ವಿಶ್ವಕರ್ಮ ಯುವಕರಿಗೆ ಬೇಕು ಧಾರ್ಮಿಕ ಸಂಸ್ಕಾರ  ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಆಶಯ  ಸಾಮೂಹಿಕ ಉಪನಯನ-ವಿವಾಹ ಮಹೋತ್ಸವ

dvg-vishwakarma-april-26.jpg
Published on

ದಾವಣಗೆರೆ: ವಿಶ್ವಕರ್ಮ ಸಮಾಜದ ಯುವಕರು ಸರಿದಾರಿಯಲ್ಲಿ ಸಾಗಲು ಧರ್ಮಾಚರಣೆ, ಧಾರ್ಮಿಕ ಸಂಸ್ಕಾರ ಕಲಿಸಬೇಕು ಎಂದು ಜವಳಿ ಉದ್ಯಮಿ ಬಿ.ಸಿ. ಉಮಾಪತಿ ಹೇಳಿದರು.
ವಿಶ್ವಕರ್ಮ ಸಮಾಜ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಕಾಳಿಕಾಂಬ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ 41ನೇ ವರ್ಷದ ಸಾಮೂಹಿಕ ಉಪನಯನ ಮತ್ತು ವಿವಾಹ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿಂದು ಧರ್ಮಾಚರಣೆ ಕೊರತೆ ಇದೆ. ಇದರಿಂದಾಗಿ ಯುವಕರು ವಿದೇಶದಲ್ಲಿದ್ದಾರೆ. ಪಾಲಕರು ಅನಾಥಾಶ್ರಮದಲ್ಲಿದ್ದಾರೆ. ಇದು ತಪ್ಪಬೇಕಾದರೆ ಮಕ್ಕಳನ್ನು ವಿದ್ಯಾವಂತರಾಗಿಸಿದರೆ ಸಾಲದು. ಸಂಸ್ಕಾರವಂತರಾಗಿಸಿ ಎಂದು ಹೇಳಿದರು.
41 ವರ್ಷಗಳಿಂದ ನಿರಂತರ ಸಾಮೂಹಿಕ ವಿವಾಹ, ಉಪನಯನ ಕಾರ್ಯಕ್ರಮ ನಡೆಯುತ್ತಿವೆ. ಇದರ ಮೂಲಕ ಸಮಾಜ ಸಂಘಟನೆಗೆ ದಾರಿಯಾಗಿದೆ. ಸಮಾಜದ ಯುವಕರು ಕೂಡ ಸಾಮಾಜಿಕ ಕಾರ್ಯಗಳನ್ನು ನೆರವಾಗಿ ಸಮಾಜ ಮತ್ತು ದೇಶದ ಋಣ ತೀರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾಳಿಕಾದೇವಿ ರಸ್ತೆಯನ್ನು ನೂರಾರು ವರ್ಷದ ಹಿಂದೆ ಹರಪನಹಳ್ಳಿ ರಸ್ತೆ ಎಂದು ಕರೆಯಲಾಗುತ್ತಿತ್ತು. ನಮ್ಮ ಹಿರಿಯರು ಬಿಎಸ್‌ಸಿ ಸಂಸ್ಥೆ ಕಟ್ಟಿದ ನಂತರ ಕಾಳಿಕಾದೇವಿ ರಸ್ತೆ ಎಂದು ಹೆಸರಿಸಿದರು. ನಮ್ಮ ಸಂಸ್ಥೆ ಜತೆಗೆ ಈ ರಸ್ತೆ ಕೂಡ ವಿಶ್ವ ಮಟ್ಟದಲ್ಲಿ ಹೆಸರಾಗಿದೆ ಎಂದು ತಿಳಿಸಿದರು.
ವಿಶ್ವಕರ್ಮ ಸಂಘ ಮತ್ತು ಸಮಾಜ ಕೊಡುಗೆಯಿಂದಾಗಿ ಕಾಳಿಕಾದೇವಿ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ. ಕಾಳಿಕಾದೇವಿಯ ಬಂಗಾರದ ಮುಖವಾಡ ನೀಡಲು ಬಿಎಸ್‌ಸಿ ಸಂಸ್ಥೆ ನಿರ್ಧರಿಸಿದ್ದು ಇದರ ತಯಾರಿ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು.
ಸಮಾಜದ ಹರಿಹರ ತಾಲೂಕು ಘಟಕದ ಅಧ್ಯಕ್ಷ ಎಸ್. ರುದ್ರಾಚಾರ್ ಮಾತನಾಡಿ, ವಿಶ್ವಕರ್ಮ ಸಮಾಜದ ಗುರುಪೀಠ ಸ್ಥಾಪಿಸಿ, ಅದಕ್ಕೆ ಒಬ್ಬ ಜಗದ್ಗುರು ನೇಮಿಸುವ ಸಂಬಂಧ ಮುಖಂಡರು ನಿರ್ಣಯಿಸಿದ್ದಾರೆ. ಈ ಸಂಬಂಧ ಈಗಾಗಲೆ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಉಪನಯನ ದೀಕ್ಷೆ ಪಡೆದವರು ನಿತ್ಯವೂ ಮೂರು ಅವಧಿಗೆ ಸಂಧ್ಯಾವಂದನೆ ಮಾಡಬೇಕು, ಗಾಯತ್ರಿ ಮಂತ್ರ ಪಠಿಸಬೇಕು. ಹಾಗಾದಲ್ಲಿ ಅಭಿವೃದ್ಧಿ ಕಾಣಬಹುದು. ಈ ವಟುಗಳಿಗೆ ರಜಾವಧಿಯಲ್ಲಿ ಶಿಬಿರ ನಡೆಸಿ ಗುರುಗಳ ಮೂಲಕ ಆಚರಣೆಗಳ ಮಾಹಿತಿ ನೀಡಬೇಕು ಎಂದು ದೇವಸ್ಥಾನ ಸಮಿತಿಗೆ ಮನವಿ ಮಾಡಿದರು.
ಪತ್ರಿಕೋದ್ಯಮಿ ಅಖಂಡೇಶ್ವರ ಎಂ. ಪತ್ತಾರ ಮಾತನಾಡಿ ವಿಶ್ವಕರ್ಮ ಸಮಾಜದ ಯುವಕರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಜತೆಗೆ ಕುಲಕಸುಬುಗಳನ್ನೂ ಉಳಿಸಿಕೊಂಡು ಹೋಗಬೇಕು. ಶೈಕ್ಷಣಿಕ ಪ್ರಗತಿಯಾದಲ್ಲಿ ಸಮಾಜ ರಾಜಕೀಯವಾಗಿ ಸದೃಢವಾಗಬಹುದು ಎಂದರು.
ಪತ್ರಕರ್ತ ತಾರಾನಾಥ್ ಮಾತನಾಡಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಸೇರಿ ಅನೇಕ ಕಾರ್ಯಕ್ರಮಗಳ ಲಾಭವನ್ನು ವಿಶ್ವಕರ್ಮ ಸಮಾಜದವರು ಪಡೆಯಬೇಕು ಎಂದು ಮನವಿ ಮಾಡಿದರು.
ವಿಶ್ವಕರ್ಮ ಸಮಾಜ ಸಂಘದ ಜಿಲ್ಲಾಧ್ಯಕ್ಷ ಬಸಾಪುರದ ಬಿ. ನಾಗೇಂದ್ರಾಚಾರ್, ಗೌರವಾಧ್ಯಕ್ಷ ಬಿ.ಎಲ್. ಸೀತಾರಾಮಚಾರ್, ಆಡಳಿತಾಧಿಕಾರಿ ಬಿ.ಪಿ. ಜಗನ್ನಾಥ್, ಚನ್ನಗಿರಿ ತಾಲೂಕು ಅಧ್ಯಕ್ಷ ಎಸ್. ತಿಪ್ಪೇಸ್ವಾಮಿ, ನ್ಯಾಮತಿ ತಾಲೂಕು ಅಧ್ಯಕ್ಷ ಎ.ನಾಗರಾಜಪ್ಪ, ವೀರಭದ್ರಾಚಾರ್ ಇತರರಿದ್ದರು. ಬಿ.ವಿ. ಶಿವಾನಂದ ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ ಐದು ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದರೆ, 93 ವಟುಗಳು ಉಪನಯನ ದೀಕ್ಷೆ ಸ್ವೀಕರಿಸಿದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net