

ದಾವಣಗೆರೆ: ಮಾನಸಿಕ ಕಾಯಿಲೆ ಹೋಗಲಾಡಿಸಲು ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು. ಅದರ ಬದಲಾಗಿ ಮೌಢ್ಯಕ್ಕೆ ಮರುಳಾಗಿ ಅನಾಹುತಕ್ಕೆ ಅವಕಾಶ ಕಲ್ಪಿಸಬಾರದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್ ಪಟಗೆ ಹೇಳಿದರು.
ನಗರದ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನಸಿಕ ಕಾಯಿಲೆ, ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆ. ಇದು ಅನುವಂಶೀಯತೆ, ಒತ್ತಡದಿಂದ ಬರಲಿದೆ. ಯಾವುದೇ ದೆವ್ವ, ಭೂತ, ಮಾಟ ಮಂತ್ರ ಪೂರ್ವ ಜನ್ಮದ ಪಾಪದಿಂದ ಬರುವುದಲ್ಲ. ಹೀಗಾಗಿ ಮೂಢನಂಬಿಕೆ ಆಚರಣೆ ಬೇಡ ಎಂದರು.
ಮಾನಸಿಕ ಕಿರಿಕಿರಿ, ನಿವೇದನೆ, ಚಿಂತೆ, ವ್ಯಥೆ, ನಕಾರಾತ್ಮಕ ಆಲೋಚನೆ ಇದ್ದವರು ಮಾನಸಿಕ ಆರೋಗ್ಯ ಸಹಾಯವಾಣಿ ಸಂಖ್ಯೆ 14416 ಗೆ ಕರೆ ಮಾಡಿ ಆಪ್ತ ಸಮಾಲೋಚನೆ ಪಡೆಯಬಹುದು. ಪ್ರತಿ ಸರ್ವೇಯಲ್ಲಿ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಮುಖ್ಯವಾಹಿನಿಗೆ ತರುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದೆ ಎಂದರು.
ಒತ್ತಡದ ಜೀವನದಿಂದ ಮಾನಸಿಕ ಅನಾರೋಗ್ಯ ಹೆಚ್ಚಿವೆ. ಒತ್ತಡಮುಕ್ತ ಜೀವನ ನಡೆಸುವ ಮಾರ್ಗೋಪಾಯಗಳನ್ನು ತಿಳಿದು ನಡೆದರೆ ಮಾತ್ರ ಪ್ರತಿಯೊಬ್ಬರೂ ಮಾನಸಿಕ ಆರೋಗ್ಯ ಪಡೆಯಬಹುದು ಎಂದರು.
ಹಿರಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಉಮಾಪತಿ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ರವಿಕುಮಾರ್, ಆಶಾ ಮೇಲ್ವಿಚಾರಕಿ ಸುರೇಖಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಷಿಯಲ್ ವರ್ಕರ್ ಎಂ.ಸಂತೋಷ್‌ಕುಮಾರ್ ಇದ್ದರು.