

ದಾವಣಗೆರೆ: ನಮ್ಮ ಮಾತು ಮತ್ತು ನೋಟದ ದೃಷ್ಟಿ ಸರಿಯಾಗಿದ್ದಲ್ಲಿ ನಮಗೆ ಯಾವುದೇ ಮಾನಸಿಕ ಆರೋಗ್ಯಕ್ಕೆ ತೊಂದರೆಯಿಲ್ಲ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಮರುವಿಮರ್ಶಾ ಮಂಡಳಿಯ ಅಧ್ಯಕ್ಷರೂ ಆದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಸ ಸಹಯೋಗದಲ್ಲಿ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ, ಜಿಲ್ಲಾ ಮಾನಸಿಕ ಆರೋಗ್ಯ ಮರುವಿಮರ್ಶಾ ಮಂಡಳಿಯ ಕಚೇರಿ ಉದ್ಘಾಟಿಸಿ ಮಾತನಾಡಿದರು.
ಮನೆಯಲ್ಲಿ ಒಬ್ಬ ಮಾನಸಿಕ ರೋಗಿ ಆಗಿದ್ದರೆ ಆತನ ನಿರ್ವಹಣೆ ಕೆಲಸ ಕುಟುಂಬ ಸದಸ್ಯರದ್ದಾಗಿದೆ. ಇದರಿಂದ ಕುಟುಂಬದ ಮಾನಸಿಕ, ಆರ್ಥಿಕ ನೆಮ್ಮದಿ ಹಾಳಾಗುತ್ತದೆ. ಮನೆಯವರು ಮೌನವಾಗಿ ಅನೇಕ ಸಂಕಟಗಳಿಗೆ ತುತ್ತಾಗುತ್ತಾರೆ. ಇದರಿಂದ ಇಡೀ ಸಮುದಾಯ ನೋವಿಗೆ ಒಳಗಾಗಲಿದೆ ಎಂದರು.
ಮನಸ್ಸು ಸ್ವಚ್ಛವಾಗಿರುವ ವ್ಯಕ್ತಿ ಎಲ್ಲದರಲ್ಲೂ ಆರೋಗ್ಯವಂತನಾಗಿ ಶ್ರೀಮಂತನಾಗಿರಬಲ್ಲ. ಯಾವುದೇ ಕಾಯಿಲೆ ಇಲ್ಲದೆ ದೈಹಿಕ, ಮಾನಸಿಕ, ಸಾಮಾಜಿಕವಾಗಿ ಚೆನ್ನಾಗಿರುವುದೇ ಆರೋಗ್ಯವಂತಿಕೆಯ ಲಕ್ಷಣವಾಗಿದೆ. ಎಲ್ಲ ಸಮಯ, ಸಂದರ್ಭದಲ್ಲೂ ಎಲ್ಲರೊಂದಿಗೆ ಹೊಂದಾಣಿಕೆಯಿಂದ ಬದುಕುತ್ತ, ಸ್ವಾವಲಂಬಿಯಾಗಿ. ಸಂತೋಷ ಹಾಗೂ ತೃಪ್ತಿಯಾಗಿರುವುದೇ ಮಾನಸಿಕ ಆರೋಗ್ಯವಾಗಿದೆ ಎಂದರು.
ದೇಹ ಮತ್ತು ಮನಸ್ಸು ಎರಡೂ ಕೂಡ ನಾಣ್ಯದ ಮುಖಗಳು. ಒಂದರ ತೊಂದರೆ ಮತ್ತೊಂದಕ್ಕೆ ಕಾಡಲಿದೆ. ಕಣ್ಣು ಆಸ್ವಾದಿಸಿದ ಸೌಂದರ್ಯವನ್ನು ಕಂಡು ಮನಸ್ಸು ಸಂತೋಷವಾಗಿಸಬೇಕು. ಅದರಿಂದ ಮತ್ತೊಬ್ಬರಿಗೆ ತೊಂದರೆಯಾಗಬಾರದು. ಕಿವಿಯಿಂದ ಇಂಪಾದ ಸಂಗೀತ ಕೇಳಬೇಕು. ಕೆಟ್ಟಮಾತುಗಳನ್ನು ಆಡಬಾರದು. ಆಗ ಅವನ ಮಾನಸಿಕ ಸ್ಥಿತಿ ಕೆಡುವುದಿಲ್ಲ ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣನವರ ಮಾತನಾಡಿ ಮಾನಸಿಕ ಅಸ್ವಸ್ಥತೆವುಳ್ಳ ವ್ಯಕ್ತಿ ತಿರುಗಾಡುತ್ತಿದ್ದರೆ ಮತ್ತು ತನ್ನನ್ನು ತಾನೇ ನೋಡಿಕೊಳ್ಳಲು ಅಸಮರ್ಥನಾದರೆ ಅವರನ್ನು ರಕ್ಷಣೆಗಾಗಿ ಪೊಲೀಸರು ವಶಕ್ಕೆ ತೆಗೆದುಕೊಳ್ಳಬೇಕು. ಮತ್ತು ಅದಕ್ಕೆ ಕಾರಣವನ್ನು ನಾಮನಿರ್ದೇರ್ಶಿತ ಪ್ರತಿನಿಧಿಗೆ ತಿಳಿಸಬೇಕು ಎಂದು ಹೇಳಿದರು.
ರಕ್ಷಣೆಗೆಂದು ಪಡೆದ ವ್ಯಕ್ತಿಯನ್ನು ಪೊಲೀಸ್ ಲಾಕಪ್ ಅಥವಾ ಜೈಲಿನಲ್ಲಾಗಲೀ ಇರಿಸಬಾರದು. ಆ ವ್ಯಕ್ತಿಯ ಮಾನಸಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ವ್ಯವಸ್ಥೆ ಮಾಡುವ ಜವಾಬ್ದಾರಿ ಸಂಪೂರ್ಣವಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಯವರದ್ದು ಆಗಿರುತ್ತದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ.ನಾಗೇಂದ್ರಪ್ಪ, ಡಿಎಚ್‌ಒ ಡಾ.ಷಣ್ಮುಖಪ್ಪ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಮಂಜುನಾಥ ಎಲ್. ಪಾಟೀಲ್, ಜಿಲ್ಲಾ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ನಾಗವೇಣಿ, ಜಿಲ್ಲಾ ಆಸ್ಪತ್ರೆಯ ಮನೋರೋಗ ತಜ್ಞ ಡಾ.ಪಿ.ಎಂ.ಮರುಳಸಿದ್ದಪ್ಪ, ಮನೋರೋಗ ವಿಭಾಗದ ಮುಖ್ಯಸ್ಥೆ ಡಾ.ಅನುಪಮಾ, ಡಾ.ಮೃತ್ಯುಂಜಯ, ವೈದ್ಯಾಧಿಕಾರಿ ಡಾ.ಸುಧೀಂದ್ರ, ಜಿಲ್ಲಾ ಮಾನಸಿಕ ಆರೋಗ್ಯ ಮರುವಿಮರ್ಶಾ ಮಂಡಳಿಯ ಸದಸ್ಯರಾದ ಬಿ.ನಾಗಮ್ಮ, ಶಂಕರಮ್ಮ ಇದ್ದರು.