

ದಾವಣಗೆರೆ: ಇಂದಿನ 21ನೇ ಶತಮಾನದಲ್ಲಿ ಮೂಲ ವಿಜ್ಞಾನದಿಂದ ಹಿಡಿದು ಮಾಹಿತಿ ತಂತ್ರಜ್ಞಾನದವರೆಗೆ ಎಲ್ಲದಕ್ಕೂ ಗಣಿತಶಾಸ್ತ್ರದ ಅವಶ್ಯಕತೆ ಇದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಹೇಳಿದರು.
ಧರಾಮ ವಿಜ್ಞಾನ ಕಾಲೇಜಿನ ಗಣಿತಶಾಸ್ತ್ರ ವಿಭಾಗ ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನ ಅನಾಟಮಿ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಅಡ್ವಾನ್ಸಡ್ ಮ್ಯಾಥಮೆಟಿಕಲ್ ಅಪ್ಲಿಕೇಷನ್ಸ್ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಗಣಿತಶಾಸ್ತ್ರ ಎಂದರೆ ಅಂಕಗಣಿತ, ಬೀಜಗಣಿತ ಹಾಗೂ ರೇಖಾಗಣಿತ ಮಾತ್ರವಲ್ಲ. ಅದರ ಪ್ರಾಮುಖ್ಯತೆ ಈಗಿನ ಹೊಸ ವಿಷಯಗಳಿಗೂ ವಿಸ್ತರಿಸುತ್ತಿದೆ. ಮಾಹಿತಿ ತಂತ್ರಜ್ಞಾನಕ್ಕೆ ಇದು ಅನಿವಾರ್ಯ ಅಂಶವೆನಿಸಿದೆ ಎಂದು ತಿಳಿಸಿದರು.
ತೀವ್ರಗತಿಯ ಅಭಿವೃದ್ಧಿಯಲ್ಲಿರುವ ತಂತ್ರಜ್ಞಾನ ಕ್ಷೇತ್ರವು ಗಣಿತಶಾಸ್ತ್ರ ಅವಲಂಬಿಸಿಯೇ ಸಾಗುತ್ತಿದೆ. ಸಾಫ್ಟ್‌ವೇರ್ ತಂತ್ರಾಂಶ ಕ್ಷೇತ್ರದಲ್ಲಿರುವವರಿಗೂ ಗಣಿತಶಾಸ್ತ್ರ ಜ್ಞಾನವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎಂದರು.
ಗಣಿತಶಾಸ್ತ್ರವು ಎಲ್ಲ ವಿಷಯಗಳ ತಾಯಿ ಇದ್ದಂತೆ. ಪ್ರಾಚೀನ ಕಾಲದಲ್ಲೂ ಎಲ್ಲ ಜ್ಞಾನ ವಿಜ್ಞಾನದ ವಿಷಯಗಳಲ್ಲಿ ಗಣಿತಕ್ಕೆ ಹೆಚ್ಚಿನ ಸ್ಥಾನಮಾನಗಳಿದ್ದವು. ಇದೊಂದು ಆಕರ್ಷಕ ವಿಷಯವಾಗಿದ್ದು, ಆಸಕ್ತ ವಿದ್ಯಾರ್ಥಿಗಳನ್ನು ಇದು ಹೆಚ್ಚು ಸೆಳೆಯುತ್ತಿದೆ ಎಂದು ಹೇಳಿದರು.
ವಾಣಿಜ್ಯಶಾಸ್ತ್ರದಿಂದ ಕಂಪ್ಯೂಟರ್ ವಿಭಾಗದವರೆಗೆ ಎಲ್ಲ ವಿದ್ಯಾರ್ಥಿಗಳಿಗೆ ಗಣಿತ ಬೇಕು. ವಿಜ್ಞಾನ ಪದವೀಧರರು ಗಣಿತಶಾಸ್ತ್ರವನ್ನು ಅಲಕ್ಷಿಸುವಂತೆಯೇ ಇಲ್ಲ. ಬಹುಮುಖ್ಯವಾಗಿ ಇದರಲ್ಲಿರುವ ಹೊಸ ಹೊಸ ಚಿಂತನೆ, ಆವಿಷ್ಕಾರಗಳ ಅಧ್ಯಯನ ಅವರ ಭವಿಷ್ಯಕ್ಕೆ ಅತ್ಯಂತ ಅವಶ್ಯಕವಾಗಿರುತ್ತದೆ ಎಂದು ತಿಳಿಸಿದರು.
ಮದ್ರಾಸ್ ವಿವಿಯಲ್ಲಿ ಖ್ಯಾತ ಗಣಿತ ಪ್ರಾಧ್ಯಾಪಕರಾಗಿದ್ದ ಎಸ್.ಆರ್.ರಂಗನಾಥ್ ಅವರು ಗ್ರಂಥಾಲಯ ವಿಜ್ಞಾನ ಹಾಗೂ ಮಾಹಿತಿ ತಂತ್ರಾಜ್ಞಾನ ಕ್ಷೇತ್ರಗಳಲ್ಲಿ ಮಹತ್ತರ ಸಂಶೋಧನೆಗೆ ಗಣಿತಶಾಸ್ತ್ರದ ಪ್ರಾವೀಣ್ಯತೆಯೇ ಹೆಚ್ಚು ಸಹಕಾರಿಯಾಗಿತ್ತೆಂದು ಅಭಿಪ್ರಾಯಪಟ್ಟಿದ್ದರು ಎಂದು ಹೇಳಿದರು.
ಗಣಿತಶಾಸ್ತ್ರ ಕುರಿತಂತೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಯಾವುದೇ ಸಮಾವೇಶ ನಡೆದರೂ ಕನಿಷ್ಠ ಎರಡು ಮೂರು ದಿನಗಳ ಅವಧಿ ಹೊಂದಿರಬೇಕು. ಆಗ ಮಾತ್ರ ಗಣಿತಶಾಸ್ತ್ರದ ಉಗಮದಿಂದ ಹಿಡಿದು ಅತ್ಯಾಧುನಿಕ ಸಂಶೋಧನೆಗಳ ಬಗ್ಗೆ ವಿಚಾರ ವಿನಿಮಯ ಹಾಗೂ ಸಂವಾದ ನಡೆಸಿ ಜ್ಞಾನ ವೃದ್ಧಿ ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಕುವೆಂಪು ವಿವಿ ಅಧ್ಯಯನ ಮತ್ತು ಗಣಿತಶಾಸ್ತ್ರ ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಕೆ. ನರಸಿಂಹಮೂರ್ತಿ ವಿಷಯ ಕುರಿತು ಮಾತನಾಡಿದರು. ಬಾಪೂಜಿ ಶೈಕ್ಷಣಿಕ ಸಂಘದ ಖಜಾಂಚಿ ಎ.ಎಸ್. ನಿರಂಜನ್, ದಾವಣಗೆರೆ ವಿವಿ ಗಣಿತಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಸಿ. ಪ್ರಸನ್ನ, ಕಾಲೇಜಿನ ಪ್ರಾಚಾರ್ಯೆ ಪ್ರೊ.ಎಂ.ಪಿ. ರೂಪಶ್ರೀ ಇದ್ದರು.