ಪಿಎಫ್‌ಐ ಸಂಘಟನೆಯ ಒಬ್ಬನ ವಶ, ಇನ್ನೊಬ್ಬನಿಗೆ ಶೋಧ; ದಾವಣಗೆರೆ-ಹರಿಹರದಲ್ಲಿ ರಾಷ್ಟ್ರೀಯ ತನಿಖಾದಳ ದಾಳಿ, ಸಂಘಟನೆ ಸದಸ್ಯರಿಂದ ಪ್ರತಿಭಟನೆ

Davangere, MCC B Block, PFI organization, protest,
Published on

ದಾವಣಗೆರೆ: ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳ ತಂಡ ದಾವಣಗೆರೆ ಜಿಲ್ಲೆಯ ಎರಡು ಕಡೆ ಗುರುವಾರ ಬೆಳಗಿನಜಾವ ದಾಳಿ ನಡೆಸಿ ಪಿಎಫ್‌ಐ ಸಂಘಟನೆಯ ಪ್ರಮುಖ ಸದಸ್ಯನೊಬ್ಬನನ್ನು ವಶಕ್ಕೆ ಪಡೆದಿದ್ದು ತಲೆಮರೆಸಿಕೊಂಡಿರುವ ಇನ್ನೊಬ್ಬನಿಗೆ ಬಲೆ ಬೀಸಿದೆ.

4 ಗಂಟೆಯ ನಸುಕಿನಲ್ಲಿ ನಗರದ ಎಂಸಿಸಿ ‘ಎ’ ಬ್ಲಾಕ್‌ನಲ್ಲಿರುವ ಪಿಎಫ್‌ಐ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಇಮಾದುದ್ದೀನ್ ಮನೆ ಬಾಗಿಲು ತಟ್ಟಿದ ಎನ್‌ಐಎ ಅಧಿಕಾರಿಗಳು ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಅಂದರೆ ಬೆಳಗ್ಗೆ 8.30ರವರೆಗೆ ಇಡೀ ಮನೆಯನ್ನೇ ಜಾಲಾಡಿದರು.

ಮಹತ್ವದ ದಾಖಲೆಗಳಿಗೆ ಹುಡುಕಾಟ ನಡೆಸಿದ ಅಧಿಕಾರಿಗಳು ಲ್ಯಾಪ್‌ಟಾಪ್, ಪೆನ್‌ಡ್ರೈವ್, ಮೊಬೈಲ್ ಫೋನ್ ಮತ್ತಿತರ ವಸ್ತುಗಳ ಜತೆಗೆ ಇಮಾದುದ್ದೀನ್ ಅವರನ್ನೂ ವಶಕ್ಕೆ ಪಡೆದರು.

ಇಮಾದುದ್ದೀನ್ ಮೂಲತಃ ಇಂಜನಿಯರ್. ಈ ಮೊದಲು ಬೆಂಗಳೂರಿನ ಯಲಹಂಕದಲ್ಲಿ ಟ್ರಾೃಕ್ಟರ್ ಬಿಡಿ ಭಾಗಗಳ ಉಪ ಗುತ್ತಿಗೆದಾರರಾಗಿ ವ್ಯವಹಾರ ನಡೆಸುತ್ತಿದ್ದರು. ಕರೊನಾ ವೇಳೆ ನಷ್ಟವಾದ ಬಳಿಕ ದಾವಣಗೆರೆಗೆ ಬಂದು ಹಣ್ಣು ಮತ್ತಿತರ ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿದ್ದರು.

ಅಸಾಂವಿಧಾನಿಕ ಕ್ರಮ: ಮನೆ ಮೇಲೆ ದಾಳಿ ಮಾಡುವ ಸಂದರ್ಭದಲ್ಲಿ ಯಾವುದೇ ಕಾನೂನುಬದ್ಧ ದಾಖಲೆಗಳನ್ನು ತೋರಿಸದ ಅಧಿಕಾರಿಗಳು ಸಹೋದರನನ್ನು ಹಾಗೂ ಮನೆಯ ಸದಸ್ಯರ ಲ್ಯಾಪ್‌ಟಾಪ್, ಪೆನ್‌ಡ್ರೈವ್, ಕಂಪ್ಯೂಟರ್ ಅನ್ನು ವಶಪಡಿಸಿಕೊಂಡಿದ್ದು ಅಸಾಂವಿಧಾನಿಕ ಕ್ರಮ ಎಂದು ಮಹಮದ್ ಸಾದ್ ದೂರಿದ್ದಾರೆ.

ಬೆಂಗಳೂರಿಗೆ ಕರೆದೊಯ್ದ ಪೊಲೀಸರು: ಇಮಾದುದ್ದೀನ್ ವಶಕ್ಕೆ ಪಡೆದ ಪೊಲೀಸರು ಮೊದಲು ದಾವಣಗೆರೆ ಬಡಾವಣೆ ಠಾಣೆ ಆ ನಂತರ ವಿದ್ಯಾನಗರ ಠಾಣೆಗೆ, ಸಂಜೆ ವೇಳೆ ಪೊಲೀಸ್ ಸುಪರ್ದಿಯಲ್ಲಿ ಬೆಂಗಳೂರಿಗೆ ಕರೆದೊಯ್ದರು. ಈ ವಿಷಯ ತಿಳಿದು ಪಿಎಫ್‌ಐ ಸಂಘಟನೆ ಸದಸ್ಯರನೇಕರು ಹೆಬ್ಬಾಳು ಟೋಲ್ ಗೇಟ್ ಸಮೀಪ ಕೆಲ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಬಾತ್‌ರೂಂ ಕೂಡ ಬಿಡಲಿಲ್ಲ ನಸುಕಿನಲ್ಲಿ ಬಂದು ಬಾಗಿಲು ಬಡಿದ ರಾಷ್ಟ್ರೀಯ ತನಿಖಾದಳದ ಅಧಿಕಾರಿಗಳು ದಾಖಲೆಗಳನ್ನು ಹುಡುಕಲು ಮನೆಯ ಸಾಮಾನುಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿದರು. ಸೂಟ್‌ಕೇಸ್‌ಗಳನ್ನು ಓಪನ್ ಮಾಡಿಸಿ ಪರಿಶೀಲಿಸಿದರು. ಬಾತ್‌ರೂಂ ಕೂಡ ಬಿಡದಂತೆ ತಡಕಾಡಿದರು ಎಂದು ಇಮಾದುದ್ದೀನ್ ಸಹೋದರ ಮಹಮದ್ ಸಾದ್ ತಿಳಿಸಿದರು. ಸಹೋದರ ಪಿಎಫ್‌ಐನಲ್ಲಿ ಸಕ್ರಿಯ ಸದಸ್ಯನಾದ ಹಿನ್ನೆಲೆಯಲ್ಲಿ ಈ ಹಿಂದೆಯೂ ಪೊಲಿಸರು ನಮ್ಮ ಮನೆಗೆ ಬಂದು ಇಮಾದುದ್ದೀನ್‌ನನ್ನು ವಿಚಾರಿಸಿದ್ದರು. ನಾವು ಈ ಬಾರಿಯೂ ಅದೇ ರೀತಿ ಇರಬಹುದು ಎಂದೇ ತಿಳಿದಿದ್ದೆವು. ಆದರೆ, ಬೆಳಗ್ಗೆ ನ್ಯೂಸ್ ನೋಡಿದಾಗ ಇಡೀ ದೇಶದಲ್ಲಿ ಪಿಎಫ್‌ಐ ಸದಸ್ಯರ ಮನೆ ಮೇಲೆ ದಾಳಿ ನಡೆದ ವಿಷಯ ಗೊತ್ತಾಯಿತು. ಇದೀಗ ವಕೀಲರನ್ನು ಸಂಪರ್ಕ ಮಾಡುತ್ತಿದ್ದೇವೆ ಎಂದು ಮಹಮದ್ ಸಾದ್ ವಿವರಿಸಿದರು.
ಸೇನೆಯಲ್ಲಿ ಸೇವೆ ಸಲ್ಲಿಸಿದ ಕುಟುಂಬ ನಮ್ಮದು ನಾವು ಭಾರತೀಯರು. ನಮ್ಮ ಕುಟಂಬದಲ್ಲಿ ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿದವರಿದ್ದಾರೆ. ನಮ್ಮ ಪೂರ್ವಜರು ದೇಶಕ್ಕಾಗಿ ಹೋರಾಡಿದ್ದಾರೆ. ಭಾರತದಲ್ಲಿ ಸಾಕಷ್ಟು ಕ್ರಿಮಿನಲ್ಸ್ ಇದ್ದಾರೆ. ರೇಪಿಸ್ಟ್ ಇದ್ದಾರೆ. ಶೇ.40ರಷ್ಟು ಕಮೀಷನ್ ಹಗರಣ ನಡೆದಿದೆ. ಅಂತಹವರ ಮೇಲೆ ದಾಳಿ ಮಾಡದ ಎನ್‌ಐಎ ನಮ್ಮ ಸದೋದರನನ್ನು ಏಕೆ ಟಾರ್ಗೆಟ್ ಮಾಡಿದೆ? ಎಂಬುದೇ ತಿಳಿದಿಲ್ಲ ಎಂದು ಮಹಮದ್ ಸಾದ್ ಆಕ್ಷೇಪಿಸಿದರು.

ತಲೆ ಮರೆಸಿಕೊಂಡಿರುವ ತಾಹೀರ್

ಹರಿಹರದ ಪ್ರಶಾಂತ ನಗರದ ನಿವಾಸಿ ತಾಲೂಕು ಪಿಎಫ್‌ಐ ಸಂಘಟನೆ ಕಾರ್ಯದರ್ಶಿ ತಾಹೀರ್ ಹುಸೇನ್ ತಲೆ ಮರೆಸಿಕೊಂಡಿದ್ದು ಪೊಲೀಸರು ಆತನಿಗಾಗಿ ಶೋಧ ನಡೆಸಿದ್ದಾರೆ. ರಾತ್ರಿ ಹರಿಹರದಲ್ಲಿ ತಾಹಿರ್ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡಿದ್ದ ತನಿಖಾ ದಳ ದಾವಣಗೆರೆಯ ವಿನೋಬ ನಗರದಲ್ಲಿರುವ ಆತನ ಸಂಬಂಧಿಕರ ಮನೆಯಲ್ಲಿ ಇರಬಹುದೆಂದು ಶಂಕಿಸಿ ಅಲ್ಲಿಗೆ ತೆರಳಿತ್ತಾದರೂ ಅಲ್ಲಿಯೂ ಆತನ ಸುಳಿವು ಸಿಕ್ಕಿಲ್ಲ. ಹರಿಹರದ ಜೆ.ಸಿ.ಬಡಾವಣೆಯಲ್ಲಿ ತಾಹೀರ್ ಔಷಧ ಅಂಗಡಿ ನಡೆಸುತ್ತಿದ್ದನು ಎಂದು ಪೊಲಿಸ್ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net