

ದಾವಣಗೆರೆ: ರಾಜ್ಯದ 60 ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಲ್ಯಾಬ್ ಸ್ಥಾಪಿಸಲು ಸರ್ಕಾರ ಆದೇಶಿಸಿದೆ. ಮಾಸಾಂತ್ಯಕ್ಕೆ ಪ್ರತಿ ಜಿಲ್ಲೆಯಲ್ಲಿ 2 ಪರೀಕ್ಷಾ ಲ್ಯಾಬ್ ಸಿದ್ಧಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶನಿವಾರ ಕೋವಿಡ್-19 ನಿಯಂತ್ರಣ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಎರಡು ಲ್ಯಾಬ್‌ಗಳಲ್ಲಿ ಸದ್ಯ ದಿನಕ್ಕೆ ಗರಿಷ್ಠ 300 ಮಾದರಿ ಟೆಸ್ಟ್ ಮಾಡಲಾಗುತ್ತಿದೆ. ಲ್ಯಾಬ್‌ಗಳು ಹೆಚ್ಚಾದಲ್ಲಿ ದಿನಕ್ಕೆ ಸುಮಾರು 5,500 ಮಾದರಿ ಪರೀಕ್ಷಿಸಬಹುದು. ದಾವಣಗೆರೆಯ ಎಸ್‌ಎಸ್ ಆಸ್ಪತ್ರೆಯ ಪಿಸಿಆರ್ ಲ್ಯಾಬ್‌ನಲ್ಲಿ ಇಂದಿನಿಂದ ಕೋವಿಡ್ ಪರೀಕ್ಷೆ ಆರಂಭವಾಗಲಿದೆ. ಆರ್‌ಟಿಪಿಸಿಆರ್ ಯಂತ್ರಗಳ ಅಳವಡಿಕೆಗೆ ಸೂಚಿಸಲಾಗಿದೆ.
ಎರಡು ದಿನದಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲೂ ಲ್ಯಾಬ್ ಕಾರ್ಯಾರಂಭವಾಗಲಿದೆ. ಇದರಿಂದ ವರದಿಗಾಗಿ ದಿನಗಟ್ಟಲೆ ಕಾಯುವುದು ತಪ್ಪುತ್ತದೆ. ಖಾಸಗಿ ಲ್ಯಾಬ್‌ಗಳಿಗೆ ದರ ನಿಗದಿಗೊಳಿಸಲಾಗಿದೆ. ಸರ್ಕಾರದಿಂದಲೇ ಕಿಟ್ ಒದಗಿಸಲಾಗುವುದು.
ಮುಖ್ಯಮಂತ್ರಿಗಳು ಆರಂಭದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳಿಂದ ರಾಜ್ಯದಲ್ಲಿ ಕರೊನಾ ನಿಯಂತ್ರಣ ಸಾಧ್ಯವಾಗುತ್ತಿದೆ. ಜೀವ ಉಳಿಸುವ ಜತೆಗೆ ಜನಜೀವನ ಸುಧಾರಣೆ ಎರಡನ್ನೂ ಸಮತೋಲನದಿಂದ ಸರಿದೂಗಿಸಬೇಕಿದೆ. ಕರೊನಾ ಸಾಮಾಜಿಕ ಕಳಂಕ ಅಲ್ಲ. ಸೋಂಕಿನ ಬಗ್ಗೆ ಭಯ ಬೇಡ ಎಂದರು.
ರಾಜ್ಯದಲ್ಲಿ ಶೇ.50 ಕರೊನಾ ಸೋಂಕಿತರು ಗುಣಮುಖರಾಗಿದ್ದಾರೆೆ. ಚಿಕಿತ್ಸೆ ಇಲ್ಲದೆಯೂ ಶೇ. 80 ರಷ್ಟು ಜನರು ಇದರಿಂದ ಮುಕ್ತರಾಗಿದ್ದಾರೆ. ಶೇ.3.1 ರಷ್ಟು ಮರಣ ಪ್ರಮಾಣವಿದೆ. ಹೃದಯ, ಕ್ಯಾನ್ಸರ್, ಡಯಾಬಿಟಿಕ್ ಇತರೆ ತೊಂದರೆಯಲ್ಲಿದ್ದವರು ಸಾವಿಗೀಡಾಗುವ ಸಂಭವವಿದೆ. ಜನರಲ್ಲಿ ಭಯ ಬೇಡ. ಆರೋಗ್ಯಸೇತು ಆ್ಯಪ್‌ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದರು.
ಚಿಗಟೇರಿ ಆಸ್ಪತ್ರೆ ಕೋವಿಡ್ ಆಸ್ಪತ್ರೆಯಾಗಿದ್ದು 300 ಹಾಸಿಗೆಗಳ ವ್ಯವಸ್ಥೆ ಇದೆ. ಇತರೆ ಆರೋಗ್ಯದ ಸಮಸ್ಯೆಗಳಿಗೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡದಿದ್ದಲ್ಲಿ ಪರವಾನಗಿ ರದ್ದುಪಡಿಸಲಾಗುವುದು. ದಾವಣಗೆರೆಯ ಖಾಸಗಿ ಮೆಡಿಕಲ್ ಕಾಲೇಜುಗಳ ಹೌಸ್‌ಸರ್ಜನ್ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಬರಬೇಕಿರುವ ಶಿಷ್ಯವೇತನ ಕೊಡಿಸಲಾಗುವುದು ಎಂದರು.