾಗಿದೆ. ಅಗ್ನಿ ಅವಘಡ ತಡೆಯುವ ದೃಷ್ಟಿಯಿಂದ ಎಲ್ಲ ಸುರಕ್ಷತಾ ಕ್ರಮ ವಹಿಸಲಾಗಿದೆ. ಇರುವ ಒಂದು ಕೊಳವೆಬಾವಿ, ಸಂಪಿನ ಮೂಲಕ ಅಗತ್ಯ ನೀರನ್ನು ಪಡೆಯುವ ವ್ಯವಸ್ಥೆ ಇದೆ.
ವಿದ್ಯುದೀಕರಣ ಕಾರ್ಯವಷ್ಟೇ ಬಾಕಿ ಇದ್ದು, ಇದಾದ ನಂತರ ಕಟ್ಟಡ ಉದ್ಘಾಟನೆಗೆ ಸಿದ್ಧವಾಗುವ ಅಂದಾಜಿದೆ. ಚಾವಣಿಯಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಿದಲ್ಲಿ ವಿದ್ಯುತ್ ಬಿಲ್ ವೆಚ್ಚ ಹಾಗೂ ಅದರ ಅವಲಂಬನೆ ತಪ್ಪಲಿದೆ. ಸಂಪರ್ಕ ರಸ್ತೆ ಆಗಬೇಕಿದೆ. ಶುಶ್ರೂಷಾ ಸಿಬ್ಬಂದಿಗೆ ವಿಶ್ರಾಂತಿಗೃಹ, ರೋಗಿಗಳ ಸಂಬಂಧಿಕರು ಊಟ ಮಾಡಲು ಕೊಠಡಿ ವ್ಯವಸ್ಥೆ ಆಗಬೇಕೆಂಬುದು ಕೆಲವರ ಸಲಹೆ.
ಈಗಿರುವ ಹೆರಿಗೆ ಆಸ್ಪತ್ರೆಯಲ್ಲಿ 10 ಮಂದಿ ವೈದ್ಯರು, 60 ಮಂದಿ ಶುಶ್ರೂಷಕರು, 30 ಡಿ ದರ್ಜೆ ನೌಕರರಿದ್ದಾರೆ. ಇತರೆ 28 ಸಿಬ್ಬಂದಿಯನ್ನು ಹೊರಗುತ್ತಿಗೆಯಡಿ ನೇಮಕ ಮಾಡಿಕೊಳ್ಳಲು ಪರವಾನಿಗೆ ದೊರೆತಿದೆ ಎನ್ನಲಾಗಿದೆ. ಒಟ್ಟಾರೆ ಸುಸಜ್ಜಿತ ಕಟ್ಟಡದ ಜತೆಯಲ್ಲೇ ಹೆಚ್ಚು ಉದ್ಯೋಗದ ಅವಕಾಶವಾಗಲಿದೆ. ಹೊಸ ಕಟ್ಟಡಕ್ಕೆ ಶಿಫ್ಟ್ ಆದ ಕೆಲವೇ ವರ್ಷಗಳಲ್ಲಿ ಹಳೆಯ ಕಟ್ಟಡ ಯಾವ ರೀತಿ ಬಳಕೆ ಆಗಲಿದೆ ಎಂಬುದನ್ನು ಸರ್ಕಾರ ನಿರ್ಧರಿಸಲಿದೆ.
ಟ್ರಾಮಾ ಕೇರ್ ಸೆಂಟರ್ ಸಜ್ಜು
ರಸ್ತೆ ಅಪಘಾತ, ಹಾವು-ನಾಯಿ ಹಾಗೂ ವಿಷಜನ್ಯ ಪ್ರಾಣಿ ಕಡಿತಕ್ಕೆ ಒಳಗಾದ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಹಾಗೂ ವಾರ್ಡ್‌ಗಳಲ್ಲಿ ಉಪಚರಿಸಲು ಮಹಿಳಾ ಮಕ್ಕಳ ಆಸ್ಪತ್ರೆ ಅಭಿಮುಖವಾಗಿ ಟ್ರಾಮಾ ಕೇರ್ ಸೆಂಟರ್ ಕಟ್ಟಡ ಕೂಡ ಕಾರ್ಯಾರಂಭಕ್ಕೆ ಸಜ್ಜಾಗಿದೆ.
ಗುತ್ತಿಗೆ ವಹಿಸಿದ್ದ ಗಾದಿರಾಜು ಕನ್ಸ್‌ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಕಟ್ಟಡ ನಿರ್ಮಾಣ ಅಂತಿಮಗೊಳಿಸಿದೆ. ದಾವಣಗೆರೆ ಸ್ಮಾರ್ಟ್‌ಸಿಟಿ ಯೋಜನೆಯಡಿ ಒಟ್ಟು 15.50 ಕೋಟಿ ರೂ. ಮೊತ್ತದಲ್ಲಿ ಎರಡಂತಸ್ತಿನ ಈ ಕಟ್ಟಡ ತಲೆ ಎತ್ತಿದೆ.
50 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಇಲ್ಲಿ ಕ್ಷಕಿರಣ, ಅಲ್ಟ್ರಾಸೌಂಡ್, ಐಸಿಯು ಇತರೆ ಸುಸಜ್ಜಿತ ವೈದ್ಯಕೀಯ ವ್ಯವಸ್ಥೆ ಮಾಡಲಾಗಿದೆ. ಇದು ಆರಂಭವಾದಲ್ಲಿ ಹಾಲಿ ಕಾರ್ಯನಿರತ ಕ್ಯಾಸಲ್ಟಿ ಕೇಂದ್ರದ ಕಟ್ಟಡ ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ.
----
ಹೆರಿಗೆ ಆಸ್ಪತ್ರೆಯು ಪಕ್ಕದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ನೂತನ ಕಟ್ಟಡಕ್ಕೆ ಆಗಸ್ಟ್‌ನಲ್ಲಿ ಸ್ಥಳಾಂತರವಾಗಲಿದೆ. ಹೆರಿಗೆ ಆಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು, ಚಿಗಟೇರಿ ಆಸ್ಪತ್ರೆಯ ದುರಸ್ತಿ ಕಾರ್ಯ ನಡೆದಲ್ಲಿ ತಾತ್ಕಾಲಿಕ ಕಾರ್ಯಾಚರಣೆಗೆ ಬಳಸುವ ಇರಾದೆ ಇದೆ. ಟ್ರಾಮಾ ಕೇರ್ ಸೆಂಟರ್ ಕೂಡ ಉದ್ಘಾಟನೆಗೆ ಸಿದ್ಧವಾಗಿದೆ.
ಡಾ. ಎಂ.ಬಿ.ನಾಗೇಂದ್ರಪ್ಪ
ಚಿಗಟೇರಿ ಆಸ್ಪತ್ರೆ ಅಧೀಕ್ಷಕ.
---